
ಕಿತ್ತೂರು (ನ.08): ಭಾರತ್ ಜೋಡೋ ಯಾತ್ರೆಯಲ್ಲಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ಡ್ಯಾನ್ಸ್ ಮಾಡಿದ ವಿಡಿಯೋಗೆ ಸಿನೆಮಾ ಹಾಡು ಸೇರಿಸಿ ಟ್ವಿಟರ್‌ನಲ್ಲಿ ಹಾಕಿದ್ದರು. ಇದನ್ನೇ ನೆಪ ಮಾಡಿಕೊಂಡು ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಜತೆಗೆ, ನೀವು ಟ್ವಿಟರ್ ಖಾತೆಯನ್ನದಾರೂ ಬ್ಲಾಕ್ ಮಾಡಿ, ರಾಹುಲ್ ಗಾಂಧಿಯನ್ನಾದ್ರೂ ಜೈಲಿಗೆ ಹಾಕಿ. ನಾವು ಎಲ್ಲದಕ್ಕೂ ಸಜ್ಜಾಗಿದ್ದೇವೆ ಎಂದು ತಿರುಗೇಟು ನೀಡಿದರು.
ಕಿತ್ತೂರಿನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ 54ನೇ ಜನ್ಮದಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿ, ಬಿಜೆಪಿ ಸ್ನೇಹಿತರೇ ಟ್ವಿಟರ್ ಖಾತೆ ಬ್ಲಾಕ್ ಮಾಡಿಸಿ, ನಮ್ಮ ನಾಯಕರನ್ನೂ ಬಂಧಿಸಿ ಜೈಲಿಗೆ ಹಾಕಿ. ನನ್ನನ್ನಾದರೂ, ವಿನಯ್ ಕುಲಕರ್ಣಿಯನ್ನಾದರೂ ಹಾಕಿ. ಆದರೆ, ಜನರ ಹೃದಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ ಎಂದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದವರು. ಇಂಥ ತ್ಯಾಗದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಸರ್ಕಾರವನ್ನು ತೆಗೆಯಲು ಎಲ್ಲರೂ ಮುಂದಾಗಬೇಕು ಎಂದರು.
ನಿಜವಾದ ಬಂಡೆ ಮಲ್ಲಿಕಾರ್ಜುನ ಖರ್ಗೆ: ಡಿ.ಕೆ.ಶಿವಕುಮಾರ್ ಪ್ರಶಂಸೆ
ಕೆಜಿಎಫ್ ಸಂಗೀತ ಬಳಸಿದ್ದಕ್ಕೆ ಕಾಂಗ್ರೆಸ್ ಟ್ವೀಟರ್ ಖಾತೆ ಬಂದ್: ‘ಕೆಜಿಎಫ್-2’ ಚಿತ್ರದ ಸಂಗೀತ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಅಧಿಕೃತ ಟ್ವೀಟರ್ ಖಾತೆಯನ್ನು ನ.21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಕೆಜಿಎಫ್-2 ಚಿತ್ರದ ಸಂಗೀತದ ಹಕ್ಕು ಸ್ವಾಮ್ಯ ಪಡೆದುಕೊಂಡಿರುವ ಎಂಆರ್‌ಟಿ ಮ್ಯೂಸಿಕ್ ಕಂಪನಿ ದಾಖಲಿಸಿರುವ ಅಸಲು ದಾವೆಯ ವಿಚಾರಣೆ ನಡೆಸಿದ ನಗರದ 86ನೇ ವಾಣಿಜ್ಯ ನ್ಯಾಯಾಲಯವು ಈ ಆದೇಶ ಮಾಡಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಭಾರತ್ ಜೋಡೋ ಯಾತ್ರೆ ವೇಳೆ ಅರ್ಜಿದಾರರು ಹಕ್ಕು ಸ್ವಾಮ್ಯ ಹೊಂದಿರುವ ಕೆಜಿಎಫ್-2 ಚಿತ್ರದ ಸಂಗೀತವವನ್ನು ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅದನ್ನು ತಡೆಯದೆ ಹೋದರೆ ಅರ್ಜಿದಾರಿಗೆ ಸಾಕಷ್ಟುಹಾನಿ ಉಂಟಾಗುತ್ತದೆ ಮತ್ತು ಪೈರಸಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕೆಜಿಎಫ್-2 ಚಿತ್ರದ ಸಂಗೀತವನ್ನು ಅನಧಿಕೃತವಾಗಿ ಬಳಸಿಕೊಂಡ ವಿಚಾರದಲ್ಲಿ ವಿದ್ಯುನ್ಮಾನ ಪರಿಶೋಧನೆ ಮಾಡಬೇಕಿದೆ.
ಅದರಂತೆ ಐಎನ್‌ಸಿ ಇಂಡಿಯಾದ ಟ್ವೀಟರ್, ಭಾರತ್ ಜೋಡೋ ಯಾತ್ರೆಯ ಟ್ವೀಟರ್, ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿರುವ ‘ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು’ಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಿದ್ಯುನ್ಮಾನ ಪರಿಶೋಧನೆ ನಡೆಸಲು ವಾಣಿಜ್ಯ ನ್ಯಾಯಾಲಯದ ಕಂಪ್ಯೂಟರ್ ವಿಭಾಗದ ಜಿಲ್ಲಾ ಸಿಸ್ಟೆಮ್ ಆಡಳಿತಾಧಿಕಾರಿ ಆಗಿರುವ ಎಸ್.ಎನ್. ವೆಂಕಟೇಶ ಮೂರ್ತಿ ಅವರನ್ನು ಸ್ಥಳೀಯ ಕಮೀಷನರ್ ಆಗಿ ನೇಮಕ ಮಾಡಿ ನ್ಯಾಯಾಲಯ ಆದೇಶಿಸಿದೆ.
ಸೋಲಾರ್ ಪಾರ್ಕ್ ಬಗ್ಗೆ ಯಾವುದೇ ತನಿಖೆಗೆ ಸಿದ್ಧ: ಡಿ.ಕೆ.ಶಿವಕುಮಾರ್
ಸ್ಥಳೀಯ ಕಮೀಷನರ್ ಅವರು ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿರುವ ಸಾಮಗ್ರಿಗಳನ್ನು ಪರಿಶೀಲನೆ ನಡೆಸಬೇಕು. ಅದನ್ನು ಪ್ರತ್ಯೇಕ ಕಾಂಪಾಕ್ಟ್ ಡಿಸ್‌್ಕ (ಸಿಡಿ) ರೂಪದಲ್ಲಿ ಸಂಗ್ರಹ ಮಾಡಬೇಕು ಎಂದು ನಿರ್ದೇಶಿಸಿದೆ. ಕಮೀಷನರ್ ಅವರೊಂದಿಗೆ ತೆರಳಲು ಅರ್ಜಿದಾರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೋರ್ಚ್ ಕಮೀಷನರ್ ನಡೆಸುವ ಪ್ರಕ್ರಿಯೆಯ ಫೋಟೋ ಹಾಗೂ ವಿಡಿಯೋ ದಾಖಲಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ ನ್ಯಾಯಾಲಯ, ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.21ಕ್ಕೆ ಮುಂದೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.