ಧಮ್‌ ಇದ್ರೆ ಆರೋಪಗಳ ನ್ಯಾಯಾಂಗ ತನಿಖೆಗೆ ಸಿಎಂ ಆದೇಶಿಸಲಿ: ಸಿದ್ದರಾಮಯ್ಯ

By Kannadaprabha NewsFirst Published Feb 4, 2023, 9:00 PM IST
Highlights

ವಿಧಾನಸೌಧದ ಗೋಡೆಗಳೆಲ್ಲ ಲಂಚ ಲಂಚ ಲಂಚ ಎಂದು ಪಿಸುಗುಟ್ತಿವೆ, ವರ್ಗಾವಣೆ, ಪೋಸ್ಟಿಂಗ್‌ ಸೇರಿದಂತೆ ಎಲ್ಲದರಲ್ಲೂ ಬರೀ ಲಂಚ ಲಂಚ, ಧಮ್‌ ಕೆಲಸದಲ್ಲಿ ಇರಲಿ ಲಂಚ ಹೊಡೆಯೋದ್ರಲ್ಲಿ ಅಲ್ಲ, ಸಿಎಂ ಅರಿಯಲಿ: ಸಿದ್ದರಾಮಯ್ಯ

ಬಸವಕಲ್ಯಾಣ/ಬೀದರ್‌(ಫೆ.04): ವಿಧಾನಸೌಧದ ಗೋಡೆಗಳೆಲ್ಲ ಲಂಚ ಲಂಚ ಲಂಚ ಎಂದು ಪಿಸುಗುಟ್ಟುತ್ತಿವೆ. ಮಾತೆತ್ತಿದರೆ ತಾಕತ್ತು, ದಮ್ಮಿನ ಬಗ್ಗೆ ಮಾತನಾಡುವ ಸಿಎಂ ಬಸವರಾಜ ಬೊಮ್ಮಾಯಿಯವರ ಹಾಗೂ ನಮ್ಮ ಕಾಲದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಿ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದರು. ಅವರು ಶುಕ್ರವಾರ ಬಸವಕಲ್ಯಾಣದ ರಥ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ವಿಧಾನಸೌಧ ಗೋಡೆಗಳಿಗೆ ಕಿವಿಗೊಟ್ರೆ ಬರೀ ಲಂಚ ಲಂಚ ಲಂಚ ಎಂದು ಕೇಳಿಸುತ್ತೆ. ವರ್ಗಾವಣೆ, ಪೋಸ್ಟಿಂಗ್‌ ಸೇರಿದಂತೆ ಎಲ್ಲದರಲ್ಲೂ ಬರೀ ಲಂಚ. ಬಿಜೆಪಿ ಸರ್ಕಾರದವರು ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಕೊಳಕು ಮಾಡಿದ್ದಾರೆ, ಅವಮಾನಿಸಿದ್ದಾರೆ ಎಂದರು.

ರಾಜ್ಯದ ಇತಿಹಾಸದಲ್ಲಿ ಬಿಜೆಪಿಯಂಥ ಭ್ರಷ್ಟಸರ್ಕಾರ, ಜನವಿರೋಧಿ, ವಚನಭ್ರಷ್ಟಹಾಗೂ ಲಂಚಗುಳಿತನದ ಸರ್ಕಾರವನ್ನು ನಾನು ನೋಡಿಲ್ಲ. ಧಮ್‌ ಕೆಲಸದಲ್ಲಿ ಇರಬೇಕು ಲಂಚ ಹೊಡೆಯೋದ್ರಲ್ಲಿ ಅಲ್ಲ ಎಂಬೋದನ್ನು ಸಿಎಂ ಬೊಮ್ಮಾಯಿ ಅರಿಯಲಿ ಎಂದು ವಿರುದ್ಧ ಗುಡುಗಿದರು.

ಬಿಜೆಪಿ ಹಿರಿಯರು ನಿದ್ರೆಗೆ ಜಾರಿದ್ದರೆ, ಹೊಸಬರಿಂದ ಹಗಲುಗನಸು: ರಾಜಶೇಖರ ಪಾಟೀಲ್‌

ಗಾಂಧೀಜಿ ಕೊಂದ ಘೋಡ್ಸೆ ವಂಶಸ್ಥರು ಈ ಬಿಜೆಪಿಯವರು:

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಆರೆಸ್ಸೆಸ್ಸಿನವರಾ? ಹಿಂದು ಮಹಾಸಭಾದವರಾ? ಜನಸಂಘದವರಾ? ಅಥವಾ ಬಿಜೆಪಿಯವರಾ? ಹೇಳಿ ಎಂದು ಪ್ರಶ್ನಿಸಿದ ಅವರು ಹಿಂದು-ಮುಸ್ಲಿಂ ಸಹೋದರರಂತೆ ಬಾಳಲು ಅನುವು ಮಾಡಿಕೊಡಲಿಚ್ಚಿಸಿದ್ದ ಮಹಾತ್ಮ ಗಾಂಧಿ ಅವರನ್ನು ಕೊಂದ ಘೋಡ್ಸೆ ವಂಶಸ್ಥರು ಈ ಬಿಜೆಪಿಯವರು ಎಂದು ಕಿಡಿ ಕಾರಿದರು.

ಅಲ್ಪಸಂಖ್ಯಾತರ ಏಳ್ಗೆಗೆ 10ಸಾವಿರ ಕೋಟಿ ರು. ಅನುದಾನ ಫಿಕ್ಸ್‌:

ನಾವು ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರ ಏಳ್ಗೆಗಾಗಿ 5 ವರ್ಷದಲ್ಲಿ 10 ಸಾವಿರ ಕೋಟಿ ರು. ಅನುದಾನ ನೀಡ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವರ್ಷಕ್ಕೆ 5 ಸಾವಿರ ಕೋಟಿ ರು. ಖರ್ಚು ಮಾಡ್ತೇವೆ, ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡ್ತೇವೆ, ಪ್ರತಿ ಪಂಚಾಯತಿಗೆ 1 ಕೋಟಿ ರು. ಅನುದಾನ ಕೊಡ್ತೇವೆ. 200 ಯುನಿಟ್‌ ವಿದ್ಯುತ್‌ ಪುಕ್ಕಟೆಯಾಗಿ ಗೃಹಜ್ಯೋತಿ ಯೋಜನೆಯಡಿ ಎಲ್ಲ ಮನೆಗಳಿಗೆ ನೀಡ್ತೇವೆ. ಪ್ರತಿ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರು. ಗಳಂತೆ ವರ್ಷಕ್ಕೆ 24 ಸಾವಿರ ರು. ನೀಡುವ ಭರವಸೆ ನಮ್ಮದು ಎಂದ ಅವರು ಕೇವಲ ಎರಡು ಕಾರ್ಯಕ್ರಮಗಳಿಂದ 40 ಸಾವಿರ ಕೋಟಿ ರು. ಗಳಿಗೂ ಹೆಚ್ಚು ಅನುದಾನ ಜನತೆಯೆಡೆಗೆ ಹರಿಸಲಿದ್ದೇವೆ ಎಂದರು.

ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ 10 ಕೆ.ಜಿ ಅಕ್ಕಿಯನ್ನು ಪುಕ್ಕಟೆಯಾಗಿ ಎಲ್ಲ ಧರ್ಮ ಜಾತಿ ಜನಾಂಗದವರಿಗೆ ಪಡಿತರ ಚೀಟಿ ಮೂಲಕ ಕಲ್ಪಿಸುತ್ತೇವೆ. ನೀರಾವರಿಗೆ 2ಲಕ್ಷ ಕೋಟಿ ರು. ಖರ್ಚು ಮಾಡ್ತೇವೆ. ಎಲ್ಲ ಬಾಕಿ ಯೋಜನೆಗಳನ್ನು ಮಾಡಿ ರೈತರ ಭೂಮಿಗೆ ನೀರು ತಲುಪಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಸಂಕಲ್ಪದಂತೆ ಪ್ರಾಣಿಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್‌

ಕಾಂಗ್ರೆಸ್‌ನ ಪ್ರಣಾಳಿಕೆ ಚುನಾವಣೆಗೆ ಮಾತ್ರ ಸೀಮಿತವಾಗಿರುವದಲ್ಲ, ಅದಕ್ಕೆ ಶೇ. 100ರಷ್ಟು ಬದ್ಧರಾಗಿರುತ್ತೇವೆ. ಹೇಳಿದ್ದನ್ನೆಲ್ಲ ಜಾರಿ ಮಾಡ್ತೇವೆ. ಈ ಹಿಂದೆಯೂ ನಾವು ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ಎಂಬಿ ಪಾಟೀಲ್‌, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ್‌, ರಹೀಮ್‌ಖಾನ್‌, ಚಂದ್ರಶೇಖರ ಪಾಟೀಲ್‌, ಅರವಿಂದ ಅರಳಿ, ಭೀಮರಾವ್‌ ಪಾಟೀಲ್‌, ಮಾಜಿ ಸಚಿವ ಜಮೀರ್‌ ಅಹ್ಮದ್‌, ಡಾ. ಶರಣಪ್ರಕಾಶ ಪಾಟೀಲ್‌, ಮಾಜಿ ಶಾಸಕ ವಿಜಯಸಿಂಗ್‌, ಪ್ರಜಾಧ್ವನಿ ಉಸ್ತುವಾರಿ ಪ್ರಕಾಶ ರಾಠೋಡ, ಆನಂದ ದೇವಪ್ಪ, ಧನರಾಜ ತಾಳಂಪಳ್ಳಿ, ಮಾಲಾ ನಾರಾಯಣರಾವ್‌, ಅಜರ್‌ ಅಲಿ ನವರಂಗ, ನೀಲಕಂಠ ರಾಠೋಡ, ಶಶಿಕಾಂತ ದುರ್ಗೆ, ಶಿವರಾಜ ನರಶೆಟ್ಟಿ ತಹಸೀನ್‌ ಅಲಿ ಜಮಾದಾರ ಸೇರಿದಂತೆ ಮತ್ತಿತರು ಇದ್ದರು.

click me!