ಮೇಲ್ಮನೆಯಲ್ಲಿ ‘ನೆಹರು’ ಕದನ: ಕಾಂಗ್ರೆಸ್‌ ಆಕ್ರೋಶ, ಧರಣಿ

By Govindaraj SFirst Published Dec 23, 2022, 3:02 PM IST
Highlights

ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಅವರು ಬಳಸಿದ ‘ನೆಹರು ಕಾಲದ ಭ್ರಷ್ಟಾಚಾರ’ ಎಂಬ ಪದ ವಿಧಾನ ಪರಿಷತ್‌ನಲ್ಲಿ ತೀವ್ರ ಕೋಲಾಹಲ, ವಾಗ್ವಾದ, ಪ್ರತಿಭಟನೆಗೆ ಕಾರಣವಾಗಿ ಸದನವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದ ಘಟನೆ ನಡೆಯಿತು. 

ವಿಧಾನ ಪರಿಷತ್ (ಡಿ.23): ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌ ಅವರು ಬಳಸಿದ ‘ನೆಹರು ಕಾಲದ ಭ್ರಷ್ಟಾಚಾರ’ ಎಂಬ ಪದ ವಿಧಾನ ಪರಿಷತ್‌ನಲ್ಲಿ ತೀವ್ರ ಕೋಲಾಹಲ, ವಾಗ್ವಾದ, ಪ್ರತಿಭಟನೆಗೆ ಕಾರಣವಾಗಿ ಸದನವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದ ಘಟನೆ ನಡೆಯಿತು. ಕೊನೆಗೆ ರವಿಕುಮಾರ್‌ ಸದನದ ಕ್ಷಮೆಯಾಚಿಸಿ ತಾವು ಬಳಸಿದ ಪದ ಹಿಂಪಡೆದ ಮೇಲೆ ಕಲಾಪ ಮುಂದುವರೆಯಿತು.

ಶೂನ್ಯವೇಳೆ ನಂತರ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು, ವಿಶ್ವ ವಿದ್ಯಾಲಯಗಳಲ್ಲಿ ಕುಲಪತಿಗಳಾಗಬೇಕೆಂದರೆ 5-6 ಕೋಟಿ ರು. ಬೇಕು ಎಂದು ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಆಗ ಬಿಜೆಪಿ ಸದಸ್ಯ ಎನ್‌.ರವಿಕುಮಾರ್‌, ನೆಹರು ಅವರಿಂದ ಸೋನಿಯಾ ಗಾಂಧಿ ಅವರ ಕಾಲದವರೆಗೆ ಭ್ರಷ್ಟಾಚಾರದಿಂದ 3-4 ತಲೆಮಾರಿಗಾಗುವಷ್ಟುಆಸ್ತಿ ಗಳಿಸಿದ್ದೇವೆ ಎಂದು ಮಾಜಿ ಸ್ಪೀಕರ್‌ ರಮೇಶಕುಮಾರ್‌ ಭಾಷಣ ಮಾಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಗ್ಗೆಯೂ ಚರ್ಚೆಯಾಗಲಿ ಎಂದು ಹೇಳಿದರು.

Latest Videos

ಡಿಕೆಶಿ ಕುಕ್ಕರ್‌ ಬಾಂಬ್‌ ಹೇಳಿಕೆ ಬಗ್ಗೆ ರವಿ ಪ್ರಸ್ತಾಪದಿಂದ ಗದ್ದಲ

ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ಸಿಗರು ಸಭಾಪತಿಗಳ ಮುಂದೆ ಪ್ರತಿಭಟನೆ ನಡೆಸಿದಾಗ ಕಲಾಪವನ್ನು ಮುಂದೂಡಲಾಗಿತ್ತು. ಭೋಜನವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ಸಿಗರು ಧರಣಿಯನ್ನು ಮುಂದುವರಿಸಿದರು. ರವಿಕುಮಾರ್‌ ಬಳಸಿದ ಪದವನ್ನು ಕಡತದಿಂದ ತೆಗೆದು ಹಾಕುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿತಿಳಿಸಿದರೂ, ಇದಕ್ಕೆ ಒಪ್ಪದ ಹರಿಪ್ರಸಾದ್‌ ಅವರು ಪದ ಬಳಕೆ ಮಾಡಿದ್ದಕ್ಕೆ ರವಿಕುಮಾರ್‌ ಕ್ಷಮೆಯಾಚಿಸಬೇಕು. ರಮೇಶಕುಮಾರ ತಮ್ಮ ಭಾಷಣದಲ್ಲಿ ಆ ಪದ ಬಳಸಿಲ್ಲ. ಒಂದು ವೇಳೆ ಬಳಸಿದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಇಲ್ಲವೇ ರವಿಕುಮಾರ್‌ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.

ಆಗ ಕಲಾಪವನ್ನು ಮತ್ತೆ 10 ನಿಮಿಷಗಳ ಕಾಲ ಮುಂದೂಡಿದ ಸಭಾಪತಿಗಳು, ಎರಡು ಪಕ್ಷದವರನ್ನು ತಮ್ಮ ಕೊಠಡಿಗೆ ಕರೆಯಿಸಿ ಚರ್ಚೆ ನಡೆಸಿದರು. ಬಳಿಕ ಮತ್ತೆ ಶುರುವಾದ ಕಲಾಪದಲ್ಲೂ ಕಾಂಗ್ರೆಸ್ಸಿಗರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಹಿರಿಯ ಸದಸ್ಯರು, ಪದವನ್ನು ಹಿಂಪಡೆಯುವಂತೆ ರವಿಕುಮಾರ್‌ ಅವರಿಗೆ ಸೂಚಿಸಿದರು.

ಬಳಿಕ ರವಿಕುಮಾರ್‌, ನೆಹರು ಹೆಸರು ಬಳಸಿದ್ದಕ್ಕೆ ಕಾಂಗ್ರೆಸ್ಸಿಗರಿಗೆ ಘಾಸಿಯಾಗಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಆ ಪದವನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದರು. ಆದರೆ ಇದಕ್ಕೆ ಒಪ್ಪದ ವಿರೋಧ ಪಕ್ಷದವರು, ನೆಹರು ಹೆಸರು ಬಳಸಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆ ಕಾಲದ ಭ್ರಷ್ಟಾಚಾರ ಎಂದು ಬಳಸಿರುವುದಕ್ಕೆ ಆಕ್ಷೇಪವಿದೆ. ರಮೇಶಕುಮಾರ್‌ ಹಾಗೆ ಭಾಷಣ ಮಾಡಿಲ್ಲ ಎಂಬುದನ್ನು ವಿಡಿಯೋ ಮೂಲಕ ಈಗಾಗಲೇ ನಿಮಗೆ ತೋರಿಸಲಾಗಿದೆ. ಆದ ಕಾರಣ ರವಿಕುಮಾರ್‌ ತಮ್ಮ ಹೇಳಿಕೆಯನ್ನು ಸಂಪೂರ್ಣವಾಗಿ ಹಿಂಪಡೆದು ಕ್ಷಮೆಯಾಚಿಸಬೇಕು. ಅಲ್ಲಿವರೆಗೂ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಅನುದಾನದ ಕೊರತೆಯಿಂದ 50 ಹೊಸ ತಾಲೂಕಲ್ಲಿ ಆಸ್ಪತ್ರೆಯಿಲ್ಲ: ಸಚಿವ ಸುಧಾಕರ್‌

ರವಿಕುಮಾರ್‌ ಕ್ಷಮೆ: ಕೊನೆಗೆ ರವಿಕುಮಾರ್‌ ಮಾತನಾಡಿ, ನೆಹರು ಕಾಲದ ಭ್ರಷ್ಟಾಚಾರ ಎಂದು ಬಳಸಿರುವುದಕ್ಕೆ ಕ್ಷಮೆಯಾಚಿಸಿ ಆ ಪದವನ್ನು ಹಿಂಪಡೆಯುವೆ ಎಂದು ತಿಳಿಸಿದರು. ಜತೆಗೆ ರಮೇಶಕುಮಾರ ಭಾಷಣವನ್ನು ಜನರು ಹೇಗೆ ಅರ್ಥೈಸಿಕೊಂಡಿದ್ದಾರೋ ಅದೇ ರೀತಿ ನಾನು ಅರ್ಥೈಸಿಕೊಳ್ಳುತ್ತೇನೆ ಎಂದರು. ಬಳಿಕ ಬಿಜೆಪಿ ಸದಸ್ಯರೆಲ್ಲರೂ, ಇನ್ಮುಂದೆ ನಾಗಪುರವನ್ನು ಹಾವಿನಪುರ, ಆರ್‌ಎಸ್‌ಎಸ್‌ನ್ನು ರಾಷ್ಟ್ರೀಯ ಸುಲಬ್‌ ಶೌಚಾಲಯ ಎಂಬ ಪದ ಬಳಸದಂತೆ ಆಗ್ರಹಿಸಿದರು. ಸದಸ್ಯರಾದ ಎಚ್‌.ವಿಶ್ವನಾಥ, ಆಯನೂರ ಮಂಜುನಾಥ, ತೇಜಸ್ವಿನಿಗೌಡ, ಭಾರತಿ ಶೆಟ್ಟಿ, ಬೋಜೇಗೌಡ ಚರ್ಚೆಯಲ್ಲಿ ಭಾಗವಹಿಸಿದ್ದರು.

click me!