ಭಾರತ್‌ ಜೋಡೋ ಯಾತ್ರೆ ಬಳಿಕ ದೇಶದಲ್ಲಿ ಬದಲಾವಣೆ ಗಾಳಿ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Sep 23, 2022, 12:22 PM IST

ಭ್ರಷ್ಟಾಚಾರ ತೊಲಗಿಸಲು ರಾಹುಲ್‌ ಗಾಂಧಿ ಯಾತ್ರೆ, ಭಾರತ್‌ ಜೋಡೋ ಯಾತ್ರೆ ಜೊತೆ ಹೆಜ್ಜೆ ಹಾಕಲು ಡಿಕೆಶಿ ಕರೆ


ದಾವಣಗೆರೆ(ಸೆ.23):  ಭಾರತ್‌ ಜೋಡೋ ಪಾದಯಾತ್ರೆ ಮೂಲಕ ದೇಶದಲ್ಲಿ ಒಂದು ದೊಡ್ಡ ಬದಲಾವಣೆಯ ಗಾಳಿಯು ಮುಂದಿನ ದಿನಗಳಲ್ಲಿ ಶುರುವಾಗಲಿದೆ. ನೀವೆಲ್ಲರೂ ಸಹ ಈ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು. ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ಗುರುವಾರ ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ್‌ರ 55ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಮರಸ್ಯ ನೆಲೆಸಬೇಕು. ರೈತರ ಬದುಕು ಹಸನಾಗಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕೆಂದು ನಮ್ಮ ನಾಯಕ ರಾಹುಲ್‌ ಗಾಂಧಿ ಚಿತ್ರದುರ್ಗದ ಮಾರ್ಗವಾಗಿ ರಾಜ್ಯದಲ್ಲಿ 510 ಕಿಮೀ ಪಾದಯಾತ್ರೆ ಕೈಗೊಂಡಿದ್ದಾರೆ ಎಂದರು.

ದಾವಣಗೆರೆ ಜಿಲ್ಲೆಯ ಪಾದಯಾತ್ರೆ ಜವಾಬ್ಧಾರಿಯನ್ನು ಎಸ್ಸೆಸ್‌ ಮಲ್ಲಿಕಾರ್ಜುನ, ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪಗೆ ವಹಿಸಲಾಗಿದೆ. ನೀವೆಲ್ಲಾ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಹ ಬಂದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು. ನಿಮ್ಮ ಪ್ರತಿ ಹೆಜ್ಜೆ ದೇಶಕ್ಕೆ ಒಂದು ಕೊಡುಗೆಯಾಗಲಿದೆ. ಎಸ್ಸೆಸ್‌ ಮಲ್ಲಿಕಾರ್ಜುನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ವಿಧಾನಸೌಧದಲ್ಲಿ ಬಂದು ಕುಳಿತುಕೊಳ್ಳುವಂತೆ ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು.

Latest Videos

undefined

ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋಗೆ ಜನರಿಂದ ವ್ಯಾಪಕ ಸ್ಪಂದನೆ: ರಮಾನಾಥ ರೈ

ಸದನದಲ್ಲಿ ಬಿಜೆಪಿ ಸರ್ಕಾರದ ಶೇ.40 ಕಮಿಷನ್‌ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇದರ ಮಧ್ಯೆಯೂ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಮೇಲಿನ ಅಭಿಮಾನಕ್ಕಾಗಿ ನಾವು ನಾಲ್ಕು ಜನ ಹೆಲಿಕಾಫ್ಟರ್‌ನಲ್ಲಿ ಬಂದಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿ ಸರ್ಕಾರದ ಶೇ.40 ಕಮಿಷನ್‌ ಬಗ್ಗೆ ಪ್ರಶ್ನಿಸಬೇಕಿದ್ದ ಕಾರಣಕ್ಕಾಗಿ ಬಂದಿಲ್ಲ. ಹಿಂದೆ ಶಾಮನೂರು ಶಿವಶಂಕರಪ್ಪ, ಎಸ್ಸೆಸ್‌ ಮಲ್ಲಿಕಾರ್ಜುನ ಸಚಿವರಿದ್ದಾಗ ಸಚಿವ ಸಂಪುಟದ ಪ್ರತಿ ಸಭೆಯಲ್ಲೂ ದಾವಣಗೆರೆ ಜಿಲ್ಲೆಯ ಜನರ ಬದುಕು, ಬದಲಾವಣೆ, ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿ, ಅನುದಾನ ತರುತ್ತಿದ್ದರು ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಉಚಿತವಾಗಿ ಕೋವಿಡ್‌ ವ್ಯಾಕ್ಸಿನ್‌ ಕೊಡದಿದ್ದ ವೇಳೆ ಶಾಮನೂರು ಶಿವಶಂಕರಪ್ಪ, ಮಗ ಮಲ್ಲಿಕಾರ್ಜುನ ಕೋಟ್ಯಾಂತರ ರು. ಹಣ ಖರ್ಚು ಮಾಡಿ, ಲಸಿಕೆ ತರಿಸುವ ಮೂಲಕ ಜಿಲ್ಲೆಯ ಜನರ ಜೀವ ಉಳಿಸಿದ್ದಾರೆ. ಇಡೀ ದೇಶದಲ್ಲೇ ದೊಡ್ಡ ದಾಖಲೆ ಇದು. ಹುಟ್ಟು-ಸಾವಿನ ಮಧ್ಯೆ ಯಾರು ಏನು ಮಾಡಿದ್ದಾರೆನ್ನುವುದು ಮುಖ್ಯವಲ್ಲ ಎಂದರು.

ಶಾಮನೂರು ಕುಟುಂಬದೊಡನೆ ನಾವಿದ್ದೇವೆ

ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಕುಟುಂಬದೊಂದಿಗೆ ನಾನು ಮತ್ತು ಕಾಂಗ್ರೆಸ್‌ ಪಕ್ಷ ಇದೆಯೆಂಬುದನ್ನು ತಿಳಿಸಲು ನಾನು ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಜನರು ನನ್ನ ಮಿತ್ರ ಮಲ್ಲಿಕಾರ್ಜುನನ ಕೈ ಹಿಡಿಯಲಿಲ್ಲ. ಹೀಗೆ ಮಾಡಿದ್ದಕ್ಕೆ ನಿಮಗೇನಾದರೂ ಲಾಭ ಆಯಿತಾ? ನಿಮ್ಮ ಆಸ್ತಿ ದ್ವಿಗುಣವಾಗಿದೆಯೇ? ನಿಮ್ಮ ಖಾತೆಗೆ 15 ಲಕ್ಷ ರು. ಸಂದಾಯವಾಯಿತೆ? ನೀವೆಲ್ಲಾ ನೆಮ್ಮದಿಯಾಗಿ ಬದುಕುತ್ತಿದ್ದೀರಾ? ಇದ್ಯಾವುದೂ ಇಲ್ಲ. ಯಾವ ಲಾಭಕ್ಕೆ, ಯಾವ ಪುರುಷಾರ್ಥಕ್ಕೆ ಮತದಾರ ವಂಚನೆ ಮಾಡಿದನೆಂಬ ಬಗ್ಗೆ ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಅವರು ಹೇಳಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಫೋಟೋ, ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್!

ಇದು ಒಂದು ವ್ಯಕ್ತಿಯ ಕುಟುಂಬವಲ್ಲ. ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಸರ್ಕಾರದ ಕೆಲಸವನ್ನು ಶಾಮನೂರು ಕುಟುಂಬ ಒಂದಿಷ್ಟುಹಗುರ ಮಾಡಿದೆ. ಕೆಲವರು ಅಸೂಯೆಯಿಂದ ಏನೇನೋ ಮಾತನಾಡಬಹುದು. ಆದರೆ, ಶಾಮನೂರು ಕುಟುಂಬದ ಸೇವೆ, ಮಾನವೀಯ ಗುಣ, ಪರೋಪಕಾರದ ಗುಣಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಸ್ನೇಹಿತ ಅದಾನಿ ಆಸ್ತಿ ಒಂದೇ ವರ್ಷದಲ್ಲಿ 10 ಸಾವಿರ ಕೋಟಿ ರು.ಗೆ ಏರಿಕೆಯಾಗಿದೆ. ಇದೆಲ್ಲಾ ಬಿಜೆಪಿ ಮುಖಂಡರ ಬೇನಾಮಿ ಆಸ್ತಿಯಾಗಿದೆ. ಅದಾನಿಗೆ ಬಂದ ಆದಾಯದ ರೂಪದಲ್ಲಿ ಬಿಜೆಪಿ ಮುಖಂಡರು ಅದಾನಿ ಬಳಿ ಬೇನಾಮಿ ಆಸ್ತಿ ಮಾಡಿದ್ದಾರೆ ಅಂತ ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ.  
 

click me!