ಬಿಜೆಪಿ-ಕಾಂಗ್ರೆಸ್‌ಗೆ ಗೊತ್ತು ಗುರಿ ಇಲ್ಲ: ಸಿ.ಎಂ.ಇಬ್ರಾಹಿಂ

Published : Nov 08, 2022, 01:40 AM IST
ಬಿಜೆಪಿ-ಕಾಂಗ್ರೆಸ್‌ಗೆ ಗೊತ್ತು ಗುರಿ ಇಲ್ಲ: ಸಿ.ಎಂ.ಇಬ್ರಾಹಿಂ

ಸಾರಾಂಶ

ಒಂದು ಪಕ್ಷ ಕೇಶವ ಕೃಪಾದ ಕಡೆ, ಇನ್ನೊಂದು ಪಕ್ಷ ಬಸವ ಕೃಪಾದ ಕಡೆ ಗೊತ್ತು ಗುರಿ ಇಲ್ಲದೇ ಹೊರಟಿದ್ದು, ಮಧ್ಯದಲ್ಲಿ ರಾಜ್ಯದ ಜನತೆ ಸಂಕಷ್ಟಎದುರಿಸುವಂತಾಗಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಟುವಾಗಿ ಟೀಕಿಸಿದರು. 

ಧಾರವಾಡ (ನ.08): ಒಂದು ಪಕ್ಷ ಕೇಶವ ಕೃಪಾದ ಕಡೆ, ಇನ್ನೊಂದು ಪಕ್ಷ ಬಸವ ಕೃಪಾದ ಕಡೆ ಗೊತ್ತು ಗುರಿ ಇಲ್ಲದೇ ಹೊರಟಿದ್ದು, ಮಧ್ಯದಲ್ಲಿ ರಾಜ್ಯದ ಜನತೆ ಸಂಕಷ್ಟಎದುರಿಸುವಂತಾಗಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಟುವಾಗಿ ಟೀಕಿಸಿದರು. ಸೋಮವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೂ ಗೊತ್ತಿಲ್ಲದೇ ರಾಜ್ಯ ನಡೆಸಲು ಬಂದಿದ್ದಾವೆ ಎಂದು ಹೇಳಿದ ಇಬ್ರಾಹಿಂ, ಎರಡು ಪಕ್ಷಗಳ ಕೈಯಲ್ಲಿ ಸಿಕ್ಕು ಜನರು ಬೇಸತ್ತಿದ್ದಾರೆ. ಬಿಜೆಪಿಗೆ ಸರ್ಕಾರ ನಡೆಸಲು ಬರುತ್ತಿಲ್ಲ. ಹೇಗೆ ನಡೆಸಬೇಕು ಎಂದು ಹೇಳುವ ವಿಪಕ್ಷದಲ್ಲಿರುವ ಕಾಂಗ್ರೆಸ್‌ಗೆ ಹೇಳಲು ಬರುತ್ತಿಲ್ಲ. ಒಟ್ಟಿನಲ್ಲಿ ಎರಡು ಪಕ್ಷಗಳು ದಾರಿ ತಪ್ಪಿವೆ ಎಂದರು.

ಈ ಎರಡು ಪಕ್ಷಗಳ ಮುಖಂಡರು ಹೈಕಮಾಂಡ್‌ಗೆ ಕಪ್ಪ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಇಬ್ರಾಹಿಂ, ಎಲ್ಲದಕ್ಕೂ ನಮ್ಮಪ್ಪ ಮೋದಿ, ನಮ್ಮವ್ವ ಸೋನಿಯಾ ಎಂದು ಕಪ್ಪ ಮುಟ್ಟಿಸುತ್ತಿದ್ದಾರೆ. ಎರಡೂ ಪಕ್ಷಗಳಿಂದ ಹಣ ದೆಹಲಿ ಕೈಗೆ ಸೇರುತ್ತಿದ್ದು ಹೀಗೆ ಬಿಟ್ಟರೆ ಶ್ರೀಮಂತವಾಗಿರುವ ಕರ್ನಾಟಕ ಬಡವಾಗಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಎಲ್ಲ ಮಂತ್ರಿಗಳೂ ದುಡ್ಡು ಮಾಡಿದ್ದಾರೆ. ಈಗ ಜೈಲಿನಲ್ಲಿ ಇದ್ದು ಬಂದವರು ಊರ ಹೊರಗಡೆ ಹುಟ್ಟಿದ ಹಬ್ಬ ಆಚರಿಸುತ್ತಿದ್ದಾರೆ. ಅದಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಇದನ್ನೆಲ್ಲ ನಾವು ನೋಡಬೇಕಿದೆ ಎಂದರು.

ಸಿದ್ದು ನೋಡಿದ್ರೆ ಅಯ್ಯೋ ಅನ್ಸುತ್ತೆ, ಕಾಂಗ್ರೆಸ್‌ನಲ್ಲಿ ಅವ್ರು ತಬ್ಬಲಿ: ಸಿ.ಎಂ.ಇಬ್ರಾಹಿಂ

ಬಿಜೆಪಿ, ಕಾಂಗ್ರೆಸ್ಸಿಗೆ ಮೊಟ್ಟೆವಿಚಾರ, ಪಠ್ಯ ಹಾಗೂ ಮೀಸಲಾತಿ ವಿಚಾರ ಬೇಕಾ? ಸಮಾನತೆ ಕೂಗು ಕೊಟ್ಟಬಸವಣ್ಣನ ನಾಡಿನಲ್ಲಿ ನಾವು ಎಲ್ಲಿ ಹೊರಟಿದ್ದೇವೆ ಎಂಬುದನ್ನು ಯಾರು ಪ್ರಶ್ನಿಸುತ್ತಿಲ್ಲ. ಬ್ರಾಹ್ಮಣ, ಲಿಂಗಾಯತ, ಈಗ ಪಂಚಮಸಾಲಿ ಮೀಸಲಾತಿ ಎಂದು ಹೊರಟಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಇಬ್ಬರನ್ನು ಮಾತ್ರ ಬೆಳೆಸಿದ್ದಾರೆ. ಅದಾನಿ ಹಾಗೂ ಅಂಬಾನಿ ವಿರುದ್ಧ ಮಾತನಾಡಿದರೆ ಇಡಿ ದಾಳಿ ಮಾಡಿಸುತ್ತಾರೆ. ಆದರೆ, ನಮ್ಮ ಮೇಲಂತೂ ಇಡಿ ದಾಳಿ ಆಗುವುದಿಲ್ಲ. ಏಕೆಂದರೆ ನಾನು ಏನೂ ಇಲ್ಲದ ಜಂಗಮ. ಅವರೇನಾದ್ರೂ ದಾಳಿ ಮಾಡಿದ್ರೆ ಅವರೇ ಇಟ್ಟು ಹೋಗಬೇಕು. ಎಲ್ಲೆಡೆ ವಿಮಾನ ನಿಲ್ದಾಣ ಖಾಸಗಿ ಮಾಡಲು ಸರ್ಕಾರ ಹೊರಟಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮಾರುವುದಕ್ಕೆ ಗಿರಾಕಿ ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಇಬ್ರಾಹಿಂ, ಈ ಹಿಂದೆ ಮೌಲ್ಯಾಧಾರಿತ ರಾಜಕಾರಣ ಇತ್ತು. ಇಂದು ಮೌಲ್ಯ ಕೊಡು ಕೆಲಸ ಮಾಡಿಸಿಕೋ ಎಂಬ ಮೌಲ್ಯ ಆಧಾರಿತ ರಾಜಕಾರಣವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ 13 ರಾಜಕಾರಣಿಗಳು ಸಿಡಿ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, ಆ ವಿಡಿಯೋದಲ್ಲಿ ಏನಿದೆ ಎಂದು ಕೋರ್ಚ್‌ ಆದರೂ ನೋಡಬೇಕಿದೆ. ನೀವಾದರೂ ನೋಡಿ ಎಂದು ನಾನೇ ಕೋರ್ಚ್‌ಗೆ ಕೇಳಬೇಕಿದೆ. ಬೆಂಗಳೂರು ಕೋರ್ಚ್‌ನಲ್ಲಿ ಮೊದಲು ಕೊತ್ವಾಲ್‌, ಕೋಳಿ ಫಯಾಜ್‌ ಹಾಜರ್‌ ಹೋ ಅಂತಿದ್ದರು. ಈಗ ಯಡಿಯೂರಪ್ಪ ಹಾಜರ್‌ ಹೋ.., ಕಟ್ಟಾಸುಬ್ರಹ್ಮಣ್ಯ ಹಾಜರ್‌ ಹೋ ಎನ್ನುವ ಸ್ಥಿತಿ ಬಂದಿದೆ. ಆದ್ದರಿಂದ ಉನಕೋ ದೇಕೋ ಬಾರ್‌ ಬಾರ್‌.. ಹಮ್ಕೋ ದೇಕೋ ಏಕ್‌ ಬಾರ್‌ ಎಂದು ಜನರಲ್ಲಿ ಜೆಡಿಎಸ್‌ ಕೇಳುತ್ತಿದೆ. ಪಂಚರತ್ನ ಅಭಿಯಾನದ ಮೂಲಕ ಇಡೀ ರಾಜ್ಯದಲ್ಲಿ ಜನರ ಮನ ಗೆಲುತ್ತಿದ್ದು ಮುಂದಿನ ಚುನಾವಣೆಯಲ್ಲಿ 123 ಸ್ಥಾನ ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಅನುಮತಿ ಕೇಳಿದ್ದು ತಪ್ಪು: ಹುಬ್ಬಳ್ಳಿಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಮಾಡಲು ಅನುಮತಿ ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿ.ಎಂ. ಇಬ್ರಾಹಿಂ, ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿ ಪೂಜೆ ಇಲ್ಲ. ಜಯಂತಿ ಪದ್ಧತಿಯೂ ಇಲ್ಲ. ಹೀಗಾಗಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅನುಮತಿ ಕೇಳಿದ್ದು ತಪ್ಪು ಎಂದು ಸ್ಪಷ್ಟಪಡಿಸಿದರು.

Belagavi: ಜೆಡಿಎಸ್‌ಗೆ 123 ಸ್ಥಾನ ಗೆಲ್ಲುವ ಗುರಿ: ಸಿ.ಎಂ.ಇಬ್ರಾಹಿಂ

ಆಸ್ತಿ ಮಾಡಿದ್ದಾರೆ ಜೋಶಿ, ಶೆಟ್ಟರ್‌: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿ ಇರುವ ಎಲ್ಲರನ್ನು ಟೀಕೆ ಮಾಡುವುದಿಲ್ಲ. ಒಂದು ಸಮಯದಲ್ಲಿ ಕಾಲಲ್ಲಿ ಚಪ್ಪಲಿ ಇಲ್ಲದೇ ಓಡಾಡಿದವರನ್ನೂ ನೋಡಿದ್ದೇನೆ. ಜಗನ್ನಾಥರಾವ್‌ ಜೋಶಿ ಅವರಿಗೆ ಆಸ್ಪತ್ರೆ ಶುಲ್ಕ ಕಟ್ಟಲು ಹಣ ಇರಲಿಲ್ಲ. ಅವರನ್ನು ಆರ್‌ಎಸ್‌ಎಸ್‌ ವ್ಯಕ್ತಿ ಎನ್ನಬಹುದು. ಈಗ ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್‌ ಆಸ್ತಿ ಎಷ್ಟಿದೆ ಘೋಷಿಸಲಿ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ