
ಬೆಂಗಳೂರು (ಜು.20): ಕೃಷ್ಣ ಮೇಲ್ದಂಡೆ-3 ಯೋಜನೆಗೆ ಭೂಸ್ವಾಧೀನ ಸೇರಿ ಯೋಜನೆಗೆ ಅಂದಾಜು ಮಾಡಿದ್ದ ವೆಚ್ಚವೇ 51,000 ಕೋಟಿ ರು. ಮಾತ್ರ. ಆದರೆ, ಈಗ ಅಧಿಕಾರಿಗಳ ನಿರ್ಲಕ್ಷ್ಯದ ಫಲವಾಗಿ ಭೂ ಸ್ವಾಧೀನವೊಂದಕ್ಕೆ 2.01 ಲಕ್ಷ ಕೋಟಿ ರು. ವೆಚ್ಚವಾಗಲಿದೆ. ಇಷ್ಟು ಮೊತ್ತ ಯಾವ ಸರ್ಕಾರ ಕೊಡಲು ಸಾಧ್ಯ? ಹೀಗಾದರೆ ಯೋಜನೆ ಭವಿಷ್ಯವೇನು? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ್ದ ‘ಭೂ ಸ್ವಾಧೀನ ಹಾಗೂ ನ್ಯಾಯಾಲಯ ಪ್ರಕರಣಗಳ ವ್ಯವಹರಣೆ’ ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಧಿಕಾರಿಗಳ ಬೇಜವಾಬ್ದಾರಿ ಭೂಸ್ವಾಧೀನ ಪರಿಹಾರ ಪ್ರಕ್ರಿಯೆಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲೇ ಸರ್ಕಾರಕ್ಕೆ ಕನಿಷ್ಟ 1 ಲಕ್ಷ ಕೋಟಿ ನಷ್ಟ ಉಂಟಾಗಲಿದೆ. ಭೂಸ್ವಾಧೀನಗೊಂಡ ಜಮೀನಿಗೆ ಅಧಿಕಾರಿಗಳು ನಿಗದಿಪಡಿಸಿದ ದರವನ್ನು ನ್ಯಾಯಾಲಯ ಮತ್ತಷ್ಟು ಹೆಚ್ಚಳ ಮಾಡಿದೆ. ಈಗಾಗಲೇ 29,400 ಎಕರೆ ಭೂ ಸ್ವಾಧೀನಗೊಂಡಿದ್ದು, 66,000 ಕೋಟಿ ರು. ಹಣವನ್ನು ಪರಿಹಾರವಾಗಿ ನೀಡಬೇಕಿದೆ. ಆದರೆ, ಇನ್ನೂ 1.04ಲಕ್ಷ ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದ್ದು, ಅಷ್ಟೂ ಭೂಮಿಗೆ ನ್ಯಾಯಾಲಯ ನಿಗದಿಪಡಿಸಿರುವ ದರದಲ್ಲೇ ಪರಿಹಾರ ನೀಡಿದರೂ ಅದಕ್ಕೆ ಸುಮಾರು 2.01ಲಕ್ಷ ಕೋಟಿ ಹಣ ಖರ್ಚಾಗಲಿದೆ. ಇದಕ್ಕೆ ಯಾರು ಹೊಣೆ? ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ಮೊತ್ತ 17,000 ಕೋಟಿ ರು. ಮಾತ್ರ. ಭೂಸ್ವಾಧೀನ ಸೇರಿ ಯೋಜನೆಯ ಅಂದಾಜು ಒಟ್ಟು ವೆಚ್ಚ 51,000 ಕೋಟಿ ರು. ಮಾತ್ರ. ಆದರೆ, ಭೂ ಸ್ವಾಧೀನಕ್ಕೆ ಮಾತ್ರ 2.01 ಲಕ್ಷ ಕೋಟಿ ರು. ಆಗಲಿದೆ ಎಂದು ಹೇಳಿದರು. ಇದೆಲ್ಲವೂ ಅಧಿಕಾರಿಗಳು ಸರಿಯಾದ ಸಮಯಕ್ಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸದ ಕಾರಣದಿಂದ ಆಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವ ಸರ್ಕಾರ ನೀಡಲು ಸಾಧ್ಯ?: ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ಸರ್ಕಾರದ ವಕೀಲರು, ನಿಗಮ ಹಾಗೂ ಜನ ಪ್ರತಿನಿಧಿಗಳಾದ ನಮ್ಮದೂ ತಪ್ಪಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಾಳೆ ಮಹತ್ವದ ಕೃಷ್ಣ ಮೇಲ್ದಂಡೆ ಯೋಜನೆ ಭವಿಷ್ಯ ಏನಾಗಲಿದೆ ಯೋಚಿಸಿ. ಯಾವ ಸರ್ಕಾರ ಮಾತ್ರ ಇಷ್ಟು ಹಣ ನೀಡಲು ಸಾಧ್ಯ? ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು. ಬೇರೆ ಯೋಜನೆಗಳಲ್ಲೂ ಇದೇ ರೀತಿಯ ಯಡವಟ್ಟುಗಳು ಆಗಿವೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಮಾಲೀಕರಿಗೆ 2017ರ ಪರಿಷ್ಕೃತ ದರದ ಪರಿಹಾರ ನೀಡಬೇಕಾದ ಪ್ರಕರಣದಲ್ಲಿ ಕೆಲ ಅಧಿಕಾರಿಗಳು 2023ರ ಪರಿಷ್ಕೃತ ದರ ನೀಡಿದ್ದಾರೆ.
ಎಲ್ಲಾ ಸರ್ವೇ ನಂಬರ್‌ಗಳ ನೀರಾವರಿ ಮತ್ತು ಖುಷ್ಕಿ ಜಮೀನುಗಳಿಗೆ ನಿಯಮ ಮೀರಿ ಒಂದೇ ದರ ನಿಗದಿ ಮಾಡಲಾಗಿದೆ. ಭೂ ಪರಿವರ್ತನೆಗೊಂದು ಅಭಿವೃದ್ಧಿಪಡಿಸದ ಭೂಮಿ ಪೈಕಿ ಶೇ.55 ರಷ್ಟು ಭೂಮಿಗೆ ಮಾತ್ರ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಆದರೆ, ಹಲವು ಪ್ರಕರಣಗಳಲ್ಲಿ ಶೇ.100 ರಷ್ಟೂ ಪರಿಹಾರ ನೀಡಲಾಗಿದೆ ಎಂದು ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಬರೆದಿದ್ದ ಪತ್ರವನ್ನು ಕಾರ್ಯಾಗಾರದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಓದಿ ಹೇಳಿದರು.
ತಂತ್ರಜ್ಞಾನ ಬಳಕೆಗೆ ಸಮಸ್ಯೆಯೇನು?: ಕೃಷಿ ಭೂಮಿಗೆ ಹೆಚ್ಚು ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ಭೂಸ್ವಾಧೀನಕ್ಕೂ ಮುನ್ನ ತಮ್ಮ ಖುಷ್ಕಿ ಜಮೀನಲ್ಲಿ ದಿಢೀರ್ ಸಸಿ ನೆಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕೋಲಾರ ಜಿಲ್ಲೆ ನರಸಾಪುರದಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಪರಿಹಾರ ನಿಗದಿ ಮಾಡುವ ಮುನ್ನ ಅಧಿಕಾರಿಗಳು ನಿಗದಿತ ಭೂಮಿಗೆ ಸಂಬಂಧಿಸಿದ ಸ್ಯಾಟಲೈಟ್ ಇಮೇಜ್ ಅನ್ನು ಒಮ್ಮೆ ಪರಿಶೀಲಿಸಲು ಸಮಸ್ಯೆ ಏನು?. ಇಡೀ ವಿಶ್ವದಲ್ಲೇ ಬೆಂಗಳೂರು ತಂತ್ರಜ್ಞಾನದಲ್ಲಿ ಅಗ್ರಮಾನ್ಯ ನಗರ. ಆದರೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಅಧಿಕಾರಿಗಳಿಗೆ ಏಕಿಷ್ಟು ತಾತ್ಸಾರ? ಎಂದು ಕೃಷ್ಣಬೈರೇಗೌಡ ಅಸಮಾಧಾನ ಹೊರಹಾಕಿದರು. ಕಾರ್ಯಾಗಾರದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿಗಳಾದ ಜಗದೀಶ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.