
ಕಲಬುರಗಿ (ಜು.20): ನಾನು ಒಂದೂವರೆ ವರ್ಷ ಪಕ್ಷ ಸಂಘಟನೆ ಮಾಡಿದ್ದು, ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿದ್ದೇನೆ. ನನ್ನ ಕೆಲಸದ ಬಗ್ಗೆ ನನಗೆ ಹಾಗೂ ಹೈಕಮಾಂಡಗೂ ತೃಪ್ತಿ ಇದೆ. ಇನ್ನು ಮರು ಆಯ್ಕೆ ಬಗ್ಗೆ ಹೈಕಮಾಂಡ್‌ನವರು ಏನು ನಿರ್ಧಾರ ಮಾಡುತ್ತಾರೆ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಮುಂದಿನ ರಾಜ್ಯಾಧ್ಯಕ್ಷ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದಲಿತರಿಗೆ ನೀಡಲಿ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯೇ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದು, ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿತ್ತು.
ಬಿಜೆಪಿ ಎಲ್ಲಾ ಜಾತಿ ಜನಾಂಗಕ್ಕೂ ಸಮಾನ ಪ್ರಾಧಾನ್ಯತೆ ನೀಡುತ್ತದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಜಿ.ಪರಮೇಶ್ವರ ಅವರಿಗೆ ಅನ್ಯಾಯ ಮಾಡಿದ್ದು, ಈ ಬಗ್ಗೆ ರಾಜ್ಯದಲ್ಲಿ ಚರ್ಚೆ ಆಗ್ತಿದೆ ಎಂದರು. ದಲಿತರಿಗೆ ಕಾಂಗ್ರೆಸ್‌ನಲ್ಲಿ ನ್ಯಾಯ ಸಿಗಲಿ ಅಂತ ನಾನು ದಲಿತರಿಗೆ ಸಿಎಂ ಸ್ಥಾನ ಕೊಡಲಿ ಎಂದಿದ್ದೇನೆ. ದಲಿತರ ಬಗ್ಗೆ ಗೌರವ ಇದ್ದರೆ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ನೀಡಬೇಕು. ಖರ್ಗೆ ಅವರ ಹೆಸರು ಹೇಳಿದ್ದಕ್ಕಾಗಿ ನನ್ನ ಮೇಲೆ ಸಿಎಂ ಕೋಪಗೊಂಡು ಹರಿಹಾಯ್ದಿದ್ದಾರೆ ಎಂದು ತಿವಿದರು.
ರಾಜ್ಯ ಸರ್ಕಾರದಿಂದ ಕನ್ನ: ರಾಜ್ಯ ಸರ್ಕಾರ ನೀಡಿದ ಅನ್ಯ ಭಾಗ್ಯಕ್ಕೆ ಸರ್ಕಾರವೇ ಕನ್ನ ಹಾಕುತ್ತಿದೆ. 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿ ಕೇವಲ 5 ಕೇಜಿ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಅವರ ಸಚಿವ ಸಂಪುಟ ತಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ತಮಗೆ ತಾವೇ ಶಹಬಾಸ್‌ಗಿರಿ ಕೊಡುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಗ್ಯಾರಂಟಿ ನಿಲ್ಲಿಸಬೇಕಾಗುತ್ತದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಶಾಸಕರು ಸಿದ್ದರಾಮಯ್ಯನವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕುಟುಕಿದರು. ಸಿಎಂ ಸಿದ್ದರಾಮಯ್ಯನವರಿಗೆ ಹಣಕಾಸು ಕ್ರೋಢಿಕರಿಸಲು ಸಾಧ್ಯವಾಗುತ್ತಿಲ್ಲ. ಒಂದೆಡೆ ಮಹಾನಗರ ಪಾಲಿಕೆ ನೌಕರರು, ಲಾರಿ ಮಾಲೀಕರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೂಡ ಸಿಗುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಸಿದ್ದರಾಮಯ್ಯ ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.