
ಮೈಸೂರು (ಅ.28): ಬಿಜೆಪಿ ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಂದೆಬಿಟ್ಟು ಹೇಡಿಗಳಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಟುವಾಗಿ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಯಲ್ಲಿ ಗುಂಡು ಹೊಡೆಯುವುದರಲ್ಲಿ ಎಚ್.ಡಿ. ಕುಮಾರಸ್ವಾಮಿ ನಿಸ್ಸೀಮರು. ಆಧಾರ ರಹಿತವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಧಾರ ರಹಿತವಾಗಿ ಆರೋಪಿಸಿ, ಹಿಗ್ಗಾಮುಗ್ಗ ಬೈಯುತ್ತಿರುವುದು ನಾಚಿಕೆಗೇಡು ಎಂದರು. ಬಿಜೆಪಿ ಮತ್ತು ಕುಮಾರಸ್ವಾಮಿ ಅವರಿಗೆ ವಿನಾಕಾರಣ ಆರೋಪ ಮಾಡುವ ಹುಚ್ಚು ಹಿಡಿದಿದೆ.
ಗ್ಯಾರಂಟಿ ಯೋಜನೆಗಳು ರಾಜ್ಯದ ಮೂಲೆ ಮೂಲೆಗೆ ತಲುಪಿರುವುದನ್ನು ಸಹಿಸಲಾಗುತ್ತಿಲ್ಲ. ಕುಮಾರಸ್ವಾಮಿ ಅವರದು ಇನ್ನೊಬ್ಬ ಒಕ್ಕಲಿಗ ಮುಖಂಡ ಬೆಳೆಯೋದು ಸಹಿಸಲಾಗದ ಮನಸ್ಥಿತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದನ್ನು ತಿಳಿಸಲು ಶ್ವೇತಪತ್ರ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗುತ್ತಿಗೆದಾರರ 80 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದ ನೀಚ ಸರ್ಕಾರ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣಕ್ಕೆ ಸೇರಿಸುತ್ತೇವೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಸ್ವಾಗತಾರ್ಹ. ಆದರೆ ಇದರಿಂದ ಕುಮಾರಸ್ವಾಮಿ ಅವರಿಗೆ ಆಗುವ ಸಮಸ್ಯೆ ಏನು ಎಂದು ಅವರು ಪ್ರಶ್ನಿಸಿದರು.
ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ: ಶ್ರೀರಾಮಸೇನೆ ಪ್ರಶ್ನೆ
ರಾಮನಗರ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದ ಬ್ರ್ಯಾಂಡ್. ಇದು ಬೆಂಗಳೂರು ವ್ಯಾಪ್ತಿಗೆ ಸೇರಿದರೆ ಉದ್ಯೋಗವಕಾಶ, ಕೈಗಾರಿಕ ಬೆಳವಣಿಗೆ, ಪ್ರವಾಸೋದ್ಯಮ, ಜನರ ಜೀನವ ಶೈಲಿ, ತಲಾದಾಯ, ಸಣ್ಣ ಉದ್ಯಮಗಳ ಬೆಳವಣಿಗೆ ಆಗುತ್ತದೆ. ಇದು ಅಪರಾಧವೇ? ಈ ವಿಚಾರವಾಗಿ ಕುಮಾರಸ್ವಾಮಿ ಮೈಮೇಲೆ ಚೇಳು ಬಿಟ್ಟುಕೊಂಡವರಂತೆ ಆಡಬೇಕೇ? ಎಂದು ಅವರು ಕುಟುಕಿದರು. ಹುಲಿ ಉಗುರು ಪ್ರಕರಣದಲ್ಲಿ ಕಾನೂನು ಎಲ್ಲರಿಗೂ ಒಂದೇ. ವರ್ತೂರ್ ಸಂತೋಷ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ದರ್ಶನ್ ಯಾರೇ ಇದ್ದರೂ ಪ್ರಕರಣ ದಾಖಲಿಸಬೇಕು. ತನಿಖೆಗೆ ಮುನ್ನವೇ ಕುಮಾರಸ್ವಾಮಿ ತಮ್ಮ ಪುತ್ರ ಧರಿಸಿದ್ದು ಫೈಬರ್ ಉಗುರು ಎಂದು ಸ್ಪಷ್ಟನೆ ನೀಡಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ನೈಸ್ ರಸ್ತೆಯ ಅಕ್ಕಪಕ್ಕ ಎಚ್.ಡಿ. ದೇವೇಗೌಡರ 43 ಜನರು ಬೇನಾಮಿ ಹೆಸರಿನಲ್ಲಿ ಆಸ್ತಿಗಳಿವೆ ಎಂದು ನ್ಯಾಯಾಲಯಕ್ಕೆ ಅಶೋಕ್ ಖೇಣಿ ವಂಶವೃಕ್ಷ ಸಲ್ಲಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಮೊದಲು ಉತ್ತರ ಕೊಡಬೇಕು. ಬಿಡದಿಯ ಕೇತಗಾನಹಳ್ಳಿ, ದೇವಗಿರಿ ವ್ಯಾಪ್ತಿಯಲ್ಲಿನ ಕುಮಾರಸ್ವಾಮಿ ಜಮೀನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿವೆ ಎಂದು ಅವರು ಹೇಳಿದರು. ಈಗ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಕರೆದಿರುವ ಕುಮಾರಸ್ವಾಮಿ ಅವರು 2011ರ ಜೂ. 27ರಂದು ಧರ್ಮಸ್ಥಳಕ್ಕೆ ಕರೆದಿದ್ದು ಏನಾಯಿತು? ಈಗ ಮತ್ತೆ ಧರ್ಮಸ್ಥಳಕ್ಕೆ ಏಕೆ ಕರೆಯುತ್ತಿದ್ದೀರಿ?
ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ
ಅಮಿತ್ ಶಾ ಅವರಿಂದ ಸುಪಾರಿ ಪಡೆದು ಆರೋಪ ಮಾಡುತ್ತಿದ್ದೀರಿ. ಪೆನ್ ಡ್ರೈವ್ ಎಲ್ಲಿ ಹೋಯಿತು? ನಿಮ್ಮ ಅವಧಿಯ ಭ್ರಷ್ಟಾಚಾರ ಪ್ರಪಂಚಕ್ಕೆಪ್ರಖ್ಯಾತವಾಗಿದೆ ಎಂದು ಅವರು ಟೀಕಿಸಿದರು. ಕುಮಾರಸ್ವಾಮಿ ಅವರು ಕಾಂಗ್ರೆಸ್ ಟೀಕಿಸುವ ಮೊದಲು ಸಿ.ಎಂ. ಇಬ್ರಾಹಿಂ ಅವರಿಗೆ ಉತ್ತರ ಕೊಡಬೇಕು. ಮುಂದಿನ 10 ವರ್ಷ ಕಾಂಗ್ರೆಸ್ ಆಡಳಿತವಿರುತ್ತದೆ. ಅಲ್ಲಿವರೆಗೆ ಸುಮ್ಮನಿರಬೇಕು ಎಂದು ಅವರು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ ರಾಮು, ಎಂ. ಶಿವಣ್ಣ, ಮಾಧ್ಯಮ ಸಂಚಾಲಕ ಕೆ. ಮಹೇಶ್, ಸೇವಾದಳದ ಗಿರೀಶ್ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.