ಕೋಲಾರದಲ್ಲಿ ಎಡ ಬಲ ಅಭ್ಯರ್ಥಿಗಳ ಗುದ್ದಾಟ: ಕಾಂಗ್ರೆಸ್‌ನಲ್ಲಿ ತಳಮಳ..!

By Kannadaprabha NewsFirst Published Mar 28, 2024, 8:49 AM IST
Highlights

ಸಾಮಾನ್ಯವಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಐದು ಲೋಕಸಭಾ ಕ್ಷೇತ್ರದ ಟಿಕೆಟ್‌ ಅನ್ನು ದಲಿತರಿಗೆ ನೀಡುವ ಸಂಪ್ರದಾಯ ಅನುಸರಿಸುತ್ತಾ ಬಂದಿದೆ. ಚಾಮರಾಜನಗರ, ಕಲಬುರಗಿ ಕ್ಷೇತ್ರವನ್ನು ಬಲಗೈ ಸಮುದಾಯಕ್ಕೂ, ಕೋಲಾರ ಹಾಗೂ ಚಿತ್ರದುರ್ಗ ಕ್ಷೇತ್ರವನ್ನು ಎಡಗೈ ಸಮುದಾಯಕ್ಕೂ ಹಾಗೂ ವಿಜಯಪುರವನ್ನು ಲಂಬಾಣಿ ಅಥವಾ ಬೋವಿ ಸಮುದಾಯಕ್ಕೆ ನೀಡುತ್ತಾ ಬಂದಿದೆ.

ಬೆಂಗಳೂರು(ಮಾ.28):  ಕೋಲಾರ ಕ್ಷೇತ್ರದ ಟಿಕೆಟ್‌ ಅನ್ನು ದಲಿತ ಬಲಗೈ ಸಮುದಾಯಕ್ಕೆ ನೀಡಬೇಕು ಎಂದು ಬಂಡೆದ್ದಿರುವ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ನೇತೃತ್ವದ ಬಣದ ವಾದ ಕಾಂಗ್ರೆಸ್‌ನಲ್ಲಿ ಭಾರಿ ತಳಮಳ ಹುಟ್ಟುಹಾಕಿದೆ.
ಈ ವಾದಕ್ಕೆ ಎಡಗೈ ಸಮುದಾಯದಿಂದ ಭಾರಿ ವಿರೋಧ ಕೇಳಿ ಬಂದಿದ್ದು, ಹೈಕಮಾಂಡ್‌ ಈ ವಾದಕ್ಕೆ ಮನ್ನಣೆ ನೀಡಿದರೆ ಸಾಮಾಜಿಕ ನ್ಯಾಯಕ್ಕೆ ಚ್ಯುತಿ ಬರುವುದು ಮಾತ್ರವಲ್ಲದೆ ರಾಜ್ಯದಲ್ಲಿ ಸುಮಾರು 65 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಡಗೈ ಸಮುದಾಯದ ಸಿಟ್ಟನ್ನು ಕಾಂಗ್ರೆಸ್‌ ಎದುರಿಸಬೇಕಾಗಬಹುದು ಎಂಬ ನೇರ ಎಚ್ಚರಿಕೆಯೂ ಕಾಂಗ್ರೆಸ್‌ಗೆ ರವಾನೆಯಾಗಿದೆ.

ಕೋಲಾರ ಕ್ಷೇತ್ರದ ಟಿಕೆಟ್‌ ಎಡಗೈ ಸಮುದಾಯಕ್ಕೆ ಸೇರಿದ ಸಚಿವ ಮುನಿಯಪ್ಪ ಅವರ ಕುಟುಂಬಕ್ಕೆ ನೀಡದಿದ್ದರೂ ಚಿಂತೆಯಿಲ್ಲ. ಆದರೆ, ಬೇರೆ ಯಾರಾದರೂ ಸರಿ ಎಡಗೈ ಸಮುದಾಯದವರಿಗೆ ನೀಡಬೇಕು. ಎಡಗೈಗೆ ಮೀಸಲಾಗಿರುವ ಈ ಕ್ಷೇತ್ರದ ಟಿಕೆಟ್‌ ಅನ್ನು ಯಾವ ಕಾರಣಕ್ಕೂ ಬಲಗೈ ಸಮುದಾಯಕ್ಕೆ ನೀಡಬಾರದು ಎಂದು ವಾದಿಸಿದೆ.

ಕೋಟಿ ಕೋಟಿ ಹಣ ಸಾಗಿಸಿದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಸಾಮಾನ್ಯವಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಐದು ಲೋಕಸಭಾ ಕ್ಷೇತ್ರದ ಟಿಕೆಟ್‌ ಅನ್ನು ದಲಿತರಿಗೆ ನೀಡುವ ಸಂಪ್ರದಾಯ ಅನುಸರಿಸುತ್ತಾ ಬಂದಿದೆ. ಚಾಮರಾಜನಗರ, ಕಲಬುರಗಿ ಕ್ಷೇತ್ರವನ್ನು ಬಲಗೈ ಸಮುದಾಯಕ್ಕೂ, ಕೋಲಾರ ಹಾಗೂ ಚಿತ್ರದುರ್ಗ ಕ್ಷೇತ್ರವನ್ನು ಎಡಗೈ ಸಮುದಾಯಕ್ಕೂ ಹಾಗೂ ವಿಜಯಪುರವನ್ನು ಲಂಬಾಣಿ ಅಥವಾ ಬೋವಿ ಸಮುದಾಯಕ್ಕೆ ನೀಡುತ್ತಾ ಬಂದಿದೆ.

ಆದರೆ, ಈ ಬಾರಿ ಮೂರು ಕ್ಷೇತ್ರಗಳನ್ನು (ವಿಜಯಪುರ- ರಾಜು ಅಲಗೂರು, ಕಲಬುರಗಿ -ರಾಧಾಕೃಷ್ಣ ಮತ್ತು ಚಾಮರಾಜನಗರ- ಬಹುತೇಕ ಸುನೀಲ್‌ ಬೋಸ್‌) ಬಲಗೈಗೆ ನೀಡಿದೆ. ಹಾಗೂ ಘೋಷಿತ ಕ್ಷೇತ್ರಗಳ ಪೈಕಿ ಚಿತ್ರದುರ್ಗ (ಬಿ.ಎನ್. ಚಂದ್ರಪ್ಪ) ಎಡಗೈ ಸಮುದಾಯಕ್ಕೆ ದೊರಕಿದೆ. ಹೀಗಾಗಿ ಕೋಲಾರವನ್ನು ಎಡಗೈಗೆ ನೀಡಬೇಕು. ಆಗ ಮಾತ್ರ ಎರಡು ಕ್ಷೇತ್ರ ಎಡಗೈಗೆ ದೊರಕಿದಂತೆ ಆಗುತ್ತದೆ.

Lok Sabha Election 2024: ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಗ್ಯಾರಂಟಿ: ಸಿದ್ದರಾಮಯ್ಯ

ರಮೇಶ್‌ ಕುಮಾರ್‌ ಬಣದ ಆಗ್ರಹದಂತೆ ಕೋಲಾರವನ್ನು ಬಲಗೈಗೆ ನೀಡಿದರೆ ಆಗ ಐದು ಕ್ಷೇತ್ರಗಳ ಪೈಕಿ ನಾಲ್ಕನ್ನು ಬಲಗೈಗೆ ಹಾಗೂ ಒಂದನ್ನು ಎಡಗೈ ಸಮುದಾಯಕ್ಕೆ ನೀಡದಂತೆ ಆಗುತ್ತದೆ. ಇದನ್ನು ಎಡಗೈ ಸಮುದಾಯ ಒಪ್ಪಲು ಸಾಧ್ಯವೇ ಇಲ್ಲ.

ಇದಕ್ಕೆ ಪರ್ಯಾಯ ರೂಪಿಸಬೇಕಾದರೆ ಆಗ ಇನ್ನೂ ಘೋಷಿತವಾಗದ ಚಾಮರಾಜನಗರ ಕ್ಷೇತ್ರದಲ್ಲಿ ಎಡಗೈಗೆ ನೀಡಿ ಕೋಲಾರವನ್ನು ಬಲಗೈಗೆ ನೀಡಬೇಕು. ಆಗ ಮತ್ತೊಬ್ಬ ಸಚಿವ ಮಹದೇವಪ್ಪ ಅವರ ಪುತ್ರ ಸುನೀಲ್‌ ಬೋಸ್‌ಗೆ ಟಿಕೆಟ್‌ ತಪ್ಪುತ್ತದೆ. ಈ ಹಂತದಲ್ಲಿ ಹೈಕಮಾಂಡ್‌ ಇಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಕೋಲಾರದ ಟಿಕೆಟ್‌ ಬಹುತೇಕ ಎಡಗೈ ಸಮುದಾಯಕ್ಕೆ ನೀಡಬೇಕಾದ ಅನಿವಾರ್ಯತೆ ಹೈಕಮಾಂಡ್‌ಗೆ ಇದೆ.

click me!