ಕಾಲ್ತುಳಿತ ಪ್ರಕರಣ: ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಕ್ರಮ: ಸಂಪುಟ ಸಭೆಯಲ್ಲಿ ತೀರ್ಮಾನ

Published : Jul 25, 2025, 09:10 AM ISTUpdated : Jul 26, 2025, 06:28 AM IST
RCB victory celebration

ಸಾರಾಂಶ

ಸಿವಿಲ್‌ ಹಾಗೂ ಕ್ರಿಮಿನಲ್‌ ಕೋಡ್‌ ಅನುಸಾರವಾಗಿ ವರದಿಯಲ್ಲಿ ಉಲ್ಲೇಖಿಸಿರುವ ನಾಲ್ಕು ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ವಹಿಸಲಾಗುವುದು.

ಬೆಂಗಳೂರು (ಜು.25): ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಸಂಬಂಧ ನ್ಯಾ.ಮೈಕೆಲ್‌ ಕುನ್ಹಾ ಆಯೋಗದ ವರದಿ ಆಧರಿಸಿ ಕೆಎಸ್‌ಸಿಎ, ಆರ್‌ಸಿಬಿ, ಆರ್‌ಸಿಎಸ್‌ಪಿಎಲ್‌ ಮತ್ತು ಡಿಎನ್‌ಎ ಎಂಟರ್‌ಟೈನ್ಮೆಂಟ್‌ ನೆಟ್‌ವರ್ಕ್ಸ್‌ ಸಂಸ್ಥೆಗಳು ಮತ್ತು ಅವುಗಳ ಆರು ಪದಾಧಿಕಾರಿಗಳು ಹಾಗೂ ಐವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಯನ್ನೂ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕುನ್ಹಾ ವರದಿಯನ್ನು ಸುದೀರ್ಘ ಚರ್ಚೆ ಬಳಿಕ ಒಪ್ಪಿ ಅಂಗೀಕರಿಸಲಾಗಿದ್ದು, ಜೊತೆಗೆ ವರದಿಯಲ್ಲಿನ ಶಿಫಾರಸುಗಳ ಆಧಾರದಲ್ಲಿ ನಾಲ್ಕು ಖಾಸಗಿ ಸಂಸ್ಥೆಗಳು, ಅವುಗಳ ಆರು ಮಂದಿ ಪದಾಧಿಕಾರಿಗಳು ಮತ್ತು ಐವರು ಪೊಲೀಸರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನಾತ್ಮಕ ಕ್ರಮಕ್ಕೆ ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ವಿವರಣೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಜೂ.4ರಂದು ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ದುರ್ಘಟನೆ ವಿಚಾರಣೆಗೆ ನೇಮಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾ. ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಇತ್ತೀಚೆಗೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಒಪ್ಪಿ ಅಂಗೀಕರಿಸಲಾಗಿದೆ.

ವರದಿಯಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳ ವಿರುದ್ಧ ಹಾಗೂ ವ್ಯಕ್ತಿಗತವಾಗಿ ಪ್ರಸ್ತಾಪಿಸಿರುವ ಸಂಸ್ಥೆಗಳ ವಿವಿಧ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲೂ ಸಂಪುಟ ಅನುಮತಿ ನೀಡಿದೆ ಎಂದು ತಿಳಿಸಿದರು.

ಯಾರ್‍ಯಾರ ವಿರುದ್ಧ ಕ್ರಮ?: ಸಿವಿಲ್‌ ಹಾಗೂ ಕ್ರಿಮಿನಲ್‌ ಕೋಡ್‌ ಅನುಸಾರವಾಗಿ ವರದಿಯಲ್ಲಿ ಉಲ್ಲೇಖಿಸಿರುವ ನಾಲ್ಕು ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ವಹಿಸಲಾಗುವುದು. ವ್ಯಕ್ತಿಗತವಾಗಿ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ.ಶಂಕರ್, ಮಾಜಿ ಖಜಾಂಚಿ ಜಯರಾಮ್‌ ಇ.ಎಸ್, ಆರ್‌ಸಿಎಸ್‌ಪಿಎಲ್‌ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವೆಂಕಟವರ್ಧನ್, ಉಪಾಧ್ಯಕ್ಷ ಸುನಿಲ್‌ ಮಾಥುರ್‌ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

ಘಟನೆ ಹಿನ್ನೆಲೆಯಲ್ಲಿ ಅಮಾನತಿನಲ್ಲಿರುವ ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಪಶ್ಚಿಮ) ವಿಕಾಸ್‌ಕುಮಾರ್‌ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್‌, ಕಬ್ಬನ್‌ಪಾರ್ಕ್‌ ಉಪ ವಿಭಾಗದ ಎಸಿಪಿ ಸಿ.ಬಾಲಕೃಷ್ಣ, ಕಬ್ಬನ್‌ ಪಾರ್ಕ್‌ ಇನ್ಸ್‌ಪೆಕ್ಟರ್‌ ಗಿರೀಶ್‌ ಎ.ಕೆ. ವಿರುದ್ಧ ಇಲಾಖಾ ವಿಚಾರಣೆಗೆ ಸಂಪುಟ ಸಭೆ ನಿರ್ಧರಿಸಿದೆ ಎಂದು ವಿವರಿಸಿದರು. ಇಲಾಖಾ ವಿಚಾರಣೆ ವೈಯಕ್ತಿಕವಾಗಿ ನಡೆಯಲಿದೆಯಾ ಗುಂಪಾಗಿ ನಡೆಯಲಿದೆಯಾ ಎಂಬ ಪ್ರಶ್ನೆಗೆ, ವೈಯಕ್ತಿಕವಾಗಿ ನಡೆಯಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸರ್ಕಾರದ ಪಾತ್ರ ಏನೂ ಇಲ್ವಾ?: ಕುನ್ಹಾ ವರದಿಯಲ್ಲಿ ಈ ಘಟನೆಗೆ ಖಾಸಗಿ ಕಂಪನಿಗಳು, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿರುವುದು ಬಿಟ್ಟು ಸರ್ಕಾರದ ಪಾತ್ರದ ಬಗ್ಗೆ ಏನೂ ಉಲ್ಲೇಖಿಸಿಲ್ವಾ, ಸರ್ಕಾದ ವೈಫಲ್ಯ ಏನೂ ಇಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಾನು ಸಂಪೂರ್ಣ ವರದಿ ಓದಿಲ್ಲ ಎಂದರು. ಘಟನೆ ನಡೆದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಲ್ಗೊಂಡಿದ್ದರು. ಅವರನ್ನೂ ಆಯೋಗ ವಿಚಾರಣೆ ನಡೆಸಿದೆಯಾ ಎಂಬ ಪ್ರಶ್ನೆಗೆ, ವರದಿಯನ್ನು ಮಾಧ್ಯಮಗಳಿಗೆ ಕೊಡುತ್ತೇವೆ. ಎಲ್ಲವನ್ನೂ ನೀವೇ ಪರಿಶೀಲಿಸಿಕೊಳ್ಳಿ ಎಂದು ಜಾರಿಕೊಂಡರು.

49 ಕೈದಿಗಳ ಬಿಡುಗಡೆಗೆ ಒಪ್ಪಿಗೆ: ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ 46 ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸಲು ಸಚಿವ ಸಚಿವ ಸಭೆ ಒಪ್ಪಿಗೆ ನೀಡಿರುವುದಾಗಿ ಇದೇ ವೇಳೆ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು. 46 ಮಂದಿ ಜೊತೆಗೆ ಇನ್ನೂ ಮೂವರು ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ನಿಯಮಾನುಸಾರ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!