ಇನ್ನು ಪ್ರಚಾರ ಅಬ್ಬರ: ಇಂದಿನಿಂದ ಎಲ್ಲ ಪಕ್ಷಗಳ ಮತಬೇಟೆ ಬಿರುಸು

By Kannadaprabha News  |  First Published Apr 23, 2023, 5:22 AM IST

ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಣ ರಂಗೇರಿದೆ. ನಾಮಪತ್ರ ವಾಪಸಿಗೆ ಸೋಮವಾರ ಅಂತಿಮ ದಿನವಾಗಿದ್ದು, ಅಂದು ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಲೆಕ್ಕ ಪಕ್ಕಾ ಆಗಲಿದೆ. ಮೇ 10ರ ಮತದಾನ ದಿನಾಂಕಕ್ಕೆ ಇನ್ನು ಕೇವಲ 17 ದಿನಗಳಷ್ಟೇ ಬಾಕಿ ಇದ್ದು, ಎಲ್ಲಾ ಪ್ರಮುಖ ಪಕ್ಷಗಳು ಇಂದಿನಿಂದ ಮತಬೇಟೆ ಬಿರುಸುಗೊಳಿಸುತ್ತಿವೆ. ಅದರ ವಿವರ ಇಲ್ಲಿದೆ.


ಬೆಂಗಳೂರು (ಏ.23): ವಿಧಾನಸಭಾ ಚುನಾವಣೆ ಪ್ರಚಾರ ಭಾನುವಾರದಿಂದ ಕಳೆಗಟ್ಟಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಜನವಾಹಿನಿ’ ಹೆಸರಲ್ಲಿ ಭರ್ಜರಿ ರೋಡ್‌ ಶೋ ಪ್ರಾರಂಭಿಸಲಿದ್ದಾರೆ. ಭಾನುವಾರ ಬೆಳಗ್ಗೆ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರೋಡ್‌ ಶೋ ಕೈಗೊಳ್ಳುವ ಬಸವರಾಜ ಬೊಮ್ಮಾಯಿ ಅವರು ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

ಯಲಹಂಕ ವಿಧಾನಸಭಾ ಕ್ಷೇತ್ರದಿಂದ ರೋಡ್‌ಶೋ ಪ್ರಾರಂಭವಾಗಲಿದೆ. ಮೊದಲ ದಿನ ಯಲಹಂಕ ಕ್ಷೇತ್ರದ ಬಳಿಕ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿ ಮರುದಿನ ರೋಡ್‌ಶೋ ಮುಂದುವರಿಸಲಿದ್ದಾರೆ. ಎರಡನೇ ದಿನ ಸೋಮವಾರದಂದು ದಾವಣಗೆರೆಯಿಂದ ರೋಡ್‌ಶೋ ಆರಂಭವಾಗಲಿದ್ದು, ಹರಿಹರ, ರಾಣೆಬೆನ್ನೂರು, ಹಾವೇರಿ, ಬಂಕಾಪುರ, ಸವಣೂರು, ಶಿಗ್ಗಾವಿ, ಕುಂದಗೋಳದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. 

Tap to resize

Latest Videos

ಲಿಂಗಾಯತ ಡ್ಯಾಂ ಒಡೆವ ಭ್ರಮೆಯಲ್ಲಿ ಡಿಕೆಶಿ: ಸಿಎಂ ಬೊಮ್ಮಾಯಿ ಟಾಂಗ್‌

ಅಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ರೋಡ್‌ ಶೋನ ಮೂರನೇ ದಿನವಾದ ಏ.25ರಂದು ಹುಬ್ಬಳ್ಳಿಯಿಂದ ಪ್ರಚಾರ ಕಾರ್ಯ ಆರಂಭವಾಗಲಿದೆ. ಹುಬ್ಬಳ್ಳಿ, ಕಿತ್ತೂರು, ಖಾನಾಪುರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೈಲಹೊಂಗಲ, ಸವದತ್ತಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಏ.26ರಂದು ಯಮಕನಮರಡಿ, ಚಿಕ್ಕೋಡಿ, ನಿಪ್ಪಾಣಿ, ಅರಬಾವಿ, ಗೋಕಾಕ್‌, ಅಥಣಿ, ರಾಯಭಾಗ, ರಾಮದುರ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. 

ಏ.27ರಂದು ಶಿಗ್ಗಾವಿಯಲ್ಲಿ ಪ್ರಚಾರ ನಡೆಸಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಏ.28ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕಾಂಗ್ರೆಸ್‌ದು ಗ್ಯಾರಂಟಿ ಕಾರ್ಡಲ್ಲ, ವಿಸಿಟಿಂಗ್‌ ಕಾರ್ಡ್‌: ಸಿಎಂ ಬೊಮ್ಮಾಯಿ ವ್ಯಂಗ್ಯ

ಭಾನುವಾರದಿಂದ ಚುನಾವಣಾ ರೋಡ್‌ ಶೋಗೆ ತೆರಳುತ್ತೇನೆ. ಯಲಹಂಕ ಕ್ಷೇತ್ರದಿಂದ ರೋಡ್‌ಶೋ ಆರಂಭವಾಗಲಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಸೇರಿದಂತೆ ಇತರೆಡೆಗಳಲ್ಲಿ ಪ್ರಚಾರ ನಡೆಸಲಾಗುವುದು. ನಂತರ ಬೆಳಗಾವಿ ವಿಭಾಗ, ಕಲಬುರಗಿ ವಿಭಾಗ ಮತ್ತು ಮೈಸೂರು ವಿಭಾಗದಲ್ಲಿಯೂ ರೋಡ್‌ ಶೋಗಳನ್ನು ನಡೆಸಲಿದ್ದೇನೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!