ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್‌ಗೆ ದಿನಾಂಕ ಪ್ರಕಟವಾಗುವ ಮುಂಚೆಯೇ ಕಾಂಗ್ರೆಸ್‌ನಿಂದ ಹೊಸ ಹೆಸರು ಕೇಳಿಬಂದಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಳಗಾವಿ, (ನ.21): ಬೆಳಗಾವಿ ಲೋಕಸಭಾ ಉಪಚುನಾವಣೆಗ ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಆಗಲೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಅದರಲ್ಲೂ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹೆಸರು ತೇಲಿ ಬಂದಿದೆ. ಇಂದು (ಶನಿವಾರ) ಎಂಬಿ ಪಾಟೀಲ್ ನೇತೃತ್ವದ ಸಮಿತಿ ನಡೆಸಿದ ಸಭೆಯಲ್ಲಿ ಜಿಲ್ಲೆಯ ನಾಯಕರುಗಳು ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸಿದ್ದಾರೆ.
ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್‌ನಿಂದ ತೇಲಿ ಬಂತು ಅಚ್ಚರಿ ಹೆಸರು
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ಲೋಕಸಭೆಗೆ ನಿಲ್ತೀನಿ ಅಂತಾ ನಾನೇನೂ ಅರ್ಜಿ ಹಾಕಿಲ್ಲ. ಸಭೆಯಲ್ಲಿ ಕೆಲವು ಮುಖಂಡರು ನನ್ನ ಹೆಸರನ್ನು ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಭ್ಯರ್ಥಿಗಳ ಆಯ್ಕೆ ಸಂಬಂದ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುತ್ತೇವೆ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಪರೋಕ್ಷವಾಗಿ ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದರು.
ಆಯ್ಕೆ ಸಮಿತಿ ಅಧ್ಯಕ್ಷರ ಮಾತು
ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮೊದಲ ಸುತ್ತಿನ ಸಭೆ ನಡೆಸಿದರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಏಳೆಂಟು ಅಭ್ಯರ್ಥಿಗಳು ಲೋಕಸಭೆ ಚುನಾವಣೆ ನಿಲ್ಲಲು ಆಕಾಂಕ್ಷಿಗಳಿದ್ದಾರೆ. ಕೆಲವರು ಸತೀಶ್ ಜಾರಕಿಹೊಳಿ ಹೆಸರನ್ನು ಸಹ ಸೂಚಿಸಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಮಾಹಿತಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿರನ್ನು ನಿಲ್ಲಿಸುವಂತೆ ಕೆಲವರು ಹೇಳಿದ್ದಾರೆ. ಇಂದು ಪ್ರಥಮ ಸಭೆ ಆಗಿದ್ದು ಒಂದು ವಾರದ ಬಳಿಕ ಮತ್ತೆ ಸಭೆ ಸೇರುತ್ತೇವೆ. ಅದಾದ ಬಳಿಕ ನಾವು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುತ್ತೇವೆ. ಬಳಿಕ ಅಭ್ಯರ್ಥಿ ಆಕಾಂಕ್ಷಿಗಳನ್ನು ಕೆಪಿಸಿಸಿ ಗೆ ಕಳುಹಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.