ಲಗ್ಗೆರೆ ನಾರಾಯಣಸ್ವಾಮಿ, ನಂಜುಂಡಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

Published : Apr 23, 2023, 06:42 AM IST
ಲಗ್ಗೆರೆ ನಾರಾಯಣಸ್ವಾಮಿ, ನಂಜುಂಡಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

ಸಾರಾಂಶ

ಬಿ.ಆರ್‌. ನಂಜುಂಡಪ್ಪ ಹಾಗೂ ಬಿಜೆಪಿ ನಾಯಕ, ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಪತಿ ಲಗ್ಗೆರೆ ನಾರಾಯಣಸ್ವಾಮಿ ಅವರು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಆಗಿದ್ದಾರೆ. 

ಬೆಂಗಳೂರು (ಏ.23): ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ನಾಯಕ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಬಿ.ಆರ್‌. ನಂಜುಂಡಪ್ಪ ಹಾಗೂ ಬಿಜೆಪಿ ನಾಯಕ, ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಪತಿ ಲಗ್ಗೆರೆ ನಾರಾಯಣಸ್ವಾಮಿ ಅವರು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಆಗಿದ್ದಾರೆ. ಇದೇ ವೇಳೆ ಬಿಬಿಎಂಪಿ ಮಾಜಿ ಮೇಯರ್‌ ಎನ್‌. ಶಾಂತಕುಮಾರಿ ಅವರು ಸಹ ಪಕ್ಷ ಸೇರ್ಪಡೆಯಾದರು. 

ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಅವರು ಮೂಡಲಪಾಳ್ಯ ಹಾಗೂ ಮಾರುತಿ ಮಂದಿರ ವಾರ್ಡ್‌ಗಳಿಂದ ಪಾಲಿಕೆ ಸದಸ್ಯರಾಗಿ ಹಲವು ಬಾರಿ ಆಯ್ಕೆಯಾಗಿದ್ದರು. ಬಿಬಿಎಂಪಿ ಉಪಮೇಯರ್‌, ಮೇಯರ್‌ ಆಗಿಯೂ ಕೆಲಸ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಸಂಸದ ಡಿ.ಕೆ. ಸುರೇಶ್‌, ರಾಜರಾಜೇಶ್ವರಿನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು.

ಶೆಟ್ಟರ್‌, ಸವದಿ ಸೋಲಿಸುವ ಹೊಣೆ ಯಡಿಯೂರಪ್ಪಗೆ: ಇಬ್ಬರ ಕ್ಷೇತ್ರಕ್ಕೂ ಹೋಗಿ ಪ್ರಚಾರಕ್ಕೆ ಶಾ ಸೂಚನೆ

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಆರ್‌. ನಂಜುಂಡಪ್ಪ ಮಾತನಾಡಿ, ಕ್ಷೇತ್ರದಲ್ಲಿನ ಭ್ರಷ್ಟಾಚಾರ, ದಬ್ಬಾಳಿಕೆ, ಅಕ್ರಮಗಳನ್ನು ನೋಡಿ ಸಾಕಾಗಿದೆ. ಸುಳ್ಳು ಹೇಳಿ ವಂಚಿಸುವ ಕಪಟತನದಿಂದ ಬೇಸತ್ತಿದ್ದೇವೆ. ಕ್ಷೇತ್ರದಲ್ಲಿ ಶಾಂತಿ ವಾತಾವರಣ, ಭ್ರಷ್ಟಾಚಾರ ರಹಿತ ಆಡಳಿತ ಬರಬೇಕಾದರೆ ಕಾಂಗ್ರೆಸ್‌ ಬೆಂಬಲಿಸಬೇಕು ಎಂಬ ನಿರ್ಧಾರದಿಂದ ಪಕ್ಷ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು. ಇನ್ನು ಇದೇ ವೇಳೆ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿ ಕೆಲಸ ಮಾಡಿದ್ದ ಲಗ್ಗೆರೆ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಹೋರಾಟ ಅಭ್ಯರ್ಥಿಗೆ ಮತ, ಕಾಣಿಕೆ ನೀಡಿ: ರಾಜರಾಜೇಶ್ವರಿನಗರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಎಸ್‌ಯುಸಿಐ(ಸಿ) ಅಭ್ಯರ್ಥಿಗಳು ಶನಿವಾರ ‘ಹೋರಾಟದ ಅಭ್ಯರ್ಥಿಗೆ ನಿಮ್ಮ ಮತ, ಹೋರಾಟದ ಪಕ್ಷಕ್ಕೆ ನಿಮ್ಮ ಕಾಣಿಕೆ’ ಎಂಬ ವಿನೂತನ ಪ್ರಚಾರ ಮಾಡಿದರು. ರಾಜರಾಜೇಶ್ವರಿನಗರ ಕ್ಷೇತ್ರದ ಅಭ್ಯರ್ಥಿ ವಿ.ಜ್ಞಾನಮೂರ್ತಿ ಮತ್ತು ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿ ಟಿ.ಸಿ.ರಮಾ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮತಯಾಚಿಸಿದರು. ಯಶವಂತಪುರ ಮಾರುಕಟ್ಟೆಹಾಗೂ ರಾಜಾಜಿನಗರದ ರಾಮಮಂದಿರ ಬಡಾವಣೆ ಬಳಿ ಪಕ್ಷಕ್ಕೆ ನಿಮ್ಮ ಮತ ಹಾಗೂ ಹೋರಾಟದ ಕಾಣಿಕೆ ಎರಡೂ ನೀಡಬೇಕು ಎಂದು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.

ಎಸ್‌ಯುಸಿಐ(ಸಿ) ಪಕ್ಷ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ದೇಶಾದ್ಯಂತ ಹೋರಾಟಗಳನ್ನು ಕಟ್ಟಿಬೆಳೆಸುತ್ತಿರುವ ಪಕ್ಷವಾಗಿದೆ. ಈ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಹಣ ನೀಡುವುದಿಲ್ಲ. ಬದಲಾಗಿ ತನ್ನ ಹೋರಾಟಗಳಿಗೆ ಜನರಿಂದ ಹಣವನ್ನು ಸಂಗ್ರಹಿಸುತ್ತದೆ. ಹೀಗಾಗಿ ಈ ಚುನಾವಣೆಗೂ ಸಹ ಜನರೇ ಕಾಣಿಕೆ ನೀಡಬೇಕು ಎಂದು ಮನವಿ ಮಾಡಿ ಪ್ರಚಾರ ಮಾಡಿದರು. ಎರಡೂ ಕ್ಷೇತ್ರಗಳಲ್ಲಿ ಈ ವಿನೂತನ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇನ್ನು ಪ್ರಚಾರ ಅಬ್ಬರ: ಇಂದಿನಿಂದ ಎಲ್ಲ ಪಕ್ಷಗಳ ಮತಬೇಟೆ ಬಿರುಸು

ರಾಜ್ಯದಾದ್ಯಂತ 14 ಕಡೆಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷದ ಅಭ್ಯರ್ಥಿಗಳು ಯಾರೂ ಸಹ ದೊಡ್ಡ ಮೊತ್ತದ ಸ್ವಂತ ಆಸ್ತಿಯನ್ನು ಹೊಂದಿಲ್ಲ. ಹೋರಾಟದ ಜೀವನವೇ ಅವರ ಆಸ್ತಿ. ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ರೈತ, ಕಾರ್ಮಿಕರ ಸಮಸ್ಯೆಗಳ ವಿರುದ್ಧ ಪ್ರಬಲ ಜನಾಂದೋಲನ ಮುನ್ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳು ಚುನಾವಣೆಯ ವೆಚ್ಚವನ್ನು ಜನರು ನೀಡುವ ಹಣ ಸಹಾಯದಿಂದಲೇ ಭರಿಸುತ್ತಿದ್ದಾರೆ ಹಾಗೂ ಜನರ ಬಳಿ ಮನವಿ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ