
ಬೆಂಗಳೂರು (ನ.11): ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಅಷ್ಟೇ ಭಯೋತ್ಪಾದಕರಿಲ್ಲ, ಅದಕ್ಕಿಂತಲೂ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯೇ ಇದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸರಣಿ ಅತ್ಯಾಚಾರಿಗಳು ಹಾಗೂ ಉಗ್ರರಿಗೆ ಮೊಬೈಲ್ ಫೋನ್ ಸೌಲಭ್ಯ ಸೇರಿ ರಾಜಾತಿಥ್ಯ ಕಲ್ಪಿಸಿರುವ ಬಗ್ಗೆ ತೀವ್ರ ಸಿಡಿಮಿಡಿಗೊಂಡರು.
ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಾಗೂ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಪಾತಕಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿರುವುದು ನಾಚಿಕೆಗೇಡು. ಭಯೋತ್ಪಾದಕರು ಕೇವಲ ಕಾರಾಗೃಹದಲ್ಲಿ ಮಾತ್ರವಷ್ಟೇ ಇಲ್ಲ, ಅವರಿಗಿಂತ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯೂ ಇದ್ದಾರೆ. ಅವರು ಯಾರು ಎನ್ನುವುದು ನನಗಿಂತ ಹೆಚ್ಚಾಗಿ ನಿಮಗೇ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯದ ಜನ ಈ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎನ್ನುವುದು ಹಳೆಯ ವಿಚಾರವಲ್ಲ. ಹಿಂದೆ ಇದೇ ವಿಷಯದ ಬಗ್ಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು. ಆಮೇಲೆ ಇನ್ನೊಂದು ಪ್ರಕರಣದಲ್ಲಿ ಸ್ವತಃ ನ್ಯಾಯಾಲಯಗಳೇ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅದಾದ ನಂತರ ಮತ್ತೆ ಅಂಥವೇ ಪ್ರಕರಣಗಳು ಜೈಲಿನಲ್ಲಿ ಮರುಕಳಿಸುತ್ತಿವೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.
ಗುರುತರ ಅಪರಾಧ ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಹೊಸದಾಗಿ ಶುರುವಾದುದಲ್ಲ. ವಿಧಾನಸೌಧದಲ್ಲಿ ಉಗ್ರರನ್ನು ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಉಗ್ರರ ಬಗ್ಗೆ ಏನು ಚರ್ಚೆ ಮಾಡೋದು? ನೀವು ಯಾರ ಬಗ್ಗೆ ತನಿಖೆ ಮಾಡ್ತೀರಿ? ಇವೆಲ್ಲಾ ಕಾಲಹರಣ, ಸಮಯ ವ್ಯರ್ಥ ಮಾಡುವುದಕ್ಕೆ ನಡೆಯುತ್ತಿರುವ ತನಿಖೆಯಷ್ಟೇ ಎಂದು ಕಟುವಾಗಿ ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.