KS Eshwarappa ಹೇಳಿಕೆ ಕಾನೂನಿನ ಉಲ್ಲಂಘನೆ ಅಲ್ಲ: ಸಿಎಂ ಬೊಮ್ಮಾಯಿ

Kannadaprabha News   | Asianet News
Published : Feb 17, 2022, 07:42 AM IST
KS Eshwarappa ಹೇಳಿಕೆ ಕಾನೂನಿನ ಉಲ್ಲಂಘನೆ ಅಲ್ಲ: ಸಿಎಂ ಬೊಮ್ಮಾಯಿ

ಸಾರಾಂಶ

*  ಧ್ವಜದ ಹೇಳಿಕೆಗೆ ಈಗಾಗಲೇ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ *  ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದ ಸಿಎಂ *  ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ  

ಬೆಂಗಳೂರು(ಫೆ.17):  ಕೇಸರಿ ಧ್ವಜ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರ ಹೇಳಿಕೆಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರತಿಪಾದಿಸಿದ್ದಾರೆ.

ಬುಧವಾರ ವಿಧಾನಸಭೆಯ ಕಲಾಪ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೇಳಿಕೆ ಕುರಿತಂತೆ ಈಗಾಗಲೇ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ. ಕೇಸರಿ ಧ್ವಜವನ್ನು(Saffron Flag) 300-400 ವರ್ಷಗಳ ನಂತರ ಹಾರಿಸಲು ಸಾಧ್ಯವಾಗಬಹುದು ಎಂಬುದಾಗಿ ಹೇಳುವ ಜೊತೆಗೆ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದ್ದು, ಎಲ್ಲರೂ ಗೌರವ ನೀಡಬೇಕು ಎಂಬುದನ್ನೂ ತಿಳಿಸಿದ್ದಾರೆ. ಆದರೆ, ಅವರ ಹೇಳಿಕೆಯ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿ ಜನರ ಹಾಗೂ ಸದನದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌(Congress) ಮುಖಂಡರ ವಿರುದ್ಧ ಹರಿಹಾಯ್ದರು.

ತಿರಂಗ ಜೊತೆ ಸದನಕ್ಕೆ ಬಂದ ವಿರೋಧ ಪಕ್ಷ, ಬಿಜೆಪಿ-ಕಾಂಗ್ರೆಸ್ ಕೋಲಾಹಲ

ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ಪಕ್ಷ ವಿಫಲವಾಗಿದೆ. ಸದನದಲ್ಲಿ ರಾಷ್ಟ್ರಧ್ವಜ(National Flag) ಪ್ರದರ್ಶನದ ಮೂಲಕ ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ. ರಾಷ್ಟ್ರಧ್ವಜವನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಸಂಹಿತೆಯಿದೆ. ರಾಷ್ಟ್ರಧ್ವಜದ ವಿಷಯ ಎಲ್ಲಿಯೂ ದುರುಪಯೋಗ ಆಗಬಾರದು ಎನ್ನುವುದು ಸಂಹಿತೆಯಲ್ಲಿದೆ. ಆದರೆ ವಿರೋಧ ಪಕ್ಷದವರು ರಾಜಕೀಯ ಪ್ರೇರಿತವಾಗಿ ಸದನದಲ್ಲಿ ಈ ವಿಷಯವನ್ನು ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಜನರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಈಶ್ವರಪ್ಪನವರ ಹೇಳಿಕೆಯಾಗಲಿ ಅಥವಾ ಇನ್ನಾವುದೇ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಹಾಗೂ ಉತ್ತರ ನೀಡಲು ತಯಾರಿದ್ದೇವೆ ಎಂದು ಹೇಳಿದರು.

ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಸದಸ್ಯರು ಸದನದಲ್ಲಿ ನಡೆದುಕೊಂಡ ರೀತಿ ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ಪಕ್ಷಕ್ಕೆ ಶೋಭೆ ತರುವಂಥದ್ದಲ್ಲ. ತಮ್ಮ ನಿಲುವು ಹಾಗೂ ವರ್ತನೆಗಳಿಂದ ಇಡೀ ದೇಶದಲ್ಲಿ ನೆಲಕಚ್ಚುತ್ತಿದ್ದು, ಜನರಿಂದ ದೂರವಾಗುತ್ತಿದೆ. ಗೌರವಾನ್ವಿತ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ಜೊತೆಗೆ ಜನರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷದವರು ಚರ್ಚಿಸಬಹುದಿತ್ತು. ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿ ಮಾತನಾಡುತ್ತಿರುವುದು ವಿರೋಧಪಕ್ಷದವರ ರಾಜಕೀಯ ದಿವಾಳಿತನವನ್ನು ಪ್ರದರ್ಶಿಸುತ್ತದೆ ಎಂದರು.

ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ.. ಇಲ್ಲಾ ಅಹೋರಾತ್ರಿ ಧರಣಿ

ರಾಷ್ಟ್ರ ಧ್ವಜವನ್ನು ಅವಮಾನಿಸಿರುವ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಇಂದು(ಗುರುವಾರ) ಬೆಳಗ್ಗೆ 11 ಗಂಟೆಯೊಳಗಾಗಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಪೊಲೀಸರು ಸುಮೊಟೋ ದೇಶದ್ರೋಹ (Sedition case) ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಸದನದಲ್ಲಿ (Karnataka Assembly) ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಎಚ್ಚರಿಕೆ ನೀಡಿದ್ದಾರೆ.

KS Eshwarappa Statement : ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಚಿಂತನೆ

ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಹಾಗೂ ಬಿಜೆಪಿಯೂ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ವಿರುದ್ಧ ಜನತಾ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ತೀವ್ರ ಗದ್ದಲದಿಂದಾಗಿ ವಿಧಾನಸಭೆ ಮುಂದೂಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದಾರೆಂದು ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ್ದರು. ಅದೇ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಈಶ್ವರಪ್ಪ ಮೇಲೆ ಏಕೆ ದೇಶದ್ರೋಹ ಪ್ರಕರಣ ದಾಖಲಾಗಿಲ್ಲ ಎಂದು ಪ್ರಶ್ನಿಸಿದರು.

ಸದನದಲ್ಲಿ ಡಿ.ಕೆ ಶಿವಕುಮಾರ್‌ ಬಗ್ಗೆ ಮಾತನಾಡುವುದು ಬಿಟ್ಟು ಅವರ ತಂದೆ ಮೇಲೆ ಈಶ್ವರಪ್ಪ ಮಾತನಾಡಿದ್ದಾರೆ. ಈಶ್ವರಪ್ಪನಿಗೆ ರಾಜಕೀಯ ಭಾಷೆಯೇ ಗೊತ್ತಿಲ್ಲ. ಈಶ್ವರಪ್ಪ ಅವರ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್