
ಬಾಗಲಕೋಟೆ (ಡಿ.01): ಸಿಎಂ ಕುರ್ಚಿ ವಿವಾದದ ಬಗ್ಗೆ ಹೆಚ್ಚು ಅಭಿಪ್ರಾಯ ವ್ಯಕ್ತಪಡಿಸೋದು ಅನಾವಶ್ಯಕ ಎಂದಿರುವ ಮಾಜಿ ಸಚಿವ ಲಕ್ಷ್ಮಣ ಸವದಿ, ಬಿಜೆಪಿ ಹೈಕಮಾಂಡ್ ಮಾತನ್ನು ಆ ಪಕ್ಷದ ನಾಯಕರು ಯಾವ ರೀತಿ ಪಾಲನೆ ಮಾಡ್ತಾರೆ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಾತನ್ನು ನಮ್ಮ ನಾಯಕರು ಯಾವ ರೀತಿ ಪಾಲನೆ ಮಾಡುತ್ತಾರೆ ಎಂಬು ತುಲನೆ ಮಾಡಿ ಎಂದು ಸಲಹೆ ನೀಡಿದರು.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯಲ್ಲಿ ಒಂದು ಅವಲೋಕನ ಮಾಡಬೇಕು. ಅದೇನೇ ನಿರ್ದೇಶನ ಬಂದರೂ ಬಿಜೆಪಿಯಲ್ಲಿ ಉಚ್ಛಾಟನೆ ಹಂತಕ್ಕೆ ಹೋಗಿರೋದನ್ನು ನೋಡಿದ್ದೀನಿ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಏನಿದೆ ಅಂತ ನಮ್ಮ ಮುಂದೆ ಪುನರುಚ್ಛರಣೆ ಮಾಡಿ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಂಡರು.
ರಾಷ್ಟ್ರಪತಿ ಆಡಳಿತ ಹೇರಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿ, ಅಲ್ಲಾ ರೀ ಹಿಂದಿನ ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಹೇಗೆ ಆಡಳಿತ ನಡೆಸಿತ್ತು ಅನ್ನೋದು ಗೊತ್ತಿದೆ. ನಮ್ಮ ಆಡಳಿತ ನಿಂತು ಹೋಗಿಲ್ಲ, ಆಡಳಿತ ವೇಗದಲ್ಲಿದಲ್ಲಿ ನಡೆಯುತ್ತಿದೆ. ನಿಂತಿದ್ದು ವಿರೋಧ ಪಕ್ಷದ ಚಟುವಟಿಕೆ. ಅದು ಅವರಿಗೆ ಆಗುತ್ತಿಲ್ಲ. ಸರ್ಕಾರದ ಲೋಪಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುವಲ್ಲಿ ವಿರೋಧ ಪಕ್ಷ ಶಕ್ತಿಹೀನ ಆಗಿದೆ. ರಾಜ್ಯದಲ್ಲಿ ವಿರೋಧ ಪಕ್ಷ ಎಲ್ಲಿದೆ, ಬಿಜೆಪಿ ಮನೆಯೊಂದು ಐದು ಬಾಗಿಲಾಗಿದೆ. ಬಿಜೆಪಿಯವರು ತಮ್ಮ ಹುಳುಕು ಮುಚ್ಚಿಕೊಳ್ಳಲು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರಷ್ಟೇ ಎಂದರು.
ಅಧಿಕಾರ ಹಸ್ತಾಂತರ ಮಾಡದಿದ್ದರೆ ಡಿಕೆಶಿ ಬಿಜೆಪಿಗೆ ಹೋಗ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸವದಿ ಉತ್ತರಿಸುವಾಗ ಮಧ್ಯ ಪ್ರವೇಶಿಸಿದ ಎಚ್.ಕೆ. ಪಾಟೀಲ, ಹುಚ್ಚು ತನದ ಮಾತು. ಅನಾವಶ್ಯಕವಾಗಿ ಉದ್ಭ ಮಾಡುತ್ತಿದ್ದಾರೆ. ನಮ್ಮ ಯಾವ ಶಾಸಕ, ಕಾರ್ಯಕರ್ತ ಹೇಳಿದ್ದಾನೆ ಅನ್ನೋದು ಸಾಕ್ಷಿ ನೀಡಿ, ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ ಎಂದ ಸ್ವತಃ ಡಿಕೆಶಿ ಅವರೇ ಹೇಳಿದ್ದಾರೆ. ಉಸಿರಾಡುವರಗೂ ಕಾಂಗ್ರೆಸ್ ನಲ್ಲಿ ಇರ್ತಿನಿ ಎಂದು ಹೇಳಿದ್ದಾರೆ.ಇನ್ನು ಯಾರ ಹೇಳಬೇಕು ಹೇಳಿ, ಬೇರೆಯವರ ಮಾತಿಗೆ ಬೆಲೆ ಕೊಡಬೇಡಿ ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.