
ಶಿವಮೊಗ್ಗ (ಡಿ.01): ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಇಂದಿನ ರಾಜಕಾರಣ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಹಲವು ಇಲಾಖೆಗಳು ಶೇ.10ರಷ್ಟು ಕೂಡ ಅಭಿವೃದ್ಧಿ ಮಾಡಲಾಗದ ದಯನೀಯ ಸ್ಥಿತಿಯಲ್ಲಿವೆ. ಜನಸಾಮಾನ್ಯರ ಮೇಲೆ ದೊಡ್ಡ ಮಟ್ಟದ ತೆರಿಗೆ ವಿಧಿಸಿ, ತೆರಿಗೆ ಸಂಗ್ರಹದಲ್ಲಿಯೂ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ತೆರಿಗೆ ಸಂಗ್ರಹದಲ್ಲಿ 15,000 ಕೋಟಿ ಕಡಿತವಾಗುತ್ತದೆ ಎಂಬ ಮಾಹಿತಿ ಇದೆ. ಶಿಕ್ಷಣ ಇಲಾಖೆಯಲ್ಲಿ 65,000 ಶಿಕ್ಷಕರ ನೇಮಕಾತಿಯಾಗಿಲ್ಲ. ಹಲವಾರು ಶಾಲೆಗಳಲ್ಲಿ ಒಬ್ಬ ಶಿಕ್ಷಕನನ್ನು ಬಿಟ್ಟರೆ ಇತರೆ ಶಿಕ್ಷಕರು ಇಲ್ಲ. 1,000 ರು. ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವುದಾಗಿ ಹೇಳಿದ್ದಾರೆ ಹಣ ಎಲ್ಲಿದೆ ನೋಡಬೇಕು. ಸಿಎಸ್ಆರ್ ಫಂಡ್ ಹೂಡಿಕೆ ಮಾಡಲು ರಾಜ್ಯದ ಕೈಗಾರಿಕೆಗಳಿಗೆ ಕೊಡಬೇಕು. ಸಿಎಸ್ಆರ್ ಫಂಡ್ ನಿಂದ ಸರ್ಕಾರಿ ಶಾಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನುತ್ತಿದ್ದಾರೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ನೀರಾವರಿ ಯೋಜನೆ ಮಾಡುವಲ್ಲಿ ಹಿಂದಿದ್ದೇವೆ. ನೀರಾವರಿ ಸಚಿವರು ವೈಯಕ್ತಿಕವಾಗಿ ಬೆಂಗಳೂರಿನಲ್ಲಿ ಏನು ಸಂಪಾದನೆ ಮಾಡಬಹುದು ಎಂಬ ಆಸಕ್ತಿ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ಸಿಎಂ ಡಿಸಿಎಂ ಬರುವ ಟೀಕೆಗಳನ್ನು ಗಮನಿಸಿ ತಮ್ಮ ಕಾರ್ಯ ವೈಖರಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು. ಸಿಎಂ ಸ್ಥಾನ ಹಂಚಿಕೆ ಇನ್ನು ಎರಡು ಮೂರು ತಿಂಗಳು ಮುಂದೆ ಹಾಕಿದ್ದಾರೆ. ಇವರು ಮಾತು ಕೊಡದಿದ್ದರೆ ಎರಡುವರೆ ವರ್ಷ ವಿಷಯ ಯಾಕೆ ಬಂತು? ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿ ಇದ್ದಾಗ ಎಂದೂ ಕೇಂದ್ರದ ಮುಂದೆ ಕೈ ಒಡ್ಡಲಿಲ್ಲ. ಕೊಡಗು ನೆರೆ ಹಾವಳಿಯಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದೆ, ಬಾಡಿಗೆ ಮನೆಯಲ್ಲಿ ಇದ್ದವರಿಗೆ ಪ್ರತಿ ತಿಂಗಳು 10,000 ಬಾಡಿಗೆ ಹಣ ಕೊಟ್ಟಿದ್ದೇವೆ, ತುಂಗಭದ್ರಾ ಜಲಾಶಯದ ಗೇಟ್ ನಿರ್ಮಾಣ ಮಾಡಿದ್ದಕ್ಕೆ 12 ಕೋಟಿ ರು. ಪೆಂಡಿಂಗ್ ಮಾಡಿದ್ದಾರೆ. ಯಾರು ಮುಖ್ಯಮಂತ್ರಿ ಆಗ್ತಾರೆ ಅವರಿಗೆ ಸೇರಿದ್ದು, 140 ಸ್ಥಾನ ಗೆದ್ದಿದ್ದಕ್ಕೆ ಏನು ಮಾಡುತ್ತಿದ್ದಾರೆ. ಜನರಿಗೆ ನೀವು ಏನು ಕೊಡುತ್ತಿದ್ದೀರಿ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಪೊಲೀಸರು ಆ್ಯಕ್ಟೀವ್ ಆಗುತ್ತಾರೆ. ಮೊನ್ನೆ ಬೆಂಗಳೂರಿನಲ್ಲಿ ಏಳು ಕೋಟಿ ರು. ದರೋಡೆ ಆಯಿತು. ಬಿಜಾಪುರದಲ್ಲಿ ಆಯ್ತು ಕಲ್ಬುರ್ಗಿಯಲ್ಲಿ ಆಯ್ತು, ಈ ಪ್ರಕರಣದಲ್ಲಿ ಪೊಲೀಸರ ಏನು ಸಾಧನೆ ಇಲ್ಲ. ಕಾರು ಮಾರಿದ ಮಾಲೀಕ ಜಿಪಿಎಸ್ ಅಳವಡಿಸಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನು ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದಕರಿಗೆ ಫೋನ್ ಕೊಟ್ಟಿದ್ದರು. ನಶೆ ಬರುವ ಡ್ರಗ್ಸ್ ತೆಗೆದುಕೊಂಡು ಜೈಲಿನಲ್ಲಿ ಇದ್ದವರು ಕುಣಿದು ಕುಪ್ಪಳಿಸಿದ್ದು ನೋಡಿದ್ದೇವೆ ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಪ್ರಮುಖರಾದ ಎಸ್.ಎಲ್.ಭೋಜೇಗೌಡ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಅಪ್ಪಾಜಿಗೌಡ ಸೇರಿದಂತೆ ಹಲವರು ಇದ್ದರು.
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ. ಕೇಂದ್ರ ಸಂಪುಟದಲ್ಲಿ ವಿಶ್ವೇಶ್ವರಯ್ಯ ಕಾರ್ಖಾನೆ ಬಂಡವಾಳ ಹಿಂತೆಗೆತ ತೀರ್ಮಾನ ಆಗಿದೆ. ಈಗ ಕಾರ್ಖಾನೆ ಆರಂಭವಾದರೆ ಮುಂದಿನ 50 ವರ್ಷದವರೆಗೆ ಯಾವುದೇ ಅಡೆತಡೆ ಇಲ್ಲದೆ ಕಾರ್ಖಾನೆ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಐಎಸ್ಎಲ್ ಕಾರ್ಖಾನೆಗೆ ಗಣಿ ಇದ್ದು ತಾಂತ್ರಿಕ ಮತ್ತು ಕಾನೂನಾತ್ಮಕ ತೊಡಕಿದೆ. SAIL ನವರು ರೈಲ್ವೆ ರಕ್ಷಣಾ ಇಲಾಖೆ ಸೇರಿದಂತೆ ಮೂರು ವಿಭಾಗಗಳಿಗೆ ಉತ್ಪಾದನೆ ಮಾಡಲು ಡಿಪಿಆರ್ ಸಿದ್ಧವಾಗಿದೆ ಎಂದರು. ಸ್ವಾಮೀಜಿಗಳ ಬೆಂಬಲ ಇಲ್ಲದೆ ಇದ್ದಿದ್ದರೆ ದೇವೇಗೌಡರು ಸಿಎಂ ಆಗುತ್ತಿರಲಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪತ್ರಿಕ್ರಿಯಿಸಿದ ಅವರು, ದೇವೇಗೌಡರು ತಮ್ಮ ಶ್ರಮದಿಂದ ಮುಖ್ಯಮಂತ್ರಿ ಆಗಿದ್ದಾರೆ. ಇವರ್ಯಾರು ಚರ್ಚೆ ಮಾಡುವ ನೈತಿಕತೆ ಹೊಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.