‘ಬಿಜೆಪಿಯವರು ತಮ್ಮ ಕಳಂಕ ಮುಚ್ಚಿಕೊಳ್ಳಲು ನಮ್ಮ ನಾಯಕರ ಮೇಲೆ ಕಳಂಕ ಮೂಡಿಸಲು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಪುಸ್ತಕ ಬರೆಯುವವರು ಚರ್ಚೆಗೆ ಬರಲಿ. ನಾವೂ ಚರ್ಚೆ ಮಾಡಲು ಸಿದ್ಧವಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜ.10): ‘ಬಿಜೆಪಿಯವರು ತಮ್ಮ ಕಳಂಕ ಮುಚ್ಚಿಕೊಳ್ಳಲು ನಮ್ಮ ನಾಯಕರ ಮೇಲೆ ಕಳಂಕ ಮೂಡಿಸಲು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಪುಸ್ತಕ ಬರೆಯುವವರು ಚರ್ಚೆಗೆ ಬರಲಿ. ನಾವೂ ಚರ್ಚೆ ಮಾಡಲು ಸಿದ್ಧವಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ನಾಯಕರು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡುವ ಬಗ್ಗೆ ಮಾತನಾಡಿದ ಅವರು, ಭಾವನೆ ಮೇಲೆ ದೇಶ ಹಾಗೂ ಸಮಾಜವನ್ನು ಇಬ್ಭಾಗ ಮಾಡಲು ಬಿಜೆಪಿಗರು ಹೋಗುತ್ತಿದ್ದಾರೆ. ರಾಜ್ಯದಲ್ಲಿ 10 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಬಂದಿದೆ ಎನ್ನುತ್ತಾರೆ. ಶಿವಮೊಗ್ಗ, ಕರಾವಳಿ ಭಾಗದಲ್ಲಿ ಎಷ್ಟುಬಂಡವಾಳ ಹೂಡಿಕೆ ಆಗಿದೆ? ಶಿವಮೊಗ್ಗದಲ್ಲಿ ಯಾರಾದರೂ 500 ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರಾ? ದಕ್ಷಿಣ ಕನ್ನಡದಲ್ಲಿ ಎಷ್ಟುಬಂಡವಾಳ ಹೂಡಿಕೆಯಾಗಿದೆ? ಈ ವೈಫಲ್ಯಗಳನ್ನು ಮುಚ್ಚಿಹಾಕಲು ನಮ್ಮ ನಾಯಕರ ಮೇಲೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್
ಜನರ ಬದುಕು ಕಟ್ಟಿಕೊಡುವುದನ್ನು ಬಿಟ್ಟು ಭಾವನೆ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ರಾಷ್ಟ್ರಪತಿಗಳಾಗಿದ್ದ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ಬಗ್ಗೆ ಸದನದಲ್ಲಿ ಹೊಗಳಿ ಹೋಗಿದ್ದರು. ಟಿಪ್ಪು ಇತಿಹಾಸ ನಾವು ಬರೆದಿದ್ವಾ? ಶೃಂಗೇರಿ ಹಾಗೂ ನಂಜನಗೂಡಿನಲ್ಲಿ ಸಲಾಂ ಆರತಿ ನಾವು ಮಾಡಿದ್ವಾ? ಎಂದು ಪ್ರಶ್ನಿಸಿದರು. ನನ್ನ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ದೇವಾಲಯ ಕಟ್ಟಲು ನಾನು ನೆರವು ನೀಡಿದ್ದು, ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಒಂದು ಗ್ರಾಮದಲ್ಲಿ ಕ್ರೈಸ್ತರ ಶಿಲುಬೆ ನಿರ್ಮಿಸಲು ಮುಂದಾದಾಗ ನನ್ನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಡವರಿಗೆ ಊಟ ನೀಡುವುದು, ಕೊರೋನಾ ಅವಧಿಯಲ್ಲಿ ಸತ್ತವರಿಗೆ ಪರಿಹಾರ ನೀಡುವುದು, 2 ಕೋಟಿ ಉದ್ಯೋಗ, ಬ್ಯಾಂಕ್ ಖಾತೆಗೆ 15 ಲಕ್ಷ ಹಣದಂತಹ ವಿಚಾರಗಳನ್ನು ಕೇಳದಿರಲು ಇಂತಹ ವಿಚಾರಗಳನ್ನು ಮುಂದು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರ ಈ ಪ್ರಯತ್ನಗಳು ಕೆಲಸಕ್ಕೆ ಬರುವುದಿಲ್ಲ. ಶೃಂಗೇರಿ, ನಂಜನಗೂಡಿನಲ್ಲಿ ಸಲಾಂ ಆರತಿಗೆ ನಾವು ಹೆಸರಿಟ್ಟಿದ್ದೆವಾ? ಟಿಪ್ಪು ಇತಿಹಾಸ ನಾವು ಬರೆದಿದ್ದೇವಾ? ಸ್ವಾತಂತ್ರ್ಯ ಬರುವ ಮುನ್ನವೇ ಟಿಪ್ಪು ಅವರ ಇತಿಹಾಸ ಬರೆಯಲಾಗಿತ್ತು. ರಾಷ್ಟ್ರಪತಿಗಳು ಟಿಪ್ಪು ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ಅವರು ಪುಸ್ತಕ ಬರೆದು ಸಂತೋಷ ಪಡಲಿ ಎಂದು ಹೇಳಿದರು.
‘ಕೈ’ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಟೆಂಡರ್ ರದ್ದು: ಇನ್ನು 60 ದಿನಗಳು ಕಳೆದ ಬಳಿಕ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಪ್ರಸ್ತುತ ತರಾತುರಿಯಲ್ಲಿ ಮಾಡುತ್ತಿರುವ ಎಲ್ಲ ಟೆಂಡರ್‌ಗಳನ್ನೂ ಮರು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತಲೆಗೆ ಮೀಸಲಾತಿ ತುಪ್ಪ ಸವರಿದ ಬಿಜೆಪಿ ಸರ್ಕಾರ: ಡಿ.ಕೆ.ಶಿವಕುಮಾರ್
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಆಡಳಿತ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ಅನೇಕ ಯೋಜನೆಗಳಿಗೆ ಟೆಂಡರ್ ಕರೆಯಲು ಹೊರಟಿದೆ. ನಾನು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುತ್ತೇನೆ. ಅಧಿಕಾರಿಗಳು ಯಾರದ್ದೋ ಏಜೆಂಟ್‌ಗಳಾಗಬೇಡಿ. ಗುತ್ತಿಗೆದಾರರು ಸುಮ್ಮನೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ. ಇನ್ನು 60 ದಿನಗಳು ಕಳೆದ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಆ ಎಲ್ಲ ಟೆಂಡರ್‌ಗಳ ಅಂದಾಜು ಮೊತ್ತವನ್ನು ಮರು ಪರಿಶೀಲನೆ ಮಾಡಿಸುತ್ತೇವೆ ಎಚ್ಚರವಿರಲಿ’ ಎಂದು ಹೇಳಿದರು.