ಮಲೆನಾಡು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಿದೆ ಎಂದು ತಿಳಿಸಿದ ಡಿ.ಕೆ.ಶಿವಕುಮಾರ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.22): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ(ಶನಿವಾರ) ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಶ ನಡೆಯಿತು. ನಗರದ ಬೈಪಾಸ್ ರಸ್ತೆಯ ಆಶ್ರಯ ಬಡಾವಣೆಯ ಜಾಗದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಭಾಗವಹಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ ಸಿ.ಟಿ. ರವಿ ವಿರುದ್ಧ ಕಿಡಿ ಕಾರಿದ್ರು
ನಾನು ನಿಮ್ಮವನೆ ಒಂದು ಚಾನ್ಸ್ ಕೊಡಿ: ಡಿಕೆಶಿ
ನಾನು ನಿಮ್ಮವನೆ, ನನಗೆ ಒಂದು ಚಾನ್ಸ್ ಕೊಡಿ, ಇಲ್ಲಿಂದ ನೆಂಟಸ್ಥನವನ್ನು ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಹೇಳಿದರು. ನಗರದ ಬೈಪಾಸ್ ರಸ್ತೆಯಲ್ಲಿನಡೆದ ಪ್ರಜಾಧ್ವನಿ ಬಸ್ ಯಾತ್ರೆ ಸಮಾವೇಶವನ್ನು ಉದ್ಘಾಟಿಸಿ ಮಾತಾಡಿದ ಅವರು, ಮಲೆನಾಡು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಿದೆ ಎಂದು ತಿಳಿಸಿದರು. ಕರಾವಳಿ ಹಾಗೂ ಮಲೆನಾಡಿಗೆ ನಮ್ಮ ಆಧ್ಯತೆ ಇದೆ. ನಿಮ್ಮ ರಕ್ಷಣೆಗೆ ನಾವು ಸಿದ್ಧರಿದ್ದೇವೆ. ಈ ಸಂಬಂಧ ಈ ಭಾಗದ ಜಿಲ್ಲಾ ನಾಯಕರುಗಳ ಜೊತೆ ಚರ್ಚಿಸಿ ಬದುಕಿನಲ್ಲಿ ಬದಲಾವಣೆ ತರುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ಕಲಬುರಗಿ: ಕಾಂಗ್ರೆಸ್ ತೊರೆದು ಹಲವರು ಬಿಜೆಪಿ ಸೇರ್ಪಡೆ
ಇದಲ್ಲದೆ ರಾಜ್ಯದ ಪ್ರತಿ ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು ಮತ್ತು ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ ವರ್ಷಕ್ಕೆ 24ಸಾವಿರ ರೂ. ಹಣ ಹಾಗೂ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 10ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದರು.
ನಮ್ಮ ಕಾರ್ಯಕರ್ತರು, ಸ್ಥಳೀಯ ಮುಖಂಡರು ಪ್ರತಿ ಮನೆ ಮನೆಗೆ ತೆರೆಳಿ ಮಹಿಳೆಯರಿಂದ ಬ್ಯಾಂಕ್‌ಗೆ ಅರ್ಜಿ ಹಾಕಿಸಿ ಖಾತೆಗಳನ್ನು ತೆರೆಸುವ ಕೆಲಸ ಮಾಡಬೇಕು. ಅವರಿಗೆ ಗ್ಯಾರೆಂಟಿ ಕಾರ್ಡ್ ನೀಡಬೇಕು ಎಂದು ಸೂಚಿಸಿದರು.
ಬಿಜೆಪಿ ಸರ್ಕಾರ ಅತಿದೊಡ್ಡ ಭ್ರಷ್ಟ ಸರ್ಕಾರವಾಗಿದೆ. ಶೇ.40 ರಷ್ಟು ಕಮಿಷನ್, ಎಲ್ಲಾ ಹುದ್ದೆಗಳ ಮಾರಾಟ ನಡೆಯುತ್ತಿದೆ ಎಂದು ಕಂಟ್ರಾಕ್ಟರ್ ಸಂಘ ದೂರು ನೀಡಿದೆ. ವಿಧಾನ ಸೌಧದ ಪ್ರತಿ ಗೋಡೆಗಳು ಹಣಕ್ಕೆ ಬಾಯಿ ಬಿಡುತ್ತವೆ. ಇಷ್ಟಾದರೂ ಮುಖ್ಯಮಂತ್ರಿಗಳು ಇದಕ್ಕೆಲ್ಲಾ ಸಾಕ್ಷಿ ಕೊಡಿ ಅಂತಾರೆ. ಇದಾವ ಅಕ್ರಮಗಳೂ ನಡೆದಿಲ್ಲವಾದರೆ ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲಿಗೆ ಯಾಕೆ ಹೋಗುತ್ತಿದ್ದರು ಎಂದು ಪ್ರಶ್ನಿಸಿದರು.5 ವರ್ಷಗಳ ಕಾಲ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಸರ್ಕಾರಕ್ಕೆ ಒಂದೇ ಒಂದು ಕಳಂಕ ಬಂದಿರಲಿಲ್ಲ. ನಾವೂ ಇಂಧನ ಇಲಾಖೆಯಲ್ಲಿ ಸಾವಿರಾರು ಲೈನ್‌ಮೆನ್ ಇನ್ನಿತರೆ ಹುದ್ದೆ ತುಂಬಿದೆವು ಒಂದೇ ಒಂದರಲ್ಲಿ ಲಂಚ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು. ಇದೇ ಜಿಲ್ಲೆಯಿಂದ ನಾನು ನೆಂಟಸ್ಥನವನ್ನು ಬೆಳೆಸಿದ್ದು ಜಿಲ್ಲೆಯಲ್ಲಿ ಐದಕ್ಕೆ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.
ಸಿ.ಟಿ ರವಿ ವಿರುದ್ಧ ಕಿಡಿಕಾರಿದ ಸಿದ್ದು, ಹರಿಪ್ರಸಾದ್
ಸಮಾವೇಶದಲ್ಲಿ ಮಾತಾಡಿದ ಸಿದ್ದರಾಮಯ್ಯ ಹಾಗೂ ಬಿ ಕೆ ಹರಿಪ್ರಸಾದ್ ಕೇಂದ್ರ , ರಾಜ್ಯ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದ್ದಲ್ಲದೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿಟಿ ರವಿ ವಿರುದ್ಧ ಕಿಡಿ ಕಾರಿದರು.ವಿಧಾನ ಪರಿಷತ್ ನ ನಾಯಕ ಬಿ ಕೆ ಹರಿಪ್ರಸಾದ್ ಮಾತಾಡುವ ವೇಳೆಯಲ್ಲಿ ಈ ಜಿಲ್ಲೆ ಭಾವೈಕ್ಯತೆಯ ಜಿಲ್ಲೆ, ಇಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇದ್ದು ದೇಶದಲ್ಲೇ ಸಾಮರಸ್ಯದ ಸಂಕೇತವಾಗಿದ್ದು, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಇಲ್ಲಿನ ಶಾಸಕ ಸಿ.ಟಿ ರವಿ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳೆಲ್ಲ ಡಾಂಬರ್ ಕಿತ್ತು ಬಂದಿದ್ದು, ರಸ್ತೆಗಳಲ್ಲಿ ಶೇ.4೦ ಕಮಿಷನ್ ಹೊಡೆಯುತ್ತಿದ್ದಾರೋ ಅಥವಾ ಹಳೇ ಕಲ್ಲಿಗೆ ಹೊಸ ಬಿಲ್ ಮಾಡುತ್ತಿದ್ದಾರೋ ಎಂದು ವ್ಯಂಗ್ಯ ಮಾಡಿದರು. ಇಂತಹ ಶಾಸಕರ ಅವಶ್ಯಕತೆ ಈ ಜಿಲ್ಲೆಗೆ ಇಲ್ಲ ಇಂತವರನ್ನು ಬದಲಿಸುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬದಲಾವಣೆಗೆ ಇಲ್ಲಿನ ಜನರು ಮುಂದಾಗಬೇಕು. ಹಿಂದಿನ ಕಾಂಗ್ರೆಸ್ ಭದ್ರಕೋಟೆ ಮರುಕುಳಿಸಬೇಕು ಎಂದರು. ಇನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಮಾತಾಡಿ ಬಿಜೆಪಿಗೆ ಕೋಮುವಾದದಲ್ಲಿ ನಂಬಿಕೆ ಇಟ್ಟಿರುವ ಪಕ್ಷ , ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಮೂಲಕ, ಜನರ ಭಾವನೆಗಳನ್ನು ಕೆರಳಿಸಿ ಜಾತಿಯ ಅಫೀಮು ಕೊಟ್ಟು ಧರ್ಮಾಂಧರನ್ನಾಗಿ ಮಾಡುವ ಪಕ್ಷ. ಸಿ.ಟಿ ರವಿ ಆರ್‌ಎಸ್‌ಎಸ್‌ನಲ್ಲಿ ಟ್ರೆಂನಿಂಗ್ ಆಗಿರುವ ಗಿರಾಕಿ ಎಂದು ಲೇವಡಿ ಮಾಡಿದರು. ಪ್ರಜಾಧ್ವನಿ ಎಂದರೆ ನಮ್ಮ ಧ್ವನಿ ಅಲ್ಲ, ನಿಮ್ಮ ಧ್ವನಿ, ರಾಜ್ಯದ ಜನರ ಧ್ವನಿ, ನಿಮ್ಮ ಕಷ್ಟ ಗಳನ್ನು ಕೇಳುವ ನಿಟ್ಟಿನಲ್ಲಿ ಈ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಜೆಡಿಎಸ್ ಪಕ್ಷ ಸಿದ್ಧಾಂತಗಳಿಗೆ ಬದ್ಧವಾಗಿರುವ ಪಕ್ಷವಲ್ಲ ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಗೆ ಬೇಕಾದರೂ ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡ ಪಕ್ಷ. ಕೋಮುವಾದದೊಂದಿಗೆ ರಾಜಿ ಮಾಡಿಕೊಳ್ಳದ ಪಕ್ಷ ಇದ್ದರೇ ಅದು ಕಾಂಗ್ರೆಸ್ ಪಕ್ಷ ಎಂದರು. ಆರ್‌ಎಸ್‌ಎಸ್‌ನವರು ಸಂವಿಧಾನ ವಿರೋಧಿಗಳು, ಚಿಂತನ ಗಂಗಾ ಪುಸ್ತಕ ಬರೆದ ಗೋಳ್ವಾಕರ್ ಆ ಸಂಘಟನೆಯವರು. ಅಂತಹ ಸಂಘಟನೆ ಗರಡಿಯಲ್ಲಿ ಬೆಳೆದಿರುವ ಸಿ.ಟಿ ರವಿಗೆ ಸಂವಿಧಾನ ಹೇಗೆ ಅರ್ಥವಾಗುತ್ತದೆ ಎಂದು ಪ್ರಶ್ನಿಸಿದರು.ಸಾರ್ವಕರ್‌ರನ್ನು ಪೂಜಿಸುವ ಮತ್ತು ಮಹಾತ್ಮಗಾಂಧೀಜಿಯವರನ್ನು ಕೊಂದ ಗೂಡ್ಸೆ ಪೂಜಿಸುವವರಿಗೆ ಜಾತ್ಯಾತೀತ ತತ್ವ, ಪ್ರಜಾಪ್ರಭುತ್ವ ತತ್ವ, ಸಂವಿಧಾನದ ಮೇಲೆ ಗೌರವ ಇರಲು ಸಾಧ್ಯವಿಲ್ಲ. ಆದ್ದರಿಂದ ಸಿ.ಟಿ ರವಿ ಅಫೀಮ್ ಕುಡಿದವರ ತರ ಮಾತನಾಡುತ್ತಾನೆ. ಸಿ.ಟಿ ರವಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಅವರು ರಾಜಕೀಯದಲ್ಲಿ ಇರಲು ಯೋಗ್ಯರಲ್ಲ ಎಂದು ಟೀಕೆ ಮಾಡಿದರು.ದೇಶ ಭಕ್ತಿಯ ಬಗ್ಗೆ ಮಾತನಾಡುವ ಸಿ.ಟಿ.ರವಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರನ್ನು ಕೊಂದ ಪರಿವಾರಕ್ಕೆ ಸೇರಿದವರು. ಇವರಿಂದ ದೇಶಭಕ್ತಿ, ಭ್ರಷ್ಟಾಚಾರದ ಬಗ್ಗೆ ಪಾಠ ಕಲಿಯಬೇಕಾ ಎಂದು ವಾಗ್ದಾಳಿ ನಡೆಸಿದರು. ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಲ್.ಶಂಕರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜೀತ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ರೋಜಿ ಜಾರ್ಜ್, ಮಾಜಿ ಸಚಿವೆ ಮೋಟಮ್ಮ, ಡಿ.ಕೆ.ತಾರಾದೇವಿ ಸಿದ್ಧಾರ್ಥ, ಗಾಯತ್ರಿ ಶಾಂತೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಎಸ್.ಎಂ.ನಾಗರಾಜ್, ವೈಎಸ್‌ವಿದತ್ತ, ಜಿ.ಹೆಚ್. ಶ್ರೀನಿವಾಸ್, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಇತರರು ಇದ್ದರು.