ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಿಂದ ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದು, ಈ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ವಯಸ್ಸಿನ ಕಾರಣಕ್ಕಾಗಿ ಅಲ್ಲ ಎಂದು ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ (ಏ.04): ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಿಂದ ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದು, ಈ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ವಯಸ್ಸಿನ ಕಾರಣಕ್ಕಾಗಿ ಅಲ್ಲ ಎಂದು ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಯಸ್ಸಿನ ಕಾರಣಕ್ಕಾಗಿ ನನಗೆ ಪಕ್ಷ ಟಿಕೆಟ್ ನಿರಾಕರಿಸಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ನಾನೇ ಕಣದಿಂದ ಹಿಂದೆ ಸರಿಯುತ್ತಿರುವುದನ್ನು ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿ ಬಂದಿದ್ದೇನೆ ಎಂದರು.
ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹಿಂದೆಯೇ ಅನೇಕ ಸಲ ಹೇಳಿದ್ದೆ. ಆದರೆ, ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವುದಿಲ್ಲವೆಂಬ ವಿಚಾರ ಎಲ್ಲೂ ಹೇಳದಂತೆ ಸೂಚನೆ ನೀಡಿದ್ದರು. ಹಾಗಾಗಿ ನಾನು ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲವೆಂಬ ಮಾತುಗಳನ್ನು ಆಡಿರಲಿಲ್ಲ. ಈಗ ಕೋರ್ ಕಮಿಟಿ ಮುಂದೆಯೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂಬ ವಿಚಾರ ಸ್ಪಷ್ಟಪಡಿಸಿ ಬಂದಿದ್ದೇನೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮುಸ್ಲಿಮರಿಗೆ ಸೌಲಭ್ಯ ನೀಡಿಲ್ಲವೆಂದರೆ ರಾಜಕೀಯ ನಿವೃತ್ತಿ: ಬಿ.ಎಸ್.ಯಡಿಯೂರಪ್ಪ
ಉತ್ತರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳು: ಟಿಕೆಟ್ ವಿಚಾರವಾಗಿ ಕೋರ್ ಕಮಿಟಿಯು ಜಿಲ್ಲಾವಾರು ಸಭೆ ನಡೆಯಿತು. ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕೆಂಬ ಸುದೀರ್ಘ ಚರ್ಚೆಯಾಗಿದೆ. ಜಿಲ್ಲಾಧ್ಯಕ್ಷರು ಸಹ ಜಿಲ್ಲೆಯ ಏಳೂ ಕ್ಷೇತ್ರಗಳಿಂದ ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆಂಬ ಬಗ್ಗೆ ಕೋರ್ ಕಮಿಟಿಗೆ ಮಾಹಿತಿ ನೀಡಿದರು. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಮಾಜಿ ಜಿಲ್ಲಾ ಧ್ಯಕ್ಷ ಅಣಬೇರು ಜೀವನಮೂರ್ತಿ, ಧನಂಜಯಕುಮಾರ ಹೆಸರು ಪ್ರಸ್ತಾಪವಾಗಿದೆ. 2023ರ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲವೆಂದ ನಂತರ ಆಕಾಂಕ್ಷಿಗಳೂ ಹೆಚ್ಚಾಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಉತ್ತರದಿಂದಾಗಲೀ ಅಥವಾ ಚನ್ನಗಿರಿ ಕ್ಷೇತ್ರದಿಂದಾಗಲೀ ಸ್ಪರ್ಧೆ ಮಾಡುವುದಿಲ್ಲ. ಅದೆಲ್ಲಾ ವದಂತಿ ಅಷ್ಟೇ. ಬಸವರಾಜ ಬೊಮ್ಮಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಿಂದಲೇ ಸ್ಪರ್ಧಿಸುತ್ತಾರೆ. ಒಂದೇ ಜಾತಿಯಿಂದ ಚುನಾವಣೆ ಗೆಲ್ಲುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಸಹಕಾರ ಬೇಕಾಗುತ್ತದೆ. ಆಗ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂದು ವಿವರಿಸಿದರು.
ರಾಜಕೀಯದಲ್ಲಿ ಎಲ್ಲವೂ ಕಂಡಿದ್ದೇನೆ: ರಾಜಕಾರಣವೆಂದ ಮೇಲೆ ನೋವು ಸಹಜ. ಹಾಗೆಂದು ಎಲ್ಲವನ್ನೂ ಮುಕ್ತವಾಗಿ ಹೇಳಲಾಗದು. 5 ದಶಕದ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಇದೇನೂ ಹೊಸದಲ್ಲವೆಂದು ತಮ್ಮ ರಾಜಕೀಯ ಜೀವನದ ಮುಸ್ಸಂಜೆಯಲ್ಲಿ ಸಚಿವರಾಗಲು ಅವಕಾಶ ನೀಡದ ಬಗ್ಗೆ ಇದ್ದ ತಮ್ಮೊಳಗಿನ ಅಸಮಾಧಾನವನ್ನು ರವೀಂದ್ರನಾಥ ಹೀಗೆ ವ್ಯಕ್ತಪಡಿಸಿದರು.
ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್
ಮಾಡಾಳು ವಿರೂಪಾಕ್ಷಪ್ಪ ಹಾಗೂ ಪುತ್ರ ಮಾಡಾಳು ಮಲ್ಲಿಕಾರ್ಜುನಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಯಾವುದೇ ರೀತಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ನಾವೆಲ್ಲರೂ ಸೇರಿ, ಜಿಲ್ಲಾದ್ಯಂತ 7 ಕ್ಷೇತ್ರದಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಕೊಟ್ಟಜವಾಬ್ದಾರಿ ನಿರ್ವಹಿಸುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವೇ ಮುಖ್ಯ.
-ಎಸ್.ಎ.ರವೀಂದ್ರನಾಥ, ಶಾಸಕ