ಈ ಭಾಗದ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ನಾಯಕರನ್ನೂ ಜಾರಕಿಹೊಳಿ ಕುಟುಂಬದವರು ಮುಗಿಸುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ, ಸುರೇಶ ತಳವಾರ ಅವರೆಲ್ಲ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಇದೇ ಕುಟುಂಬ. ಈಗ ಶಂಭು ಕಲ್ಲೋಳಿಕರ ಅವರನ್ನೂ ಮುಗಿಸಿದ್ದಾರೆ. ಕೊನೆಗೆ ಉಳಿದಿದ್ದು ನಾನೊಬ್ಬನೇ. ಹೀಗಾಗಿ, ನನ್ನ ಬೆನ್ನಿಗೆ ಬಿದ್ದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಸಮುದಾಯದ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ
ಬೆಳಗಾವಿ/ಚಿಕ್ಕೋಡಿ(ಜೂ.07): ನನ್ನನ್ನೂ ಸೇರಿದಂತೆ ಈ ಭಾಗದ ನಮ್ಮ ದಲಿತ ನಾಯಕರನ್ನು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ನಿರ್ನಾಮ ಮಾಡುತ್ತಿದೆ ಎಂದು ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ ಬಹಿರಂಗವಾಗಿಯೇ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.
ಚಿಕ್ಕೋಡಿ ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ನಾಯಕರನ್ನೂ ಜಾರಕಿಹೊಳಿ ಕುಟುಂಬದವರು ಮುಗಿಸುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ, ಸುರೇಶ ತಳವಾರ ಅವರೆಲ್ಲ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಇದೇ ಕುಟುಂಬ. ಈಗ ಶಂಭು ಕಲ್ಲೋಳಿಕರ ಅವರನ್ನೂ ಮುಗಿಸಿದ್ದಾರೆ. ಕೊನೆಗೆ ಉಳಿದಿದ್ದು ನಾನೊಬ್ಬನೇ. ಹೀಗಾಗಿ, ನನ್ನ ಬೆನ್ನಿಗೆ ಬಿದ್ದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಸಮುದಾಯದ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಲಿತ ಸಮಾಜದ ಮೇಲೆ ಅವರಿಗೆ ಕಳಕಳಿ ಇದ್ದರೇ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು ಎಂದು ಖಾರವಾಗಿ ಮಾತನಾಡಿದರು.
ಕಾಂಗ್ರೆಸ್ ಶಾಸಕನ ವಿರುದ್ಧವೇ ಗುಡುಗಿದ ಸಚಿವ ಸತೀಶ್ ಜಾರಕಿಹೊಳಿ
ಲೋಕಸಭೆ ಚುನಾವಣೆ ಯಶಸ್ವಿಯಾಗಿ ಮುಗಿದಿದೆ. ಚುನಾವಣೆ ಪೂರ್ವದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನಂತವರನ್ನು ಬೆಳೆಸುವುದನ್ನು ಬಿಟ್ಟು, ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಶಂಭು ಕಲ್ಲೋಳಿಕರ ಅವರನ್ನು ರಾಜಕೀಯವಾಗಿ ಮುಗಿಸಲು ನನ್ನ ಮೇಲೆ ಸತೀಶ ಜಾರಕಿಹೊಳಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನಾನು ಪಕ್ಷಕ್ಕೆ ಮೋಸ ಮಾಡುವ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಸತೀಶ ಜಾರಕಿಹೊಳಿ ರಾಜ್ಯದಲ್ಲಿಯೇ ಪ್ರಭಾವಿ ನಾಯಕರಿದ್ದಾರೆ. ನಮ್ಮನ್ನು ತುಳಿಯುವ ಕೆಲಸವನ್ನು ಜಾರಕಿಹೊಳಿ ಕುಟುಂಬ ಮಾಡುತ್ತಿದೆ ಎಂದು ದೂರಿದರು.
ಸತೀಶ ಜಾರಕಿಹೊಳಿ ಅವರಿಗೆ ನಾವು ಮೊದಲಿನಿಂದಲೂ ಸಹಕಾರ ನೀಡಿದ್ದೇವೆ. ನನ್ನ ಸೋದರಮಾವ ಶಂಭು ಕಲ್ಲೋಳಿಕರ ಚಿಕ್ಕೋಡಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರು. ಅವರು 25 ಸಾವಿರ ಮತ ಪಡೆದಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೇವಲ 3,000 ಮತಗಳು ಅವರಿಗೆ ಬಂದಿವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಲೋಕಸಭಾ ಚುನಾವಣೆಯಲ್ಲಿ ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 22 ಸಾವಿರ ಮತಗಳ ಲೀಡ್ ಕೊಟ್ಟಿದ್ದೇನೆ. ನನಗೆ ವಿಧಾನಸಭೆ ಚುನಾವಣೆಯಲ್ಲಿ ಬಂದಷ್ಟು ಲೀಡ್ ಅನ್ನು ಲೋಕಸಭೆ ಚುನಾವಣೆಯಲ್ಲಿ ನೀಡಲಾಗಿದೆ. ಅಂದ ಮೇಲೆ ಪಕ್ಷಕ್ಕೆ ಮೋಸ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಡೈರೆಕ್ಟರ್, ಪ್ರೊಡ್ಯೂಸರ್ ಫೇಲಾದರೆ ಇಂಥ ಫಲಿತಾಂಶ: ಸತೀಶ್ ಜಾರಕಿಹೊಳಿ
ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಕೆಲಸ ಮಾಡಿಲ್ಲವೆಂದು ಸತೀಶ ಆರೋಪಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. ಇಂಥ ಯಾವುದೇ ದೂರಿಗೂ ನಾನು ದಾಖಲೆ ಸಮೇತ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಹಿರಿಯರಾದ ಸಚಿವ ಸತೀಶ ಅವರು ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಗೋಕಾಕ ಮತ್ತು ಅರಬಾವಿಯಲ್ಲಿ ಲೀಡ್ ಮಾಡಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಿ ಎಂದು ಸಲಹೆ ನೀಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ನಾನು ಪಾಲಿಸುತ್ತೇನೆ. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಲು ನಾನು ಇಷ್ಟಪಡುವುದಿಲ್ಲವೆಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದರು.