ತನ್ನನ್ನು ವಿಧಾನಪರಿಷತ್ ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸತ್ಯ. ಕಾನೂನು ಪ್ರಕಾರ ಅವರ ಮೇಲೆ ತನಿಖೆ ನಡೆದು ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಜ.05): ತನ್ನನ್ನು ವಿಧಾನಪರಿಷತ್ ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸತ್ಯ. ಕಾನೂನು ಪ್ರಕಾರ ಅವರ ಮೇಲೆ ತನಿಖೆ ನಡೆದು ಶಿಕ್ಷೆಯಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ನಗರದ ಸಚಿವ ಅಧಿಕೃತ ಸರ್ಕಾರಿ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಸಿಐಡಿ ಡಿಐವೈಎಸ್ಪಿ ಅಂಜುಮಾಲಾ ನಾಯ್ಕ್ ನೇತೃತ್ವದ ತಂಡ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.
ಕಳೆದ ತಿಂಗಳು ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಚಿವರಿಗೆ ಅಸಂಸದೀಯ ಪದ ಬಳಸಿ ನಿಂದಿಸಿದ ಆರೋಪಕ್ಕೆ ಬಿಜೆಪಿ ಸದಸ್ಯ ಸಿ.ಟಿ.ರವಿ ತುತ್ತಾಗಿದ್ದು, ಅವರ ಮೇಲೆ ಸಚಿವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಡಿ.19 ರಂದು ವಿಧಾನಪರಿಷತ್ ಸದನದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ನಿಂದಿಸಿದರು. ಹತ್ತಕ್ಕೂ ಹೆಚ್ಚು ಬಾರಿ ಅವರು ಅಸಂಸದೀಯ ಪದ ಬಳಸಿದ್ದಾರೆ. ಈ ನಿಂದನೆ ಕುರಿತು ವಿಡಿಯೋ ಹಾಗೂ ಆಡಿಯೋ ಪುರಾವೆಗಳಿವೆ. ಅಲ್ಲದೆ ಅಂದು ಸದನದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಸದಸ್ಯರೂ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್-ಸಿ.ಟಿ.ರವಿ ಕೇಸಿನ ಬಗ್ಗೆ ಸಿಐಡಿ ತನಿಖೆ ನಡೆಸಲಿ: ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಸತ್ಯ ಗೊತ್ತಾಗಲಿದೆ. ನನ್ನ ಬಳಿ ಸಾಕ್ಷ್ಯಗಳನ್ನು ನೀಡುತ್ತೇನೆ ಎಂದು ತನಿಖಾ ತಂಡಕ್ಕೆ ಸಚಿವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೂರ್ಣ ಮಾಹಿತಿ ನೀಡಿದ್ದೇನೆ-ಹೆಬ್ಬಾಳ್ಕರ್: ಸಿಐಡಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತನಿಖಾ ತಂಡಕ್ಕೆ ಘಟನೆ ಕುರಿತು ಪೂರ್ಣ ಮಾಹಿತಿ ನೀಡಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರಕರಣದ ತನಿಖೆಯೂ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತದೆ. ನನಗೆ ಅನ್ಯಾಯವಾಗಿದೆ. ಇದು ಇಡೀ ಮನುಕುಲಕ್ಕೆ ಆಗಿರುವ ಅನ್ಯಾಯ. ನನ್ನ ಜೊತೆ ಎಲ್ಲರೂ ನಿಂತುಕೊಳ್ಳಬೇಕು. ಪ್ರಕರಣವನ್ನು ಪ್ರತಿಷ್ಠೆಯಾಗಿ, ರಾಜಕೀಯವಾಗಿ ತೆಗೆದುಕೊಂಡಿಲ್ಲ. ನನಗೆ ಅನ್ಯಾಯ ಆಗಿದೆ. ಇದು ನನ್ನ ಸ್ವಾಭಿಮಾನದ ಪ್ರಶ್ನೆ. ತನಿಖೆ ಈಗಷ್ಟೇ ಆರಂಭವಾಗಿದೆ. ತನಿಖೆ ಸೂಕ್ತ ರೀತಿಯಲ್ಲಿ ನಡೆಯಲಿ. ಈ ಹಂತದಲ್ಲಿ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಎಫ್‌ಐಆರ್ ಹಾಕಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಆಶ್ಲೀಲ ಪದ ಬಳಕೆ ಸಂಬಂಧ ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನಾನು ಕೊಟ್ಟ ದೂರಿಗೆ ಇಂದಿಗೂ ಎಫ್‌ಐಆರ್ ಆಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ದೂರಿದರು. ಕಾನೂನು ಕಾಂಗ್ರೆಸ್, ಬಿಜೆಪಿಗೆ ಬೇರೆ ಬೇರೆ ಇಲ್ಲ. ನನ್ನ ವಿರುದ್ಧ ದೂರು ಕೊಟ್ರೆ ದೂರು ದಾಖಲಾಗುತ್ತೆ, ಅರೆಸ್ಟ್ ಮಾಡುವಂತಿಲ್ಲ ಆದರೂ ಅರೆಸ್ಟ್ ಮಾಡ್ತಾರೆ. ಅರೆಸ್ಟ್ ಮಾಡಿದ ಮೇಲೆ ಇಡೀ ರಾತ್ರಿ ಕಬ್ಬಿನಗದ್ದೆ, ಜಲ್ಲಿಕ್ರಷರ್, ಕಾಡಿಗೆ ಕರೆದುಕೊಂಡು ಹೋಗ್ತಾರೆ. ರಾಜ್ಯದಲ್ಲಿ ಯಾರಿಗೇ ರಕ್ಷಣೆ ಬೇಕಾದ್ರು ಪೊಲೀಸ್ ಸ್ಟೇಷನ್‌ನಲ್ಲಿ ರಕ್ಷಣೆ ಸಿಗಲ್ಲ. ಕಬ್ಬಿನಗದ್ದೆ, ಜಲ್ಲಿ ಕ್ರಷರ್‌ಗೆ ಹೋಗಬೇಕು. ಕಾಂಗ್ರೆಸ್ಸಿಗರಿಗೆ ರಕ್ಷಣೆ ಬೇಕು ಅಂದ್ರು ಕಾಡು, ಕ್ರಷರ್, ಕಬ್ಬಿನಗದ್ದೆಗೆ ಹೋಗಬೇಕು ಎಂದ ಅವರು, ನಾನು ಡಿಜಿಪಿ ಐಜಿ, ಸಿಎಂ ಎಲ್ಲರಿಗೂ ದೂರು ನೀಡಿದ್ದೇನೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವವರಿದ್ದರೇ ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಒಂದು ನ್ಯಾಯ ಮಾಡುವುದಿಲ್ಲ ಎಂದರು.
ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಲಕ್ಷ್ಮಿ- ರವಿ ಮಧ್ಯೆ ಸಂಧಾನಕ್ಕೆಈಗಲೂ ರೆಡಿ: ಹೊರಟ್ಟಿ
ಗೋ ಹತ್ಯೆ ನಿಷೇಧ ಇದೆಯಾ?: ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದಿಯೋ, ಇಲ್ವೋ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಗೋ ಹತ್ಯೆ ನಿಷೇಧ ಇದೆ ಅಂದ್ರೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಗೋ ಹತ್ಯೆ ಹೇಗಾಗುತ್ತೆ? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಬರೀ ನೇತ್ರಾವತಿ ಮಾತ್ರವಲ್ಲ, ರಾಜ್ಯದ ಉದ್ದಗಲಕ್ಕೂ ಇದೇ ಪರಿಸ್ಥಿತಿ ಇದೆ. ಧರ್ಮಸ್ಥಳ ಲಕ್ಷಾಂತರ ಭಕ್ತರು ಬರುವ ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಅನ್ನೋದು ದುಷ್ಟ ಮನಸ್ಥಿತಿಯ ಮತಾಂಧತೆ ತೋರಿಸುತ್ತೆ ಎಂದರು.