‘ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಾತ್ರವನ್ನು ನಿರಾಕರಿಸಲು ಆಗುವುದಿಲ್ಲ. ಅವರಿಗೆ ಧಮ್ ಹಾಗೂ ತಾಕತ್ತು ಇದ್ದರೆ ನ್ಯಾಯಾಂಗ ತನಿಖೆ ನಡೆಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರು (ನ.20): ‘ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಾತ್ರವನ್ನು ನಿರಾಕರಿಸಲು ಆಗುವುದಿಲ್ಲ. ಅವರಿಗೆ ಧಮ್ ಹಾಗೂ ತಾಕತ್ತು ಇದ್ದರೆ ನ್ಯಾಯಾಂಗ ತನಿಖೆ ನಡೆಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಬೊಮ್ಮಾಯಿ ಯತ್ನಿಸುತ್ತಿದ್ದಾರೆ.
ಆದರೆ, ಈ ಸಮರದಲ್ಲಿ ಅವರು ಸೋಲಲಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮಾತ್ರವಲ್ಲ ಜೈಲಿಗೂ ಹೋಗುತ್ತಾರೆ. ಹೀಗಾಗಿ ಮೊದಲು ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಸಚಿವರು ಹಾಗೂ ಅಧಿಕಾರಿಗಳ ಬಂಧನವಾಗಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಲುಮೆ ಸಂಸ್ಥೆ ಮೇಲೆ ಪೊಲೀಸರು ದಾಳಿ ವೇಳೆ ಲಭಿಸಿದೆ ಎನ್ನಲಾದ ಸಚಿವರೊಬ್ಬರ ಸೀಲ್ ಹೊಂದಿರುವ ಲೆಟರ್‌ಹೆಡ್ ಪ್ರದರ್ಶಿಸಿದರು.
Voters Data Theft Case: ಮತ ಮಾಹಿತಿ ಕದ್ದವರ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಗಡುವು
‘ಇದು ಪೊಲೀಸರು ಚಿಲುಮೆ ಸಂಸ್ಥೆ ಮೇಲೆ ನಡೆಸಿದ ದಾಳಿ ವೇಳೆ ದೊರೆತಿದೆ. ಇದು ಯಾರ ಹೆಸರು ಎಂಬುದು ನನಗೆ ಗೊತ್ತಿಲ್ಲ, ನನಗೆ ಕನ್ನಡ ಓದಲು ಬರುವುದಿಲ್ಲ. ನೀವೇ ಇದನ್ನು ಓದಿಕೊಂಡು ಜನರಿಗೆ ತಿಳಿಸಿ. ಇನ್ನು ಸಂಸ್ಥೆಯಲ್ಲಿ ನೋಟು ಎಣಿಸುವ ಯಂತ್ರ ದೊರೆತಿದೆ. ಜತೆ ಇನ್ನೂ ಸಾಕಷ್ಟುದಾಖಲೆಗಳು ದೊರೆತಿರುವ ಬಗ್ಗೆ ಅಲ್ಲಿನವರೇ ಬಂದು ನಮಗೆ ಮಾಹಿತಿ ನೀಡಿದ್ದಾರೆ. ಎಲ್ಲವನ್ನೂ ಒಂದೊಂದಾಗಿ ಹೊರಗೆ ತರುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಜಡ್ಜ್ ಎದುರೇ ವಿಡಿಯೋ ಮಾಡಬೇಕು: ಚಿಲುಮೆ ಸಂಸ್ಥೆ ಕಚೇರಿ ಮೇಲೆ ದಾಳಿ ನಡೆಸಿದಾಗ ಸಿಕ್ಕಿರುವ ಸಾಕ್ಷ್ಯಾಧಾರಗಳು ನಾಶವಾಗಬಾರದು. ಹೀಗಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ವಿಡಿಯೋ ಮಾಡಿಸಬೇಕು. ಇದರಲ್ಲಿ ಚೆಕ್, ಲೆಟರ್‌ಹೆಡ್, ನೋಟು ಎಣಿಕೆ ಯಂತ್ರಗಳು ಸೇರಿದಂತೆ ಎಲ್ಲವೂ ಇವೆ. ಉಚಿತ ಸೇವೆ ನೀಡುವ ಅವರಿಗೆ ನೋಟು ಎಣಿಸುವ ಯಂತ್ರ ಯಾಕೆ ಬೇಕಾಯಿತು? ಎಷ್ಟುದುಡ್ಡು ಎಣಿಸಿದ್ದಾರೆ? ಇವೆಲ್ಲಾ ಮಾಹಿತಿ ಸಾರ್ವಜನಿಕರಿಗೆ ಸಿಗಬೇಕು ಎಂದು ಹೇಳಿದರು.
ಚುನಾವಣಾ ಆಯೋಗ ಯಾವುದೇ ಅಧಿಕಾರಿಗಳ ಹೆಗಲಿಗೆ ಇದರ ಜವಾಬ್ದಾರಿ ಹಾಕಿ ಸುಮ್ಮನಾಗಬಾರದು. ಅದು ಸ್ವಾಯತ್ತ ಸಂಸ್ಥೆಯಾಗಿದ್ದು, ಅವರು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದೇವೆ ಎಂದರು. ನಮ್ಮ ತಪ್ಪಿದ್ದರೆ ನೇಣು ಹಾಕಲಿ: ಪ್ರಕರಣವು ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂಬ ಸಚಿವ ಅಶ್ವತ್‌್ಥ ನಾರಾಯಣ ಹೇಳಿಕೆಗೆ, ‘ತಿರುಗುಬಾಣವಲ್ಲ, ಈ ವಿಚಾರದಲ್ಲಿ ನಾವು ತಪ್ಪು ಮಾಡಿದ್ದರೆ ನೇಣು ಹಾಕಲಿ’ ಎಂದು ಹೇಳಿದರು.
ಮತದಾರರ ಮಾಹಿತಿ ಕಳ್ಳತನ, ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್, ಚುನಾವಣಾ ಆಯೋಗದಿಂದ ಸ್ಪಷ್ಟನೆ!
ಜನತಾ ನ್ಯಾಯಾಲಯದ ಮುಂದಿಡುತ್ತೇವೆ: ಈ ವಿಚಾರವನ್ನು ನಾವು ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಶ್ನಿಸುತ್ತೇವೆ. ಜತೆಗೆ ಜನತಾ ನ್ಯಾಯಾಲಯದ ಮುಂದೆಯೂ ಇಡುತ್ತೇವೆ. ಪ್ರಜಾಪ್ರಭುತ್ವದ ರಕ್ಷಕರಾಗಿ ಕನ್ನಡಿಗರ ಮತದಾನದ ಹಕ್ಕನ್ನು ಕಸಿಯಲು ಅವಕಾಶ ನೀಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.