
ಕಲಬುರಗಿ (ಫೆ.07): ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಜೆಡಿಎಸ್ ಗೆ ಅಧಿಕಾರ ಕೊಟ್ಟಿದ್ದೆವು. ಆದರೆ, ಕುಮಾರಸ್ವಾಮಿ ಶಾಸಕರನ್ನ, ಮಂತ್ರಿಗಳನ್ನು, ಜನರನ್ನ ಭೇಟಿ ಮಾಡಲಿಲ್ಲ. ಬರೀ ವೆಸ್ಟ್ ಎಂಡ್‌ನಲ್ಲೇ ಕಾಲ ಕಳೆದು ಸರ್ಕಾರದ ಅಧಿಕಾರ ಕಳೆದುಕೊಂಡರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ, ಶೂರನೂ ಅಲ್ಲ. ಅಲ್ಲಮಪ್ರಭುವಿನ ವಚನದ ಮೂಲಕ ಕುಮಾರಸ್ವಾಮಿಗೆ ತಿವಿದರು. ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೆವು. ಆದರೆ ಕುಮಾರಸ್ವಾಮಿ ಬೇಗ ಅಧಿಕಾರ ಕಳೆದುಕೊಂಡರು ಎಂದು ಹೇಳಿದರು.
ಸಂವಿಧಾನಕ್ಕೆ ವಿರುದ್ಧವಾದುದ್ದೇ ಹಿಂದುತ್ವ, ಅದೇ ಮನುವಾದ: ಸಿದ್ದರಾಮಯ್ಯ
ಕುಮಾರಸ್ವಾಮಿ ಅವರು ಅಧಿಕಾರ ಕೊಟ್ಟಾಗ ಶಾಸಕರು, ಮಂತ್ರಿಗಳು ಹಾಗೂ ಜನರನ್ನು ಭೇಟಿ ಮಾಡದೇ ಹೋಟೆಲ್‌ನಲ್ಲಿ ಕುಳಿತುಕೊಂಡು ಕಾಲ ಕಳೆದರು. ನಂತರ ಸರ್ಕಾರವರನ್ನೇ ಅಧಿಕಾರದಿಂದ ಕಳೆದುಕೊಂಡರು. ಇದರ ಫಲವಾಗಿಯೇ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಿತು. ನನಗೆ 45 ವರ್ಷದ ರಾಜಕೀಯ ಅನುಭವ ಇದೆ. ಆಪರೇಶನ್ ಕಮಲ ಎನ್ನುವಂತಹ ಪದ ನನ್ನ ಅನುಭವದಲ್ಲೇ ಕೇಳಿರಲಿಲ್ಲ. ಆಪರೇಶನ್ ಕಮಲ ಶುರುವಾಗಿದ್ದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಜನಾರ್ಧನರೆಡ್ಡಿ ಬ್ರದರ್ಸ್‌ಗಳಿಂದ ಎಂದು ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ದವೂ ಕಿಡಿಕಾರಿದರು.
ಕೃಷಿ ಸಚಿವ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ: ಕಲ್ಯಾಣ ಕರ್ನಾಟಕದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದೆ. ರೈತರು ಕಂಗಾಲಾಗಿದ್ದಾರೆ. ಒಮ್ಮೆಯಾದ್ರೂ ಕೃಷಿ ಸಚಿವ ಬಿ.ಸಿ ಪಾಟೀಲ್ ನಿಮ್ಮ ಕಷ್ಟ ಕೇಳಲು ಬಂದಿದ್ದಾರಾ? ಬಿ.ಸಿ ಪಾಟೀಲ್ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಈ ಬಗ್ಗೆ ನಾವು ಅಧಿವೇಶನದಲ್ಲಿ ಕೇಳಿದರೆ ಹುಷಾರಿಲ್ಲ ಅಂತಾರೆ. ಹುಷಾರಿಲ್ಲ ಅಂದ್ರೆ ಮಂತ್ರಿಯಾಗಿ ಯಾಕೆ ಇದ್ದಿಯಪ್ಪಾ.? ಮನೆಗೆ ಹೋಗಿ ಆರಾಮ್ ಆಗಿ ಇರಬೇಕು ಅಲ್ವಾ? ರೈತರ ಸಂಕಷ್ಟ ಕೇಳಲು ಆಗಲ್ಲ ಅಂದ ಮೇಲೆ ಈಗಲಾದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.