ಕೆಪಿಸಿಸಿ ಮಹಿಳಾ ಅಧ್ಯಕ್ಷರ ನೇಮಕವನ್ನು ಪ್ರಶ್ನಿಸಿ ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿದ್ದ ಕವಿತಾ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು (ಸೆ.18): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಹಿಳಾ ಅಧ್ಯಕ್ಷರನ್ನಾಗಿ ಸೌಮ್ಯಾ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರಶ್ನಿಸಿದ್ದ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜೊತೆಗೆ, ಪಕ್ಷದಿಂದ ಹಂಚಿಕೆ ಮಾಡಲಾಗಿದ್ದ ಎಲ್ಲ ಜವಾಬ್ದಾರಿಗಳನ್ನು ವಾಪಸ್ ಪಡೆಯಲಾಗಿದೆ ಎಂದು ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಅಧ್ಯಕ್ಷರ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಈವರೆಗೆ ಪಕ್ಷ ಸಂಘಟನೆ ಮಾಡುತ್ತಾ ಹಂತ ಹಂತವಾಗಿ ಶ್ರಮಿಸುತ್ತಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ವಕ್ತಾರೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನೇನು ಮಹಿಳಾ ಅಧ್ಯಕ್ಷ ಸ್ಥಾನವೂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಬೆಂಗಳೂರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನ ನೀಡಲಾಗಿದೆ. ಕೇವಲ ಸಚಿವರ ಮಗಳೆಂಬ ಕಾರಣಕ್ಕೆ ಲಾಬಿ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ದುಡಿದವರನ್ನು ಕಡೆಗಣಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ, ಮಹಿಳಾ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಆಯ್ಕೆಯನ್ನು ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಪತ್ರ ಬರೆದಿದ್ದರು. ಇದರ ಬೆನ್ನಲ್ಲಿಯೇ ಪಕ್ಷದ ತೀರ್ಮಾನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಹಂಚಿಕೊಂಡಿದ್ದರು.
undefined
ರಾಜಕಾರಣದ ಬ್ರೇಕಿಂಗ್ ಸುದ್ದಿ: ಚನ್ನಪಟ್ಟಣಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಮೈತ್ರಿ ಅಭ್ಯರ್ಥಿ?
ಇನ್ನು ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಕವಿತಾ ರೆಡ್ಡಿಗೆ ಈ ಹಿಂದೆಯೂ ನೋಟಿಸ್ ನೀಡಿ, ಮುಂದಿನ ದಿನಗಳಲ್ಲಿ ಒಂತಹ ಹೇಳಿಕೆಗಳನ್ನು ನೀಡದಂತೆ ಮೌಖಿಕ ಸೂಚನೆಯನ್ನೂ ರವಾನಿಸಲಾಗಿತ್ತು. ಆದರೆ, ಪುನಃ ಪಕ್ಷಕ್ಕೆ ಮುಜುಗರ ಆಗುವಂಥ ಹೇಳಿಕೆಗಳನ್ನು ನೀಡುವ ಮತ್ತು ಬರಹಗಳನ್ನು ಬರೆದುಕೊಂಡಿದ್ದೀರಿ ಎಂಬ ಕಾರಣಕ್ಕೆ ಪಕ್ಷದಿಂದ ಯಾಕೆ ಉಚ್ಚಾಟನೆ ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಇನ್ನು ಪಕ್ಷದ ಶಿಸ್ತು ಪಾಲನಾ ಸಮಿತಿಗೆ 7 ದಿನಗಳ ಒಳಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಿತ್ತು. ಆದರೆ, ಉತ್ತರ ಕೊಡದ ಹಿನ್ನೆಲೆಯಲ್ಲಿ ಕವಿತಾ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಪಿಸಿಸಿ ಅಧ್ಯಕ್ಷರಿಗೆ ಕವಿತಾ ರೆಡ್ಡಿ ಬರೆದ ಪತ್ರದಲ್ಲೇನಿತ್ತು?
ರಾಜ್ಯದಲ್ಲಿ ಸಚಿವರೊಬ್ಬರ ಪುತ್ರಿಯನ್ನು ಕೆಪಿಸಿಸಿ ಮಹಿಳಾ ಘಟಕದ ಆಧ್ಯಕ್ಷರಾಗಿ ನೇಮಕ ಮಾಡಿರುವುದು, ಸ್ವಂತ ಶ್ರಮದಿಂದ ಮೇಲೆ ಬಂದ ಮಹಿಳಾ ನಾಯಕಿಯರಿಗೆ ಮಾಡಿರುವ ಅವಮಾನವಾಗಿದೆ. ಪಕ್ಷದಲ್ಲಿ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆಯನ್ನೂ ಹೊಂದಿರದ ಹಲವು ಸ್ವತಂತ್ರ ನಾಯಕಿಯರು ಹಾಗೂ ಕಾರ್ಯಕರ್ತೆಯರು ಇದ್ದಾರೆ. ಇವರೆಲ್ಲರೂ ಪಕ್ಷಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಪಕ್ಷದ ಸಂಘಟನೆಗಾಗಿ ಹಗಳಲಿರುಳು ಶ್ರಮಿತ್ತಿದ್ದಾರೆ. ಇಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಹುದ್ದೆ ನೀಡುವ ವಿಚಾರದಲ್ಲಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಯನ್ನು ಕಡೆಗಣಿಸಲಾಗಿದೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು.
ಕಾಂಗ್ರೆಸ್ ಸರ್ಕಾರದಿಂದ ಭಾಗ್ಯಗಳ ಹೆಸರಲ್ಲಿ ಹಣ ಕೊಳ್ಳೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಕೇವಲ ಸಚಿವರ ಪುತ್ರಿ ಎಂಬ ಕಾರಣಕ್ಕಾಗಿ ಒಬ್ಬರಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದರೆ ತಪ್ಪು ಸಂದೇಶವನ್ನು ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ನೀಡಿದಂತಾಗುತ್ತದೆ. ಜೊತೆಗೆ, ಪಕ್ಷದಲ್ಲಿ ಕೆಲಸ ಮಾಡುವವರ ಉತ್ಸಾಹ ಕುಗ್ಗಿಸಿದಂತಾಗುತ್ತದೆ. ಪಕ್ಷದ ಬಲವರ್ಧನೆಗೆ ಸ್ವತಂತ್ರವಾಗಿ ಬೆಳೆದುಬಂದ ಹಾಗೂ ಪ್ರಬಲ ನಾಯಕತ್ವ ಗುಣವಿರುವವರ ಅಗತ್ಯವಿದೆ. ಆದ್ದರಿಂದ ಸಚಿವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನ ನೀಡುವುದು ಸರಿಯಾದ ಕ್ರಮವಲ್ಲ ಎಂದು ನೇರವಾಗಿ ಪತ್ರಮುಖೇನ ಅಸಮಾಧಾನ ಹೊರ ಹಾಕಿದ್ದರು.