Assembly election: ಕುಮಾರಸ್ವಾಮಿಗೆ 20 ಸೀಟ್‌ ಗೆದ್ದು ಸಿಎಂ ಆಗೋದಷ್ಟೇ ಗುರಿ: ಯೋಗೇಶ್ವರ್‌ ಟೀಕೆ

Published : Dec 29, 2022, 06:19 PM IST
Assembly election: ಕುಮಾರಸ್ವಾಮಿಗೆ 20 ಸೀಟ್‌ ಗೆದ್ದು ಸಿಎಂ ಆಗೋದಷ್ಟೇ ಗುರಿ: ಯೋಗೇಶ್ವರ್‌ ಟೀಕೆ

ಸಾರಾಂಶ

ಜೆಡಿಎಸ್‌ನ ಕುಮಾರಸ್ವಾಮಿಗೆ ರಾಜ್ಯದ ಅಭಿವೃದ್ಧಿ ಅಥವಾ ಸಂಪದ್ಭರಿತ ರಾಜ್ಯ ಕಟ್ಟುವ ಆಸೆ ಇಲ್ಲ. ರಾಜ್ಯದಲ್ಲಿ ತಾವು 15-20 ಗೆದ್ದು ಬಿಡಬೇಕು, ಅತಂತ್ರ ಸರ್ಕಾರ ಬರಬೇಕು. ಆಗ ತಾವು ಮುಖ್ಯಮಂತ್ರಿ ಆಗಬೇಕು ಅನ್ನೋದಷ್ಟೇ ಅವರ ಆಸೆಯಾಗಿದೆ ಎಂದು ಸಿ.ಪಿ. ಯೋಗೇಶ್ವರ್‌ ಟೀಕಿಸಿದ್ದಾರೆ.

ಮಂಡ್ಯ (ಡಿ.29): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು ಜನರು ಹುಚ್ಚೆದ್ದು ಮತ ಹಾಕಿದ್ದರು. ಆದರೆ, ಸಿಎಂ ಆದಮೇಲೆ ಕ್ಷೇತ್ರವನ್ನೇ ಮರೆತುಬಿಟ್ಟರು. ಈ ಬಾರಿಯೂ ರಾಜ್ಯ ಅಥವಾ ಕ್ಷೇತ್ರದ ಅಭಿವೃದ್ಧಿ ಗುರಿ ಇಟ್ಟುಕೊಳ್ಳದೇ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ೨೦ ಸೀಟು ಗೆದ್ದು ಅತಂತ್ರ ಸ್ಥಿತಿಯಲ್ಲಿ ಸಿಎಂ ಆಗುವುದೇ ಅವರ ಗುರಿಯಾಗಿದೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಟೀಕೆ ಮಾಡಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಾನು ಈಗಾಗಲೇ ಬಹಳಷ್ಟು ಸಲ ಸ್ಪರ್ಧೆ ಮಾಡಿದ್ದೇನೆ. ಕುಮಾರಸ್ವಾಮಿಗೂ ನನಗೂ ಬಹಳ ವ್ಯತ್ಯಾಸ ಇದೆ. ಕಳೆದ ಸಲ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಅಂತಾ ಜನ ಹುಚ್ಚೆದ್ದು ಮತ ಕೊಟ್ಟರು. ಇದರಿಂದಾಗಿ ಗೆದ್ದು ಮುಖ್ಯಮಂತ್ರಿಯೂ ಆದರು. ಆದರೆ ಆಮೇಲೆ ಕ್ಷೇತ್ರವನ್ನೇ ಮರೆತುಬಿಟ್ಟರು. ಮಗನ ಸಿನಿಮಾ ಮಾಡೋಕೆ, ಬೆಂಗಳೂರಿನಲ್ಲಿ ಕೂತು ರೆಸ್ಟ್ ಮಾಡೋಕು ಹೆಚ್ಚು ಗಮನ ಕೊಟ್ಟರು. ಸಿಎಂ ಆದಾಗ ಜನರಿಗಾಗಲೀ, ಅವರ ಶಾಸಕರ ಕೈಗೂ ಸಿಗುತ್ತಿರಲಿಲ್ಲ. ಅವರಿಗೆ ಜನ ಬೆಂಬಲವೂ ಇರಲಿಲ್ಲ, ಶಾಸಕರ ಬೆಂಬಲವೂ ಇರಲಿಲ್ಲ. 20 ಸೀಟ್ ಗೆದ್ದು ಸಿಎಂ ಆಗ್ತೀನಿ ಅಂತಾ ಹೋದರು. ಅದೂ ಕೇವಲ ತಾತ್ಕಾಲಿಕವಾಗಿತ್ತು ಅಷ್ಟೇ ಎಂದು ಹೇಳಿದರು.

Karnataka Politics: ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರುತ್ತಾರೆ: ಸಿ.ಪಿ. ಯೋಗೇಶ್ವರ್‌ ಹೇಳಿಕೆ

ಕುಮಾರಸ್ವಾಮಿ ಮೇಲೆ ವಿಶ್ವಾಸ ಇಲ್ಲ:  ಮಂಡ್ಯದ ಜನತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಯಾರಿಗೂ ವಿಶ್ವಾಸ ಇಲ್ಲ. ಜೆಡಿಎಸ್‌ನ ವರ್ಚಸ್ಸು ಕುಂದಿದೆ ಅನ್ನೋದು ಜನರಿಗೆ ಅರ್ಥವಾಗುತ್ತಿದೆ. ಅದಕ್ಕೆ ಅವರು ಎಲ್ಲಾ ಕಡೆ ತಡಬಡಿಸುತ್ತಿದ್ದಾರೆ. ಎಲ್ಲಾ ಕಡೆ ಸುಳ್ಳು ಆಶ್ವಾಸನೆ ಕೊಡ್ತಿದ್ದಾರೆ. ಯಾವುದನ್ನ ಮಾಡೋಕೆ ಆಗಲ್ವೋ ಅದೆಲ್ಲವನ್ನ ಭರವಸೆ ಕೊಡ್ತಿದ್ದಾರೆ. ಹೀಗಾಗಿ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ. ಮುಖಂಡರು ಕೂಡ ಬಿಜೆಪಿಯತ್ತ ಬರಲು ಮುಖ ಮಾಡಿದ್ದಾರೆ. ಹೊಸ ವರ್ಷದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಕಳಪೆ ಕಾಮಗಾರಿ: ಚನ್ನಪಟ್ಟಣದಲ್ಲಿ ಅವರು ಯಾವ ಕೆಲಸವನ್ನೂ ಮಾಡಿಲ್ಲ. ಮಾಡಿದ್ದೀನಿ ಅನ್ನೋ ರಸ್ತೆಗಳು ಕೂಡ ಕಿತ್ತು ಬರ್ತಿವೆ.  ಆ ಕಾಮಗಾರಿಗಳಲ್ಲಿ ದೊಡ್ಡ ಹಗರಣ, ಕಳಪೆ ಕಾಮಗಾರಿ ಇದೆ. ನಾನು ಹೆಮ್ಮೆಯಿಂದ ಹೇಳ್ತೀನಿ. ಜನಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿಗೆ ಒಂದು ಗುರಿ ಇಲ್ಲ. ಕೇವಲ ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೆ ಅಷ್ಟೇ.  ಅವರಿಗೆ ರಾಜ್ಯ ಕಟ್ಟುವ ಆಸೆ ಇಲ್ಲ. 15-20 ಗೆದ್ದು ಬಿಡಬೇಕು, ಅತಂತ್ರ ಸರ್ಕಾರ ಬರಬೇಕು. ನಾನು ಸಿಎಂ ಆಗಬೇಕು ಅನ್ನೋದಷ್ಟೇ ಅವರ ಆಸೆಯಾಗಿದೆ ಎಂದು ಕಾಲೆಳೆದರು.

Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

ಜೆಡಿಎಸ್‌ ಕಾಂಗ್ರೆಸ್‌ಗಿಂತ ಹೆಚ್ಚಿನ ಸೀಟು ಗೆಲ್ತೇವೆ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೊಂದಾಣಿಕೆಯಾಗುತ್ತೆ ಅನ್ನೋ ಕನ್ಫ್ಯೂಷನ್ ಇತ್ತು. ಜೆಡಿಎಸ್‌ ಜೊತೆ ಹೊಂದಾಣಿಕೆ ಆಗುತ್ತಾ? ಹಳೇ ಮೈಸೂರು ಭಾಗಕ್ಕೆ ಒತ್ತು ಕೊಡದ ಬಗ್ಗೆ ಪ್ರಶ್ನೆ ಇತ್ತು. ಅಮಿತ್ ಶಾ ಆಗಮನದ ಮೂಲಕ ಎಲ್ಲಾ ಅನುಮಾನಗಳಿಗೂ ತಿಲಾಂಜಲಿ ಇಟ್ಟಂತಾಗಲಿದೆ. ಅಮಿತ್‌ ಶಾ ಕಾರ್ಯಕ್ರಮದ ಮೂಲಕ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂಬ ಸಂದೇಶ ರವಾನೆಯಾಗಿದೆ. 2023ಕ್ಕೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ಧನೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಶತಾಯಗತಾಯ ಜೆಡಿಎಸ್‌-ಕಾಂಗ್ರೆಸ್ಸಿಗಿಂತ ಅತಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ