'ಜನಸಾಮಾನ್ಯರಿಗೆ ಹಲವು ಯೋಜನೆ ಕೊಟ್ಟಿದ್ದು ಕಾಂಗ್ರೆಸ್‌'

By Kannadaprabha NewsFirst Published Dec 23, 2022, 8:30 PM IST
Highlights

ಬಿಜೆಪಿ ಸರ್ಕಾರ ಸುಳ್ಳು ಹೇಳಿಕೆ ನೀಡಿ ವಿಶ್ವಾಸ ಕಳೆದುಕೊಳ್ಳುತ್ತಿದೆ: ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಅಶೋಕ ಪಟ್ಟಣ

ರಾಮದುರ್ಗ(ಡಿ.23): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜನ ಸಾಮಾನ್ಯರಿಗೆ ಅಗತ್ಯ ಇರುವ ಯೋಜನೆಗಳ ಭಾಗ್ಯಗಳನ್ನು ನೀಡಿದ್ದಾರೆ. ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಿದ್ದರಿಂದ ಕೊರೋನಾ ಸಂದರ್ಭದಲ್ಲಿ ಬಹಳಷ್ಟುಅನುಕೂಲವಾಯಿತು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿದರು. ತಾಲೂಕಿನ ಹೊಸಕೇರಿ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸ್ವಾಭಿಮಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.

ದೇಶದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಿದೆ. ಬಿಜೆಪಿ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಆಗಿರುವ ಕೆಲಸಗಳನ್ನು ಮರೆತಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮರಾಠರ ಹೋರಾಟಕ್ಕೆ ಬೆಂಬಲ ನೀಡಿದ ಸತೀಶ್ ಜಾರಕಿಹೊಳಿಗೆ ಮುಖಭಂಗ!

ತಮ್ಮ ಅಧಿಕಾರ ಅವಧಿಯಲ್ಲಿ .2600 ಕೋಟಿ ಅನುದಾನ, ವೀರಭದ್ರೇಶ್ವರ, ಬಸವೇಶ್ವರ ನೀರಾವರಿ ಶಾಶ್ವತ ಯೋಜನೆಗಳು ಸೇರಿದಂತೆ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿ ಮಾಡಿರುವೆ. ಅಧಿಕಾರ ಕೊನೆಯ ಹಂತದಲ್ಲಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗಳು ಉಳಿದುಕೊಂಡಿವೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮದುರ್ಗ ತಾಲೂಕನ್ನು ರಾಜ್ಯದಲ್ಲಿ ಮಾದರಿ ಮಾಡುವೆ ಎಂದು ಹೇಳಿದರು.

ನದಿಗೆ ಹೊಂದಿಕೊಂಡಿರುವ ಚಿಕ್ಕತಡಸಿ ಗ್ರಾಮವನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಹಿಂದಿನ ಚುನಾವಣೆಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಿದ್ದರು. ಆದರೂ ರಾಜ್ಯ ಸರ್ಕಾರ ಇತ್ತ ಗಮನ ಹರಿಸಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ 6 ತಿಂಗಳಲ್ಲಿ ಇದನ್ನು ಸ್ಥಳಾಂತರಿಸುವೆ ಎಂದು ದೇವರ ಮೇಲೆ ಪ್ರಮಾಣ ಮಾಡುವೆ ಎಂದು ಭರವಸೆ ನೀಡಿದರು.

ತಾಲೂಕಿನ ಚಿಕ್ಕತಡಸಿ, ಕರಡಿಗುಡ್ಡ, ಬೆನ್ನೂರ, ಹಿರೇತಡಸಿ, ಇಡಗಲ್ಲ, ಚಿಕ್ಕಮೂಲಂಗಿ, ಹಿರೇಮೂಲಂಗಿ ಲಿಂಗದಾಳ ಗ್ರಾಮಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸ್ವಾಭಿಮಾನ ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಬಸನಗೌಡ ಮಾದನಗೌಡ್ರ, ಚಂದ್ರಗೌಡ ಪ್ರಕಾಶ ತಳವಾರ, ರಮೇಶ ಹೊಳೆನ್ನವರ, ವಿರುಪಾಕ್ಷಿಗೌಡ ಕುಲಕರ್ಣಿ, ಪಿ.ಎಫ್‌.ಹಳ್ಳಿ, ಹನಮಂತ ಜೋಶಿ, ಉಸ್ಮಾನಸಾಬ ಕಾಕಂಡಕಿ, ಶಿವಪ್ಪ ಕಿತ್ತಲಿ, ಶಂಕರ ಅಂಗಡಿ, ಶಿವಯೋಗಿ ಗೊಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!