ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಹಾಲಾಡಿ: ಅಭಿಮಾನಿಗಳಿಗೆ ಆಘಾತ ನೀಡಿದ 5 ಬಾರಿಯ ಶಾಸಕ!

By Kannadaprabha News  |  First Published Apr 4, 2023, 3:40 AM IST

ಉಡುಪಿ ಜಿಲ್ಲೆಯ ಜನಪ್ರಿಯ ರಾಜಕಾರಣಿ, ಐದು ಅವಧಿಗೆ ಕುಂದಾಪುರ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಹೊರಡಿಸಿರುವುದು ಕರಾವಳಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


ಕುಂದಾಪುರ (ಏ.04): ಉಡುಪಿ ಜಿಲ್ಲೆಯ ಜನಪ್ರಿಯ ರಾಜಕಾರಣಿ, ಐದು ಅವಧಿಗೆ ಕುಂದಾಪುರ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಹೊರಡಿಸಿರುವುದು ಕರಾವಳಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ತನ್ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ರಾಜಕೀಯ ನಿರ್ಧಾರಗಳ ಕುರಿತು ಹಲವು ದಿನಗಳಿಂದ ಬೀಸುತ್ತಿದ್ದ ಗಾಳಿ ಸುದ್ದಿಗಳಿಗೆ ಸ್ವತಃ ಹಾಲಾಡಿಯವರೇ ತೆರೆ ಎಳೆದಿದ್ದಾರೆ. ಈ ಬಗ್ಗೆ ಸೋಮವಾರ ಸಂಜೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಛೆಯಿಂದ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದೇನೆ. ಸತತ ಐದು ಬಾರಿಗೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

Tap to resize

Latest Videos

undefined

ಟಿಕೆಟ್ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡದಂತೆ ಸವದಿ, ಕುಮಟಳ್ಳಿಗೆ ಸೂಚನೆ ನೀಡಿದ ಕೇಂದ್ರ ಸಚಿವ ಜೋಶಿ

ನಾನು ಶಾಸಕನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠಯಿಂದ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ಕುಂದಾಪುರ ಕ್ಷೇತ್ರವು ಬಹಳಷ್ಟುಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಎಲ್ಲಾ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅವರೆಲ್ಲರ ನೋವುಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ತೃಪ್ತಿ ನನಗಿದೆ. ಐದೂ ಚುನಾವಣೆಯಲ್ಲೂ ದಾಖಲೆಯ ಮತಗಳ ಅಂತರದೊಂದಿಗೆ ಚುನಾಯಿಸಿ ಕಳುಹಿಸಿದ ಮತದಾರರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ ಎಂದಿದ್ದಾರೆ.

ಮತದಾರರು ನನ್ನ ಮೇಲೆ ಇಟ್ಟಪ್ರೀತಿ ಮತ್ತು ನಂಬಿಕೆಯೇ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು, ಅದಕ್ಕಾಗಿ ನಾನು ನನ್ನ ಸಮಸ್ತ ಮತ ಬಾಂಧವರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಲು ಅವಕಾಶ ಕೊಟ್ಟಪಕ್ಷಕ್ಕೂ ಹಾಗೂ ನಾನು ಪಕ್ಷೇತರರಾಗಿ ನಿಂತು ಗೆಲ್ಲಲು ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲಾ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಗೊಂದಲ: ತನ್ನ ಸರಳ ವ್ಯಕ್ತಿತ್ವದಿಂದಲೇ ಕುಂದಾಫುರದ ವಾಜಪೇಯಿ ಎಂದು ಖ್ಯಾತರಾಗಿದ್ದ ಹಾಲಾಡಿ ರಾಜಕೀಯ ಕ್ಷೇತ್ರದಲ್ಲಿಯೂ ಅಜಾತಶತ್ರುವಿನಂತೆ ಗುರುತಿಸಿಕೊಂಡಿದ್ದರು. ಆದರೆ ಹಾಲಾಡಿಯವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದಕ್ಕೆ ಕಾರಣಗಳು ಇನ್ನೂ ಅಸ್ಪಷ್ಟವಾಗಿದೆ. ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿಯೂ ಅವರು ಕೇವಲ ಸ್ಪರ್ಧಿಸದೆ ಇರುವ ತೀರ್ಮಾನವನ್ನು ಮಾತ್ರ ಪ್ರಕಟಿಸಿ ಕೆಲವು ಗೊಂದಲಗಳನ್ನು ಹಾಗೆಯೇ ಉಳಿಸಿದ್ದಾರೆ.

ಶಿಷ್ಯನ ರಾಜಕೀಯ ಭವಿಷ್ಯಕ್ಕೆ ಹಾಲಾಡಿ ತ್ಯಾಗ!?: ತಮ್ಮ ರಾಜಕೀಯ ಗುರು ಎಜಿ ಕೊಡ್ಗಿಯವರ ಪುತ್ರ ಕಿರಣ್‌ ಕುಮಾರ್‌ ಕೊಡ್ಗಿಯವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಹಾಲಾಡಿ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಿಜೆಪಿ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಹಾಲಾಡಿ ಬಹಿರಂಗಪಡಿಸಿಲ್ಲ. ಭಾನುವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಭಾಗವಹಿಸಿ ಊರಿಗೆ ಮರಳಿದ್ದ ಶಾಸಕ ಹಾಲಾಡಿ ಏಕಾಏಕಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಅವರ ಅಪಾರ ಅಭಿಮಾನಿಗಳಿಗೆ ದಿಗ್ಭ್ರಮೆ ಮೂಡಿಸಿದ್ದಾರೆ. ಈ ಬಾರಿ ಮತ್ತೆ ಹಾಲಾಡಿಯವರೇ ಸ್ಪರ್ಧಿಸಬೇಕು ಎಂಬ ಒಕ್ಕೊರಲ ಆಗ್ರಹಗಳೂ ಕೇಳಿಬರುತ್ತಿವೆ.

ಕೊನೆಗೂ ರಾಜನಾಗಿಯೇ ಉಳಿದ ಹಾಲಾಡಿ!: ನಾಲ್ಕು ಅವಧಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಹಾಲಾಡಿಯವರು ಒಂದು ಬಾರಿ ಪಕ್ಷೇತರ ಶಾಸಕರಾಗಿಯೂ ಆಯ್ಕೆಯಾದವರು. ಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಅವರಿಗೆ ಕೊನೆ ತನಕವೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಭಾಗ್ಯ ಸಿಕ್ಕಿರಲಿಲ್ಲ. ಕಳೆದ ಬಾರಿ ಹಾಲಾಡಿ ಮಂತ್ರಿಯಾಗಬೇಕೆಂಬ ಕೂಗು ವ್ಯಾಪಕವಾಗಿ ಕೇಳಿಬಂದಿತ್ತಾದರೂ ಹಾಲಾಡಿಯವರಿಗೆ ಸಚಿವನಾಗುವ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಅವರ ಅಪಾರ ಬೆಂಬಲಿಗರು ಹಾಲಾಡಿಯವರೇ ನೀವು ಮಂತ್ರಿಯಲ್ಲ, ರಾಜ, ನಮ್ಮೆದೆಯ ಅರಮನೆಯಲ್ಲಿ ನಿಮಗೆ ಸದಾ ಬಹುಪರಾಕ್‌ ಎಂಬ ಶಿರ್ಷಿಕೆಯಡಿಯಲ್ಲಿ ಹಾಲಾಡಿ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರ ಮೂಲಕ ಹಾಲಾಡಿಯವರ ಬೆಂಬಲಕ್ಕೆ ನಿಂತಿದ್ದರು. ಅಭಿಮಾನಿಗಳು, ಬೆಂಬಲಿಗರ ಮಂತ್ರಿಯಲ್ಲ ರಾಜ ಶೀರ್ಷಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಅಪಾರ ಅಭಿಮಾನಿಗಳು ಭಾವನಾತ್ಮಕ ಬರೆಹಗಳನ್ನು ಪ್ರಕಟಿಸುತ್ತಿದ್ದಾರೆ.

Shivamogga: ಚುನಾವಣಾ ಪ್ರಚಾರಕ್ಕೆ ಮಕ್ಕಳು ಬರು​ವಂತಿ​ಲ್ಲ: ಜಿಲ್ಲಾಧಿಕಾರಿ ಸೆಲ್ವಮಣಿ ಎಚ್ಚ​ರಿಕೆ

ಅಭಿಮಾನಿಗಳ ಆಕ್ರೋಶ: ಹಾಲಾಡಿ ಚುನಾವಣಾ ಕಣದಿಂದ ಹಿಂದೆ ಸರಿಯುವ ತೀರ್ಮಾನ ಕೈಗೊಂಡ ಬೆನ್ನಲ್ಲೆ ಅವರ ಅಭಿಮಾನಿಗಳು ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟುಚರ್ಚೆಗಳು ವ್ಯಕ್ತವಾಗುತ್ತಿದ್ದು, ಕರಾವಳಿಯಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತ ಹಾಲಾಡಿಯವರನ್ನು ಬಿಜೆಪಿ ಹಲವು ಬಾರಿ ಅವಮಾನಿಸಿದೆ. ಹಾಲಾಡಿಯವರನ್ನು ಕಡೆಗಣಿಸಿದ ಬಿಜೆಪಿಗೆ ಕರಾವಳಿಯಲ್ಲಿ ತಕ್ಕ ಪಾಠ ಕಲಿಸಿಯೇ ಸಿದ್ದ ಎಂದು ಅವರ ಅಭಿಮಾನಿಗಳು ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.

click me!