* ನನ್ನ ಬಗ್ಗೆ, ನನ್ನ ತಂದೆ ಬಗ್ಗೆ ಮಾತಾಡಿರುವ ಈಶ್ವರಪ್ಪ ಮೊದಲು ರಾಜೀನಾಮೆ ನೀಡಬೇಕು
* ಈಶ್ವರಪ್ಪ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು
* ಈಶ್ವರಪ್ಪ ವಿರುದ್ಧ ವಾಗ್ದಾಳಿ ವೇಳೆ ಕನ್ನಡಪ್ರಭ ವರದಿ ತೋರಿಸಿದ ಹರಿಪ್ರಸಾದ್
ಬೆಂಗಳೂರು(ಫೆ.18): ಹರಕುಬಾಯಿ ಈಶ್ವರಪ್ಪ(KS Eshwarappa) ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಬಗ್ಗೆ ಮಾತ್ರವಲ್ಲದೆ ನಮ್ಮ ತಂದೆಯವರ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಮಾಡಿರುವ ಆತ ಮೊದಲು ಸಚಿವ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಒತ್ತಾಯಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ದೇಶ ಒಡೆಯುವ ಹೇಳಿಕೆ ಸಮರ್ಥಿಸಿಕೊಳ್ಳುತ್ತಿರುವ ಸರ್ಕಾರದ(Government of Karnataka) ಕ್ರಮ ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಿ ದೇಶದ್ರೋಹ(Treason) ಪ್ರಕರಣ ದಾಖಲಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
National Flag Row : ವಿಧಾನಪರಿಷತ್ ನಲ್ಲಿ ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು(Farmers) ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಭಾಗದಲ್ಲಿ ರೈತರ ಧ್ವಜ ಹಾರಿಸಲು ಮುಂದಾದಾಗ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಿಲ್ಲವೇ? ಅದೇ ರೀತಿ ಈಶ್ವರಪ್ಪ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೂ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ ಎಂದರು.
ನಾನು ಶಾಸನ ಸಭೆಯಲ್ಲಿ ಯಾರಿಗೂ ನೀನು ಎಂದಿಲ್ಲ. ಆದರೆ ಅವರು ನಮ್ಮ ತಂದೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪೂರ್ವಿಕರು ಗಾಂಧಿ ತತ್ವ ಅನುಸರಿಸುತ್ತಿದ್ದರು. ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಎಲ್ಲವನ್ನು ಕೊಟ್ಟಿರುವವರು ನಮ್ಮ ಪಕ್ಷದವರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಲ್ಲದೆ ವೈಯಕ್ತಿಕ ನಿಂದನೆ ಮಾಡಿದರೆ ಸುಮ್ಮನಿರಬೇಕಾ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನನ್ನು ಜೈಲಿಗೆ ಹಾಕಿಸಲು ಪ್ರಯತ್ನ:
ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಅಧಿಕಾರಿಗಳಿಗೆ ಏನೆಲ್ಲಾ ಸೂಚನೆ ಕೊಡುತ್ತಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿಯವರ ಜತೆ ಬೇರೆ ಪಕ್ಷದವರೂ ಸೇರಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈಶ್ವರಪ್ಪ ವಿರುದ್ಧ ವಾಗ್ದಾಳಿ ವೇಳೆ ಕನ್ನಡಪ್ರಭ ವರದಿ ತೋರಿಸಿದ ಹರಿಪ್ರಸಾದ್
ವಿಧಾನಪರಿಷತ್ತು: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜ ವಿರೋಧಿ ಹೇಳಿಕೆ ಕುರಿತು ಸಾಕ್ಷ್ಯ ಒದಗಿಸುವ ಸಂದರ್ಭದಲ್ಲಿ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದರು.
ಬಿಜೆಪಿ(BJP) ಸದಸ್ಯರು ಈಶ್ವರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸೂಕ್ತ ಸಾಕ್ಷ್ಯ ಇಲ್ಲ ಎಂದು ಉಲ್ಲೇಖಿಸಿದ್ದರು. ಸ್ವತಃ ಗೃಹಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರು ಯಾವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ವಿರೋಧ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿದ್ಯುನ್ಮಾನ ಮಾಧ್ಯಮಗಳು ಮಾತ್ರವಲ್ಲ ಪತ್ರಿಕೆಗಳು ವರದಿ ಪ್ರಕಟಿಸಿವೆ. ಕನ್ನಡಪ್ರಭ(Kannada Prabha) ಪತ್ರಿಕೆಯಲ್ಲಿ ‘ಕೆಂಪು ಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ: ಈಶ್ವರಪ್ಪ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ ಎಂದು ಸದನದಲ್ಲಿ ಫೆ.10ರ ಪತ್ರಿಕೆ ಪ್ರತಿಯನ್ನು ಪ್ರದರ್ಶಿಸಿದರು.
ವಿಧಾನಸಭೆಯಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ, ಇದಕ್ಕೆ ಸಿಎಂ ಹೇಳಿದ್ದಿಷ್ಟು
ಸೌಧಕ್ಕೆ ಹಾಸಿಗೆ-ದಿಂಬು.. ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಅಹೋರಾತ್ರಿ ಧರಣಿ
ಸಚಿವ ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ (Congress) ನಾಯಕರು ವಿಧಾನಸಭೆಯಲ್ಲೇ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸ್ಪೀಕರ್ ಆದಿಯಾಗಿ ಬಿಜೆಪಿ (BJP) ಹಿರಿಯ ನಾಯಕರು ಆಗಮಿಸಿ ಮನವೊಲಿಸಿದರೂ ಮಾತು ಕೇಳಿಲ್ಲ.
ಸದನದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಧರಣಿ ಕೈ ಬಿಡುವಂತೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಮಾತುಕತೆ ವಿಫಲವಾಗಿದೆ.