Hijab Row : ಈಶ್ವರಪ್ಪ ವಜಾಕ್ಕೆ ಡೆಡ್ ಲೈನ್ ನೀಡಿದ ಸಿದ್ದರಾಮಯ್ಯ.. ಇಲ್ಲಾ ಅಹೋರಾತ್ರಿ ಧರಣಿ

By Kannadaprabha News  |  First Published Feb 17, 2022, 3:13 AM IST

* ಈಶ್ವರಪ್ಪ ವಜಾಕ್ಕೆ ಇಂದು 11 ಗಂಟೆಯ ಗಡುವು: ಸಿದ್ದು

* ಇಲ್ಲದಿದ್ದಲ್ಲಿ ಸದನದಲ್ಲಿ ಅಹೋರಾತ್ರಿ ಧರಣಿ
* ಈಶ್ವರಪ್ಪ ಪರ ಬಿಜೆಪಿ ನಾಯಕರ ಬ್ಯಾಟಿಂಗ್


 ಬೆಂಗಳೂರು(ಫೆ. 17)  ರಾಷ್ಟ್ರ ಧ್ವಜವನ್ನು ಅವಮಾನಿಸಿರುವ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರನ್ನು ಗುರುವಾರ ಬೆಳಗ್ಗೆ 11 ಗಂಟೆಯೊಳಗಾಗಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಪೊಲೀಸರು ಸುಮೊಟೋ ದೇಶದ್ರೋಹ (Sedition case) ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಸದನದಲ್ಲಿ (Karnataka Assembly) ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಎಚ್ಚರಿಕೆ ನೀಡಿದ್ದಾರೆ.

ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಹಾಗೂ ಬಿಜೆಪಿಯೂ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಬಿಜೆಪಿಯ ವಿರುದ್ಧ ಜನತಾ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇವೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Tap to resize

Latest Videos

ತೀವ್ರ ಗದ್ದಲದಿಂದಾಗಿ ವಿಧಾನಸಭೆ ಮುಂದೂಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದಾರೆಂದು ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ್ದರು. ಅದೇ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಈಶ್ವರಪ್ಪ ಮೇಲೆ ಏಕೆ ದೇಶದ್ರೋಹ ಪ್ರಕರಣ ದಾಖಲಾಗಿಲ್ಲ ಎಂದು ಪ್ರಶ್ನಿಸಿದರು.

ಸದನದಲ್ಲಿ ಡಿ.ಕೆ ಶಿವಕುಮಾರ್‌ ಬಗ್ಗೆ ಮಾತನಾಡುವುದು ಬಿಟ್ಟು ಅವರ ತಂದೆ ಮೇಲೆ ಈಶ್ವರಪ್ಪ ಮಾತನಾಡಿದ್ದಾರೆ. ಈಶ್ವರಪ್ಪನಿಗೆ ರಾಜಕೀಯ ಭಾಷೆಯೇ ಗೊತ್ತಿಲ್ಲ. ಈಶ್ವರಪ್ಪ ಅವರ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಬೆಳಗ್ಗೆ 11ಕ್ಕೆ ಅಂತಿಮ ತೀರ್ಮಾನ: ಬಿಜೆಪಿ ಆರಂಭದಿಂದಲೂ ಸಂವಿಧಾನವನ್ನು ಬದಲಿಸುವ ಹೇಳಿಕೆಯನ್ನು ನೀಡುತ್ತಾ ಬಂದಿದೆ. ಇದರ ಭಾಗವಾಗಿಯೇ ಈಶ್ವರಪ್ಪ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಮ್ಮ ಹೋರಾಟ ಶತಃಸಿದ್ಧ. ಸದನದ ಒಳಗೆ ಹಾಗೂ ಹೊರಗೆ ವಿವಿಧ ರೂಪದ ಹೋರಾಟವನ್ನು ಕೈಗೊಳ್ಳುತ್ತೇವೆ. ನಮ್ಮ ಹೋರಾಟದಲ್ಲಿ ಅಹೋರಾತ್ರಿ ಧರಣಿ ನಡೆಸುವ ಹೋರಾಟವೂ ಇದೆ. ನಾಳೆ ಬೆಳಗ್ಗೆವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ಬಳಿಕ ಬೆಳಗ್ಗೆ 11 ಗಂಟೆಗೆ ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದರು.

ಮನುಸ್ಮೃತಿ ಬಂದರೆ ಈಶ್ವರಪ್ಪ ಕುರಿ ಕಾಯಬೇಕಾಗುತ್ತದೆ: ಈಶ್ವರಪ್ಪ ಕೈಯಲ್ಲಿ ಆರ್‌ಎಸ್‌ಎಸ್‌ನವರೇ ಈ ಮಾತು ಹೇಳಿಸಿರಬಹುದು. ಈಶ್ವರಪ್ಪ ಅವರಿಗೆ ಗೊತ್ತಿದೆಯೋ ಇಲ್ಲವೋ. ಮನುಸ್ಮೃತಿ ಬಂದರೆ ಈಶ್ವರಪ್ಪ ಸಚಿವರಾಗಿ ಇರಲು ಆಗುತ್ತಾ? ಕುರಿ ಕಾಯ್ಕೊಂಡು ಇರಬೇಕಾಗುತ್ತದೆ. ಇಲ್ಲದಿದ್ದರೆ ಕಸ ಗುಡಿಸಿಕೊಂಡೇ ಬೇರೇನೋ ಮಾಡಿಕೊಂಡು ಜೀತದಾಳು ಆಗಿ ಇರಬೇಕಾಗುತ್ತದೆ. ರಾಷ್ಟ್ರಧ್ವಜ, ಸಂವಿಧಾನ ಬದಲಿಸಬೇಕು ಎಂಬುದೇ ಆರ್‌ಎಸ್‌ಎಸ್‌ ಅಜೆಂಡಾ. 2002ವರೆಗೂ ಆರ್‌ಎಸ್‌ಎಸ್‌ ನಾಗಪುರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಇದನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ವಿವಾದ ಎಬ್ಬಿಸಿದ್ದ ಹೇಳಿಕೆ: ಕೇಸರಿ ಧ್ವಜವನ್ನು ಪ್ರಪಂಚದ ಯಾವುದೇ ಮೂಲೆಯಲ್ಲಾದ್ರೂ ಹಾರಿಸ್ತೇವೆ, ಇವತ್ತಲ್ಲ ನಾಳೆ ಕೆಂಪು ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹಿಜಾಬ್ ಟೀಕಿಸುವ ಭರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು  ವಿವಾದಿತ ಹೇಳಿಕೆ ನೀಡಿದ್ದರು. ಇದಾದ ಮೇಲೆ ಸಮರ್ಥನೆ ನೀಡುವ ಕೆಲಸವನ್ನು ಮಾಡಿದ್ದರು. 

ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ಅವರು ನಾನು ಸ್ವತಂತ್ರ ಭಾರತದಲ್ಲಿದ್ದೇನೆ, ಕೇಸರಿ ಶಾಲು ಹಂಚಲು ನಾನು ಸಿದ್ದನಿದ್ದೇನೆ. ನಾನು ಎಷ್ಟು ಬೇಕಾದ್ರೂ ಕೇಸರಿ ಶಾಲು ಹಂಚುತ್ತೇನೆ. ನನ್ನ ಸ್ವಾತಂತ್ರ್ಯ ಕೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಬಂಡೆ ಲೂಟಿ ಮಾಡಿದ ವ್ಯಕ್ತಿ ಡಿಕೆಶಿ. ಅವರು ತಿಹಾರ್ ಜೈಲಿಗೆ ಹೋಗಿ ಬಂದವರು ಎಂದು ಡಿಕೆ ಶಿವಕುಮಾರ ಮೇಲೆ ಕೆಂಡ ಕಾರಿದ್ದರು. 

click me!