
ಬೆಂಗಳೂರು (ಡಿ.16): ‘ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ಜಗಳವಿದೆ ಎನ್ನುತ್ತೀರಲ್ಲ ಅದಕ್ಕೆ ಒಂದೇ ಒಂದು ಉದಾಹರಣೆ ಇದ್ದರೆ ತೋರಿಸಿ. ಇದೆಲ್ಲವೂ ಶುದ್ಧ ಸುಳ್ಳು.’ ಹೀಗೆ ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಪೈಪೋಟಿಯಿದೆ ಎಂಬ ವದಂತಿಗಳಿಗೆ ತೆರೆ ಎಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ‘ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಉತ್ತಮ ಹೊಂದಾಣಿಕೆಯಿದೆ. ಆದರೆ ಬಿಜೆಪಿಯವರು ಈ ಬಗ್ಗೆ ಗುಲ್ಲೆಬ್ಬಿಸುತ್ತಾರೆ.
ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಹುದ್ದೆ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಭವಿಷ್ಯದ ಮುಖ್ಯಮಂತ್ರಿ ಕುರಿತು ಮಾತನಾಡುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಗುರುವಾರ ಸುದ್ದಿಗಾರರೆದುರು ತಿರುಗೇಟು ನೀಡಿದರು. ‘ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ತಮ್ಮ ನಾಯಕರ ಪರವಾಗಿ ಭಾವನೆ, ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ, ನಾನು ಹಾಗೂ ಸಿದ್ದರಾಮಯ್ಯ ಅವರು ಒಂದು ಸಣ್ಣ ಸನ್ನಿವೇಶದಲ್ಲಿ ಕಿತ್ತಾಡಿರುವುದನ್ನು ತೋರಿಸಿ ನೋಡೋಣ. ಬಿಜೆಪಿಯಲ್ಲಿನ ಕಿತ್ತಾಟದ ಬಗ್ಗೆ ಪಟ್ಟಿನೀಡಲೇ?’ ಎಂದು ಕೇಳಿದರು.
Karnataka Politics: ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ
ಒಟ್ಟಾಗಿ ಬಸ್ಸು ಯಾತ್ರೆ- ಡಿಕೆಶಿ: ‘ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಉತ್ತಮ ಹೊಂದಾಣಿಕೆಯಿದೆ. ನಮ್ಮನ್ನು ಕೂರಿಸಿಕೊಂಡು ಹೈಕಮಾಂಡ್ ಸಲಹೆ ನೀಡಿದೆ ಎಂಬುದೂ ಸುಳ್ಳು. ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜನವರಿಯಲ್ಲಿ ಒಟ್ಟಾಗಿ 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ನಡೆಸುತ್ತೇವೆ. ಬಳಿಕ ನಾನು ದಕ್ಷಿಣ, ಮಧ್ಯಕರ್ನಾಟಕ ಭಾಗ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಯಾತ್ರೆ ಮಾಡಲಿದ್ದೇವೆ. ಚುನಾವಣೆ ಹತ್ತಿರದಲ್ಲಿ ಸಿದ್ದರಾಮಯ್ಯ ಅವರು ದಕ್ಷಿಣ, ನಾನು ಉತ್ತರ ಭಾಗದಲ್ಲಿ ಪ್ರವಾಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಡಿಸೆಂಬರ್ 30ರಂದು ಕೃಷ್ಣಾ ನದಿ ನೀರಿನ ವಿಚಾರವಾಗಿ ಸಮಾವೇಶ ಮಾಡುತ್ತೇವೆ. ಬಳಿಕ ನಾನು ಹಾಗೂ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ಒಗ್ಗಟ್ಟಾಗಿ ಬಸ್ ಯಾತ್ರೆ ಮಾಡುತ್ತೇವೆ. ಈ ವೇಳೆ ಕರಾವಳಿ ಭಾಗದಲ್ಲೂ ಪ್ರವಾಸ ಮಾಡುತ್ತೇವೆ. ನಂತರ 224 ಕ್ಷೇತ್ರಗಳಲ್ಲಿ ಪ್ರತ್ಯೇಕ ಪ್ರವಾಸ ಮಾಡುತ್ತೇವೆ. ಅದರ ವೇಳಾಪಟ್ಟಿಯನ್ನೂ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ದೆಹಲಿ ನಾಯಕರು ನಿಮ್ಮನ್ನು ಕೂರಿಸಿ ಮಾತನಾಡಿಸಿದ್ದು ಸುಳ್ಳಾ ಎಂಬ ಪ್ರಶ್ನೆಗೆ, ‘ನಮ್ಮನ್ನು ಯಾರೂ ಕೂರಿಸಿ ಮಾತನಾಡಿಲ್ಲ. ನನ್ನನ್ನು ಹಾಗೂ ಶಾಸಕಾಂಗ ಪಕ್ಷದ ನಾಯಕರು, ಇತರ ನಾಯಕರನ್ನು ಕರೆಸಿ ಚುನಾವಣೆ ಸಿದ್ಧತೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ನಾನು ರಾಜ್ಯ ಅಧ್ಯಕ್ಷನಾಗಿ ಸಮೀಕ್ಷೆ ಮಾಡಿಸಿದ್ದೆ, ರಾಷ್ಟ್ರೀಯ ನಾಯಕರೂ ಸಮೀಕ್ಷೆ ಮಾಡಿಸಿದ್ದಾರೆ. ನಮ್ಮನ್ನು ಕೂರಿಸಿ ಸಲಹೆ ನೀಡಿದ್ದಾರೆ ಎಂಬುದೆಲ್ಲಾ ಸುಳ್ಳು. ನಾವೆಲ್ಲಾ ಒಟ್ಟಾಗಿ ಇರುತ್ತೇವೆ, ಇದು ಅಚಲ’ ಎಂದು ಸ್ಪಷ್ಟಪಡಿಸಿದರು.
ಉಗ್ರನ ಪರ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ
ಹೆಲಿಕಾಪ್ಟರ್ ಯಾತ್ರೆ ಮಾಡಲ್ಲ: ಹೆಲಿಕಾಪ್ಟರ್ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹೆಲಿಕಾಪ್ಟರ್ ಪ್ರವಾಸ ಮಾಡುತ್ತೇವೆ ಎಂದು ಮಾಧ್ಯಮಗಳಲ್ಲಿ ತೋರಿಸುತ್ತಿದ್ದರು. ನಮ್ಮದು ಯಾವ ಹೆಲಿಕಾಪ್ಟರ್ ಯಾತ್ರೆಯೂ ಇಲ್ಲ. ಹೆಲಿಕಾಪ್ಟರ್ ಯಾತ್ರೆ ಮಾಡೋಕೆ ಆಗುತ್ತಾ? ತುರ್ತು ಇದ್ದರೆ ವಿಮಾನದಲ್ಲಿ ಹೋಗುತ್ತೇವೆ. ಯಾವ ಹೆಲಿಕಾಪ್ಟರ್ ಯಾತ್ರೆಯೂ ಇಲ್ಲ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.