ಶಿವಮೊಗ್ಗ: ಬಿರುಸಿನ ಸಂಪರ್ಕ ಅಭಿಯಾನ ಆರಂಭಿಸಿದ ಅಪ್ಪ, ಮಗ

By Kannadaprabha News  |  First Published Mar 18, 2024, 4:00 AM IST


ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಬೆಂಬಲಿಗರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಈಡಾಗಬಾರದು ಎಂದು ಹೇಳಿದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ 


ಶಿವಮೊಗ್ಗ(ಮಾ.18):  ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಸಿಡಿದೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶುಕ್ರವಾರ ಘೋಷಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶನಿವಾರದಿಂದಲೇ ಬೆಂಬಲಿಗರು, ಕಾರ್ಯಕರ್ತರು, ನಾಯಕರನ್ನು ಭೇಟಿ ಮಾಡುವ ಕೆಲಸ ಬಿರುಸಿನಿಂದ ನಡೆಸಿದರು.

ಈಶ್ವರಪ್ಪ ಅವರು ಶನಿವಾರ ಸಾಗರ ತಾಲೂಕಿನ ಶ್ರೀಧರಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಹೋಮದಲ್ಲಿ ಭಾಗಿಯಾದರು. ಶ್ರೀಗಳ ಪಾದುಕೆ ದರ್ಶನ ಪಡೆದು ಪ್ರಾರ್ಥಿಸಿದರು. ಬಳಿಕ ಸಾಗರ ಪಟ್ಟಣದ ಅನೇಕ ಪ್ರಮುಖರನ್ನು ಭೇಟಿ ಮಾಡಿ, ತಮ್ಮ ಸ್ಪರ್ಧೆ ಮತ್ತು ಗೆಲುವಿನ ಕುರಿತು ಚರ್ಚೆ ನಡೆಸಿದರಲ್ಲದೇ, ಬೆಂಬಲ ಕೋರಿದರು. ಆ ಬಳಿಕ ಆನಂದಪುರ ಸೇರಿದಂತೆ ಸಾಗರ ತಾಲೂಕಿನ ವಿವಿಧ ಕಡೆಗಳಲ್ಲಿ ಹಿರಿಯ, ಕಿರಿಯ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದರು.

Tap to resize

Latest Videos

undefined

ಈಶ್ವರಪ್ಪ ಮಗನಿಗೆ ಟಿಕೆಟ್ ತಪ್ಪಲು ನಾವ್ಯಾರು ಕಾರಣವಲ್ಲ: ಬಿ.ಎಸ್.ಯಡಿಯೂರಪ್ಪ

ಆನಂದಪುರದ ಮಾಜಿ ಜಿ.ಪಂ. ಸದಸ್ಯ ಕೆ. ಅರುಣ್‌ಪ್ರಸಾದ್ ಭೇಟಿ ಮಾಡಿ ಬೆಂಬಲ ಕೋರಿದರು. ಈ ವೇಳೆ ಮಾತನಾಡಿದ ಅರುಣ್‌ಪ್ರಸಾದ್, ತಾವು ರಾಜಕೀಯದಿಂದ ನಿವೃತ್ತನಾಗಿದ್ದರೂ, ಈ ಚುನಾವಣೆಯಲ್ಲಿ ಪೂರ್ಣ ಬೆಂಬಲ ಕೊಡುವುದಾಗಿ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಆ ಬಳಿಕ ಶಿವಮೊಗ್ಗಕ್ಕೆ ಮರಳಿ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದರು. ಇತ್ತ ಪುತ್ರ ಕೆ.ಇ. ಕಾಂತೇಶ್ ಶಿವಮೊಗ್ಗ ಜಿಲ್ಲೆ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ, ನಾಯಕರ ಬೆಂಬಲ ಕೋರಿದರು. ಈ ವೇಳೆಯಲ್ಲಿ ತಮ್ಮ ತಂದೆ ಈಶ್ವರಪ್ಪನವರ ಗೆಲುವಿಗೆ ಪೂರ್ಣ ಬೆಂಬಲ ನೀಡುವಂತೆ ಕೋರಿದರು.

ತಮ್ಮ ನಿರ್ಧಾರ ಅಚಲ, ಗೊಂದಲ ಬೇಡ: ಈಶ್ವರಪ್ಪ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಬೆಂಬಲಿಗರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಈಡಾಗಬಾರದು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಮತ್ತು ಕೆಲವು ಕಡೆ ಈಶ್ವರಪ್ಪ ತಮ್ಮ ನಿರ್ಧಾರ ಬದಲಿಸಬಹುದು ಎಂಬ ಸುದ್ದಿಗಳು ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಅಂತಹ ಯಾವುದೂ ಇಲ್ಲ. ಈವರೆಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸಂಪರ್ಕಿಸಿದರೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಭಿನ್ನಾಭಿಪ್ರಾಯ ಬದಿಗಿಟ್ಟು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಬೇಕು: ಸಂಸದ ಬಿ.ವೈ.ರಾಘವೇಂದ್ರ

ನಾನು ನನ್ನ ನಿರ್ಧಾರ ಪ್ರಕಟಿಸಿದ ತಕ್ಷಣದಿಂದಲೇ ರಾಜ್ಯದ ಎಲ್ಲ ಕಡೆಗಳಿಂದ ಕರೆಗಳು ಬರುತ್ತಿವೆ. ನಿರ್ಧಾರವನ್ನು ಪ್ರಶಂಸಿದ್ದಾರೆ. ನಿಲುವಿನಿಂದ ಹಿಂದಕ್ಕೆ ಸರಿಯದಂತೆ ಹೇಳಿದ್ದಾರೆ. ಜೊತೆಗೆ ಬೆನ್ನಿಗೆ ನಿಲ್ಲುವುದಾಗಿಯೂ ತಿಳಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ಸಭೆಯಲ್ಲಿ ಹೋಗಲ್ಲ: ಈಶ್ವರಪ್ಪ

ಸೋಮವಾರ ಶಿವಮೊಗ್ಗಕ್ಕೆ ಭೇಟಿ ನೀಡಿ ಪ್ರಚಾರ ಸಭೆ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಈಶ್ವರಪ್ಪ ಭಾಗಿಯಾಗುವುದಿಲ್ಲ. ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ ಈಶ್ವರಪ್ಪ ಅವರು, ನಾನು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಆ ಸಭೆಯಲ್ಲಿ ಭಾಗಿಯಾವುದು ಸರಿಯಲ್ಲ. ಆದರೆ, ನರೇಂದ್ರ ಮೋದಿ ನನ್ನ ಹೃದಯದಲ್ಲಿ ಇದ್ದಾರೆ. ನನ್ನ ಪ್ರಚಾರದಲ್ಲಿಯೂ ಇರುತ್ತಾರೆ. ನಾನು ಸ್ಪರ್ಧಿಸಿದ ಬಳಿಕ ಪಕ್ಷ ನನ್ನನ್ನು ಉಚ್ಚಾಟಿಸಬಹುದು. ಆದರೆ, ಗೆದ್ದ ಬಳಿಕ ನನ್ನನ್ನು ಬಿಜೆಪಿ ಮತ್ತೆ ಸೇರಿಸಿಕೊಳ್ಳಲಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯಾಗಿ ಆಯ್ಕೆ ಆಗುವಾಗ ಕೈ ಎತ್ತುವವರಲ್ಲಿ ನಾನೂ ಒಬ್ಬನಾಗಿರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

click me!