ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ: ಹುಡುಗಾಟಕ್ಕೆ ಬಿಜೆಪಿಗೆ ಹೋಗಿದ್ದೆ ಎಂದ ಶಾಸಕ!

By Kannadaprabha News  |  First Published Apr 4, 2023, 4:20 AM IST

ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಶಾಸಕರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ ಸೇರುತ್ತಿದ್ದಾರೆ. ತಾನು ಕಾಂಗ್ರೆಸ್ಸಿಗನಾಗಬೇಕು ಎಂದು ಬಿಜೆಪಿಯ ಎನ್‌.ವೈ. ಗೋಪಾಲಕೃಷ್ಣ ಪಕ್ಷ ಸೇರಿದ್ದಾರೆ.


ಬೆಂಗಳೂರು (ಏ.04): ‘ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಶಾಸಕರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್‌ ಸೇರುತ್ತಿದ್ದಾರೆ. ತಾನು ಕಾಂಗ್ರೆಸ್ಸಿಗನಾಗಬೇಕು ಎಂದು ಬಿಜೆಪಿಯ ಎನ್‌.ವೈ.ಗೋಪಾಲಕೃಷ್ಣ ಪಕ್ಷ ಸೇರಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೆ ಇನ್ನೂ ಅನೇಕ ಹಾಲಿ ಮತ್ತು ಮಾಜಿ ಶಾಸಕರು ಪಕ್ಷ ಸೇರಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್‌.ವೈ. ಗೋಪಾಲಕೃಷ್ಣ ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು. 

ಈ ವೇಳೆ ಕಾಂಗ್ರೆಸ್‌ ನಾಯಕರು ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಶಿವಕುಮಾರ್‌, ಈಗಾಗಲೇ ಪುಟ್ಟಣ್ಣ, ಬಾಬುರಾವ್‌ ಚಿಂಚನಸೂರು, ಎನ್‌.ವೈ. ಗೋಪಾಲಕೃಷ್ಣ ಅವರು ತಮ್ಮ ಅಧಿಕಾರ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದು, ಸದ್ಯದಲ್ಲೇ ಶಿವಲಿಂಗೇಗೌಡ ಅವರು ಸೇರ್ಪಡೆಯಾಗಲಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೂ ಅನೇಕ ಮಾಜಿ ಹಾಗೂ ಹಾಲಿ ಶಾಸಕರು ಪಕ್ಷ ಸೇರುತ್ತಿದ್ದಾರೆ. ಈ ಬಗ್ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಸೂಕ್ಷ್ಮವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್‌ ಗೆಲುವಿನತ್ತ ದಾಪುಗಾಲು ಇಟ್ಟಿದೆ ಎಂದು ಹೇಳಿದರು.

Tap to resize

Latest Videos

ಮುಸ್ಲಿ​ಮ​ರಿಗೆ ಸೌಲಭ್ಯ ನೀಡಿ​ಲ್ಲ​ವೆಂದರೆ ರಾಜ​ಕೀಯ ನಿವೃ​ತ್ತಿ: ಬಿ.ಎಸ್‌.ಯಡಿಯೂರಪ್ಪ

ಗೋಪಾಲಕೃಷ್ಣ ಅವರು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಿದ್ದಾರೆ. ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದಾಗ ‘ನೀವು ಈಗಾಗಲೇ ಶಾಸಕರಾಗಿದ್ದು ಕಾಂಗ್ರೆಸ್‌ ಸೇರುತ್ತಿರುವುದೇಕೆ?’ ಎಂದು ನಾನು ಕೇಳಿದೆ. ಅದಕ್ಕೆ ಅವರು ‘ನಾನು ಬಿಜೆಪಿಯನ್ನು ನೋಡಿದ್ದೇನೆ. ನಾನು ಸಾಯುವ ಮುನ್ನ ಕಾಂಗ್ರೆಸ್ಸಿಗನಾಗಿ ಸಾಯಬೇಕು. ಅದಕ್ಕಾಗಿ ನಾನು ಕಾಂಗ್ರೆಸ್‌ ಸೇರಲು ಬಯಸುತ್ತೇನೆ’ ಎಂದರು. ಅವರ ಜತೆ ಸಾವಿರಾರು ಕಾರ್ಯಕರ್ತರು ಇಂದು ಪಕ್ಷ ಸೇರುತ್ತಿದ್ದಾರೆ ಎಂದರು.

ಪಕ್ಷದ ಕಟ್ಟಡಕ್ಕೆ ಅರ್ಜಿ ಹಣ ಬಳಕೆ: ಪಕ್ಷದ ಮುಖಂಡರಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಿ 2 ಲಕ್ಷ ರು. ಹಣ ಪಡೆದು ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್‌ ನೀಡಿದರೆ ಮೋಸವಲ್ಲವೇ ಎಂಬ ಪ್ರಶ್ನೆಗೆ, ‘ಇದರಲ್ಲಿ ಮೋಸವೇನಿದೆ? ಕಾಂಗ್ರೆಸ್‌ ಪಕ್ಷಕ್ಕೆ ದೇವಾಲಯದಂತಿರುವ ಪಕ್ಷದ ಕಟ್ಟಡ ಕಟ್ಟಲು ಆ ಹಣ ಬಳಸುತ್ತೇವೆ. ಅರ್ಜಿಗೆ ಶುಲ್ಕವಾಗಿ 5 ಸಾವಿರ ತೆಗೆದುಕೊಂಡಿದ್ದು, ಉಳಿದ 2 ಲಕ್ಷ ರು. ಅನ್ನು ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಸ್ವೀಕರಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದರು. ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಪ್ರಬಲ ಸ್ಪರ್ಧೆ ಇದ್ದಾಗಲೇ ಬಿಜೆಪಿಗೆ ಬಿಸಿ ಗೊತ್ತಾಗುತ್ತದೆ. ಆದರೆ ಆರೋಗ್ಯಕರ ಸ್ಪರ್ಧೆ ಇರಬೇಕು. ಪಕ್ಷದೊಳಗೆ ಹೋರಾಟ ಮಾಡುತ್ತಾರೆ. ನಂತರ ಬಿಜೆಪಿ ಹಾಗೂ ದಳದ ವಿರುದ್ಧ ಹೋರಾಟ ಮಾಡುತ್ತಾರೆ ಎಂದರು.

ಹುಡುಗಾಟಕ್ಕೆ ಬಿಜೆಪಿಗೆ ಹೋಗಿದ್ದೆ- ಗೋಪಾಲಕೃಷ್ಣ: ಪಕ್ಷ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಎನ್‌.ವೈ. ಗೋಪಾಲಕೃಷ್ಣ, ನಾನು ಬಿಜೆಪಿಗೆ ಹೋಗಿದ್ದ ಸಂದರ್ಭ, ಪರಿಸ್ಥಿತಿ ಬೇರೆ. ನಾನು ಹುಡುಗಾಟಕ್ಕೆ ಅಂತಹ ನಿರ್ಧಾರ ಕೈಗೊಂಡಿದ್ದೆ. ಇದೀಗ ಕಾಂಗ್ರೆಸ್‌ಗೆ ವಾಪಸಾಗಿ ಗೌರವ ಪಡೆದಿದ್ದೇನೆ. ನನಗೆ ಆಶೀರ್ವಾದ ಮಾಡಿದರೆ ಚಿತ್ರದುರ್ಗ ಜಿಲ್ಲೆ ಜತೆ ಬಳ್ಳಾರಿ ಜಿಲ್ಲೆಯಲ್ಲೂ ಓಡಾಡಿ ಕೆಲಸ ಮಾಡುತ್ತೇನೆ. ಕೂಡ್ಲಿಗಿ ಕ್ಷೇತ್ರದ ಕಾರ್ಯಕರ್ತರಿಗೂ ಕಾಂಗ್ರೆಸ್‌ ಗೆಲ್ಲಿಸುವಂತೆ ಕರೆ ನೀಡುತ್ತೇನೆ ಎಂದು ಹೇಳಿದರು. ಈ ವೇಳೆ ಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ ಸೇರಿದಂತೆ ಹಲವರು ಹಾಜರಿದ್ದರು.

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

9ರಂದು ಶಿವಲಿಂಗೇಗೌಡ ಕಾಂಗ್ರೆಸ್‌ ಸೇರ್ಪಡೆ: ಅರಸೀಕೆರೆ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏ. 9ರಂದು ತಮ್ಮ ಕ್ಷೇತ್ರದಲ್ಲಿ ಬೃಹತ್‌ ಸಮಾವೇಶದ ಮೂಲಕ ಪಕ್ಷ ಸೇರ್ಪಡೆಯಾಗಲು ಕೋರಿದ್ದಾರೆ. ಹೀಗಾಗಿ ಪಕ್ಷಕ್ಕೆ ಅರ್ಜಿ ಹಾಕುವಂತೆ ನಾವು ಸೂಚನೆ ನೀಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!