
ಬೆಂಗಳೂರು(ಅ.24): ಬಿಜೆಪಿಯವರ ಹೇಳಿಕೆಯಂತೆ ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿ ಕಲ್ಲಾಗುತ್ತೇನೆ. ಈ ಜನ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಚ್. ಕುಸುಮಾ ಪರವಾಗಿ ಆರ್.ಆರ್. ನಗರದ ಐಡಿಯಲ್ ಹೋಮ್ಸ್‌ನಲ್ಲಿ ಶುಕ್ರವಾರ ನಡೆದ ಒಕ್ಕಲಿಗ ಸಮುದಾಯದ ವಿವಿಧ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವರು ನನ್ನ ಬಗ್ಗೆ ಬಂಡೆಯನ್ನು ಡೈನಮೈಟ್ ಇಟ್ಟು ಪುಡಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರುಡಗಂಬವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲೂ ಆಗುತ್ತೇನೆ. ಹೀಗಾಗಿ ನನಗೆ ಕೇವಲ ಬಂಡೆಯಾಗಿಯೇ ಇರಲು ಇಷ್ಟವಿಲ್ಲ. ಏನೇ ಆದರೂ ನನ್ನಿಂದ ಜನರಿಗೆ ಉಪಯೋಗವಾಗಬೇಕು’ ಎಂದರು.
ಏಳೇಳು ಜನ್ಮದಲ್ಲೂ ಡಿಕೆಶಿಗೆ ನಾನು ಸರಿಸಾಟಿ ಆಗಲು ಸಾಧ್ಯವೇ ಇಲ್ಲ ಎಂದ ಬಿಜೆಪಿ ನಾಯಕ
ಒಕ್ಕಲಿಗರ ಪ್ರತಿನಿಧಿ:
ನನ್ನನ್ನು ಒಕ್ಕಲಿಗ ಪ್ರತಿನಿಧಿ ಎಂದು ಗುರುತಿಸಿದ್ದೀರಿ. ಜೈಲಿನಲ್ಲಿದ್ದಾಗಲೂ ನನ್ನನ್ನು ಬೆಂಬಲಿಸಿದ್ದೀರಿ. ನನ್ನ ಬಂಧಿಸಿದಾಗ ಶಾಂತಿಯುತ ಪ್ರತಿಭಟನೆ ನಡೆದರೂ ಮೂರು ದಿನದಲ್ಲಿ 80 ಕೋಟಿ ರು. ನಷ್ಟ ಉಂಟಾಗಿದೆ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಇದರ ಬಗ್ಗೆ ಹೋರಾಟ ಮಾಡುತ್ತೇನೆ. ನಿಮ್ಮ ಬೆಂಬಲ ಒಂದಿದ್ದರೆ ಸಾಕು. ನೀವೆಲ್ಲರೂ ಕುಸುಮಾ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಅಶ್ವತ್ಥ ‘ಸವೀರ್ಸ್ ಪ್ರೊವೈಡರ್’
‘ನನ್ನ ಬಗ್ಗೆ ಅಶೋಕಣ್ಣ (ಆರ್.ಅಶೋಕ್), ಸಿ.ಟಿ.ರವಿ ಅಣ್ಣ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿದಷ್ಟೂಅವರಿಗೆ ಪ್ರಮೋಷನ್ ಸಿಗುತ್ತಿರುತ್ತದೆ. ಸರ್ವಿಸ್ ಪ್ರೊವೈಡರ್ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರಿಗೂ ಪದೋನ್ನತಿ ಸಿಗಲಿ. ನಳಿನ್‌ಕುಮಾರ್ ಕಟೀಲ್ ‘ಬಂಡೆ ಛಿದ್ರವಾಗುತ್ತದೆ. ಹುಲಿಯಾ ಕಾಡಿಗೆ ಹೋಗುತ್ತದೆ’ ಎಂದು ಹೇಳಿದ್ದಾರೆ. ಕಟೀಲ್, ಅಶೋಕಣ್ಣ, ಸಿ.ಟಿ.ರವಿ ಅಣ್ಣಾ, ಸರ್ವಿಸ್ ಪ್ರೊವೈಡರ್ ಅಶ್ವತ್ಥಣ್ಣ ಎಲ್ಲರಿಗೂ ಬಂಡೆ ಕಥೆ ಹೇಳುತ್ತೇನೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ’ ಎಂದು ನಕ್ಕು ಸುಮ್ಮನಾದರು.
ಧಮ್ಕಿ ಹಾಕಿದ್ದರೆ ಸುರೇಶ್ ಬಂಧಿಸಿ
ಸಂಸದ ಡಿ.ಕೆ. ಸುರೇಶ್ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕ್ಷೇತ್ರದ ಜನಪ್ರತಿನಿಧಿಯಾಗಿ ಜನರ ಪರ ಅವರು ಮಾತನಾಡಿದ್ದಾರೆ. ಒಂದು ವೇಳೆ ಅವರು ಧಮ್ಕಿ ಹಾಕಿದ್ದರೆ ಪ್ರಕರಣ ದಾಖಲಿಸಿ ಬಂಧಿಸಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.