ಕಾಂಗ್ರೆಸ್‌ನವರ ಸಾಧನೆ ಏನು? ಜನರಿಗೆ ಉತ್ತರಿಸಿ: ನಿಖಿಲ್‌ ಕುಮಾರಸ್ವಾಮಿ

Published : Jul 25, 2025, 08:10 AM ISTUpdated : Jul 26, 2025, 06:29 AM IST
Nikhil Kumaraswamy

ಸಾರಾಂಶ

ರಾಜ್ಯದ ಜನತೆಗಾಗಿ ಎಷ್ಟರಮಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರೇ ಉತ್ತರ ಕೊಡಬೇಕೇ ಹೊರತು ಬೇರೆಯವರು ಕೊಡಲು ಸಾಧ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬಾಳೆಹೊನ್ನೂರು (ಜು.25): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅಧಿಕಾರವಧಿ ಇನ್ನೂ ಮೂರು ವರ್ಷವಿದ್ದು, ಅಷ್ಟರೊಳಗೆ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡೋಣ, ಎಷ್ಟು ಸಾಧ್ಯವೋ ಅಷ್ಟು ಭ್ರಷ್ಟಾಚಾರ ಮಾಡೋಣ ಆ ಹಣದಲ್ಲಿ ಮುಂದೆ ಚುನಾವಣೆ ಎದುರಿಸೋಣ ಎಂಬುದು ಅವರ ಭಾವನೆಯಾಗಿದೆ ಎಂಬುದು ಅವರ ಕಾರ್ಯವೈಖರಿಯಲ್ಲಿ ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣ ಸಮೀಪದ ಹಲಸೂರು ಶ್ರೀರಾಮ ಎಸ್ಟೇಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಕಾಂಗ್ರೆಸ್‌ನವರು ಸಾಧನಾ ಸಮಾವೇಶ ಮಾಡಿದ್ದರು.

ಆದರೆ 2 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ನಾನು ಪ್ರಶ್ನಿಸುತ್ತೇನೆ. 130೦ಕ್ಕೂ ಅಧಿಕ ಸೀಟುಗಳನ್ನು ಕೊಟ್ಟ ರಾಜ್ಯದ ಜನತೆಗಾಗಿ ಎಷ್ಟರಮಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರೇ ಉತ್ತರ ಕೊಡಬೇಕೇ ಹೊರತು ಬೇರೆಯವರು ಕೊಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು 5 ವರ್ಷ ನಾನೇ ಸಿಎಂ, ನಮ್ಮಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲಿ ಕಾಲಹರಣ ಮಾಡುತ್ತಿದ್ದರೆ, ಡಿಸಿಎಂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಡಿಸಿಎಂ ಸಿಎಂ ಕುರ್ಚಿಗೆ ಹೋದರೆ ಅವರ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರು ಆಕ್ರಮಿಸಿಕೊಳ್ಳಬಹುದು ಎಂದು ಮತ್ತೊಬ್ಬರು ಕಣ್ಣಿಟ್ಟಿ ದ್ದಾರೆ. ಒಟ್ಟಾರೆ ಕಾಂಗ್ರೆಸ್‌ನವರ ಕುರ್ಚಿ ಉಳಿಸಿಕೊಳ್ಳುವ ಜಂಜಾಟದಲ್ಲಿ ಜನ ಬೇಸತ್ತು ಹೋಗಿದ್ದಾರೆ.

ರಾಜ್ಯದ ಜನತೆ ಎಲ್ಲಿ ಹೋದರೂ ಅವರ ದುರಾಡಳಿತ, ಭ್ರಷ್ಟಾಚಾರ, ವೈಫಲ್ಯ, ಹಗರಣ, ಜನವಿರೋಧಿ ನೀತಿಗಳ ಬಗ್ಗೆ ಜನ ಆಕ್ರೋಶ ಭರಿತವಾಗಿ ಚರ್ಚೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇಷ್ಟು ಬೇಗ ದೊಡ್ಡ ಬಹುಮತದ ರಾಜ್ಯ ಸರ್ಕಾರವನ್ನು ವಿರೋಧಿಸುತ್ತಿರುವುದು ಇದೇ ಮೊದಲು. ಜಿಪಂ, ತಾಪಂ ಚುನಾವಣೆ ನಡೆಸಬೇಕು ಎಂದು ಈಗಾಗಲೇ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಆದರೆ ಕಾಂಗ್ರೆಸ್‌ ನವರಿಗೆ ಈ ಚುನಾವಣೆ ನಡೆಸಿದರೆ ಮುಂದೇನಾಗುತ್ತೆ ಎಂಬ ವಿಶ್ವಾಸವಿಲ್ಲದೆ ದಿನಾಂಕ ಪ್ರಕಟಿಸಲು ಅವರಿಂದ ಸಾಧ್ಯವಿಲ್ಲ ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಮುಖಂಡರಾದ ಕೆ.ಎನ್. ಮರಿಗೌಡ, ಕೆ.ಆರ್.ದೀಪಕ್ ಮರಿಗೌಡ, ರುದ್ರಪ್ಪಗೌಡ, ಕೆ.ಟಿ.ಗೋವಿಂದೇಗೌಡ, ವಿನಯ್ ಕಣಿವೆ, ಅತಿಶಯ್ ಮಾಗುಂಡಿ ಮತ್ತಿತರರು ಹಾಜರಿದ್ದರು.

ಬಾಲಿಶ ಹೇಳಿಕೆಗಳಿಂದ ಅರಣ್ಯ ಸಚಿವರು ನಗೆಪಾಟಲಿಗೆ: ದನಕರುಗಳಿಗೆ ಕಾಡು ಯಾವುದು, ನಗರ ಯಾವುದು ಎನ್ನುವ ತಿಳುವಳಿಕೆ ಇದ್ದಿದ್ದರೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗುತ್ತಿದ್ದವು. ದನಗಳು ಕಾಡಿನಲ್ಲಿ ಮೇಯದೆ ಇನ್ನೆಲ್ಲಿಗೆ ಹೋಗಬೇಕು ಇಂತಹ ಅವರ ಹೇಳಿಕೆ ಇಲಾಖೆ ಮಂತ್ರಿಗಳ ಹೇಳಿಕೆ ಇಂದು ನಗೆ ಪಾಟಲಿಗೆ ಈಡಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು. ಕಾಡು ಪ್ರಾಣಿಗಳಿಗೆ ನೀವು ನಾಡಿಗೆ ಬರಬೇಡಿ ಎಂದು, ನಗರದ ಪ್ರಾಣಿಗಳಿಗೆ ಕಾಡಿಗೆ ಹೋಗಬೇಡಿ ಎಂದು ತಿಳುವಳಿಕೆ ಹೇಳಲು ಸಾಧ್ಯವೇ? ಅದಕ್ಕೆ ಅಲ್ಲವೇ ನಾವು ಪ್ರಾಣಿಗಳು ಎಂದು ಕರೆಯುವುದು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿ ಅರಣ್ಯ ಮಂತ್ರಿಗಳ ಇಂತಹ ಬಾಲಿಶ ನಡೆಗಳಿಂದ ರಾಜ್ಯಸರ್ಕಾರ ಅನೇಕ ಸಂದರ್ಭದಲ್ಲಿ ಮುಜುಗರಕ್ಕೆ ಈಡಾಗಿದೆ. ಇದನ್ನು ಬಿಟ್ಟು ಶಾಶ್ವತ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುವುದು ಅರಣ್ಯ ಸಚಿವರು ಚಿಂತನೆ ಮಾಡಬೇಕು ಎಂದರು.

ಶೃಂಗೇರಿ ಕ್ಷೇತ್ರದಲ್ಲಿ ಪಕ್ಷದ ಸದಸ್ಯತ್ವ ನೋಂದಣಿಗೆ ಭೇಟಿ ನೀಡುತ್ತಿದ್ದು, ಇದು ಕೇವಲ ಸಭೆಗೆ ಸೀಮಿತವಾದ ಭೇಟಿ ಅಲ್ಲ. ಹಿಂದೆ ಯರ‍್ಯಾರು ಪಕ್ಷ ಕಟ್ಟಿ ಬೆಳೆಸಿದ್ದಾರೆ. ಹಿರಿಯ ಮುಖಂಡರು, ಶ್ರಮವಹಿಸಿ ಪಕ್ಷ ಕಟ್ಟಿ ಬೆಳೆಸಿದ ಹಿರಿಕರ ಮನೆಗೆ ಕರೆದು ಕೊಂಡು ಹೋಗಿ ಆಶೀರ್ವಾದ ಕೇಳಲು ಆಯಾ ಕ್ಷೇತ್ರದ ಮುಖಂಡರಿಗೆ ತಿಳಿಸಿದ್ದೇನೆ. 45 ದಿನಗಳ ಕಾಲ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಹಲವರನ್ನು ಭೇಟಿ ಮಾಡಿದ್ದೇನೆ. ಹಿರಿಯ ಹಾಗೂ ಯುವ ಕಾರ್ಯಕರ್ತರಲ್ಲಿ ಯಾವುದೇ ಸಮಸ್ಯೆ ಆದಾಗ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ಬರಲಿದ್ದಾರೆ ಎಂಬ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!