
ಚಿಕ್ಕಮಗಳೂರು(ಸೆ.23): ವಿಚ್ಛಿದ್ರಕಾರಕ ಶಕ್ತಿಗಳಿಂದ ಒಡೆದು ಹೋಗಿರುವ ದೇಶದ ಜನರ ಮನಸ್ಸುಗಳನ್ನು ಜೋಡಿಸುವ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ’ ಯಾತ್ರೆಗೆ ವ್ಯಾಪಕ ಜನಸ್ಪಂದನೆ ದೊರೆಯುತ್ತಿದೆ ಎಂದು ಮಾಜಿ ಸಚಿವ ಮತ್ತು ಕೆಪಿಸಿಸಿ ವೀಕ್ಷಕ ಬಿ.ರಮಾನಾಥ ರೈ ಹೇಳಿದರು. ಗುರುವಾರ ನಗರದ ಕ್ಯಾಥೋಲಿಕ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ‘ಭಾರತ್ ಜೋಡೋ’ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಈ ಯಾತ್ರೆಯ ಮೂಲಕ ದೇಶದಲ್ಲಿ ಮಕ್ಕಳು, ಯುವ ಜನರು, ವಿದ್ಯಾರ್ಥಿಗಳು, ಹಿರಿಯರು, ಚಿಂತಕರು ಸೇರಿದಂತೆ ಎಲ್ಲ ವರ್ಗಗಳ ಜನರು ಒಟ್ಟುಗೂಡುತ್ತಿದ್ದಾರೆ. ಒಡೆದಿರುವ ಜನರ ಮನಸ್ಸುಗಳನ್ನು ಜೋಡಿಸುವ ಈ ಯಾತ್ರೆ ಇತಿಹಾಸದ ಪುಟ ಸೇರಲಿದೆ ಎಂದು ತಿಳಿಸಿದರು.
ಟೀ ಮಾರಾಟ ಮಾಡುವವರಿಂದ ಹಿಡಿದು ಬಡವರು, ಕೃಷಿಕರು, ಕೂಲಿ ಕಾರ್ಮಿಕರು, ಚಿಂತಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಉದ್ಯಮಿಗಳು, ವರ್ತಕರು, ಸಾಮಾನ್ಯ ಗ್ರಾಹಕರು, ಮಹಿಳೆಯರು ಒಳಗೊಂಡಂತೆ ಎಲ್ಲ ವರ್ಗ, ಧರ್ಮಗಳ ಜನರೊಂದಿಗೆ ಪರಸ್ಪರ ಸಮಾಲೋಚನೆ ನಡೆಸುತ್ತಿರುವುದರಿಂದ ಹೆಚ್ಚಿನ ಅನುಭವ ರಾಹುಲ್ ಗಾಂಧಿ ಅವರಿಗೆ ದೊರೆಯಲಿದೆ ಎಂದರು.
ದೇಶ ರಕ್ಷಣೆಗಾಗಿ ರಾಹುಲ್ ಗಾಂಧಿಯಿಂದ ಭಾರತ್ ಜೋಡೋ ಯಾತ್ರೆ: ಬಿ.ಕೆ.ಹರಿಪ್ರಸಾದ್
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಉದ್ದೇಶದಿಂದ ಮಹಾತ್ಮ ಗಾಂಧೀಜಿ ಅವರು ನಡೆಸಿದ್ದ ದಂಡಿಯಾತ್ರೆ ಹಾಗೂ ಬೇರೆ ಬೇರೆ ಉದ್ದೇಶಗಳೊಂದಿಗೆ ವಿನೋಬಾ ಭಾವೆ, ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರು ನಡೆಸಿದ್ದ ಯಾತ್ರೆಗಳಂತೆಯೇ ಜನಪರವಾದ ಮತ್ತು ಭಾರತದ ಜನರನ್ನು ಜೋಡಿಸುವ ಈ ಯಾತ್ರೆಗೆ ಈ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರ ಕಾರ್ಯಕರ್ತರು ಭಾಗವಹಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಪಕ್ಷದ ಕಾರ್ಯಕರ್ತರು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಚಿಂತಕರು, ಯುವ ಜನರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಹೇಳಿದರು.
ಮತ್ತೆ ಸಿದ್ದು, ಡಿಕೆಶಿ ಒಳಬೇಗುದಿ ಬಹಿರಂಗ: ಅಕ್ಕಪಕ್ಕ ಅರ್ಧಗಂಟೆ ಕೂತಿದ್ದರೂ ಮಾತಿಲ್ಲ..!
ಜಿಲ್ಲಾ ಕಾಂಗ್ರೆಸ್‌ನ ಪ್ರತಿ ಬ್ಲಾಕ್ ಗಳಲ್ಲಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಬೇಕು. ಅ.9 ರಂದು ತುರುವೇಕೆರೆ, ಗುಬ್ಬಿಯಲ್ಲಿ ನಡೆಯುವ ಯಾತ್ರೆಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ತಂಡ ಭಾಗವಹಿಸಲಿದೆ. ಅ.10 ರಂದು ಗುಬ್ಬಿ ಮತ್ತು ಶಿರಾದಲ್ಲಿ ನಡೆಯುವ ಯಾತ್ರೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ತಂಡಗಳು, ಅ.12 ರಂದು ಹಿರಿಯೂರು ಮಾರ್ಗದಲ್ಲಿ ನಡೆಯುವ ಯಾತ್ರೆಯಲ್ಲಿ ತರೀಕೆರೆ, ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ತಂಡಗಳು ಭಾಗವಹಿಸಲು ನಿಗಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸೆಸ್, ಪ್ರಸನ್ನ, ಜಿಪಂ ಮಾಜಿ ಅಧ್ಯಕ್ಷರಾದ ಎ.ಎನ್.ಮಹೇಶ್, ಧೃವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಮಂಜೇಗೌಡ, ಚಂದ್ರಮೌಳಿ, ಕಲ್ಲೇಶ್, ಫಾರೂಕ್, ನಟರಾಜ್, ಜಿಪಂ ಮಾಜಿ ಸದಸ್ಯ ಆದಿಲ್, ಮುಖಂಡರಾದ ಬಿ.ಎಚ್.ಹರೀಶ್, ದೋರನಾಳು ಪರಮೇಶ್, ಗೋಪಿಕೃಷ್ಣ, ದರ್ಶನ್, ಚಂದ್ರಪ್ಪ, ಶಬೀರ್, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.