ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಶಾಸಕ, ಸಂಸದರಾಗಿದ್ದ ಹಿರಿಯ ನಾಯಕ ವಾಪಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಲ ರಾಜಕೀಯ ವಿದ್ಯಾಮನಗಳಿಂದ ಅವರು ಕಾಂಗ್ರೆಸ್ ತೊರೆದಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ಬೆಂಗಳೂರು/ಕೊಪ್ಪಳ, (ಜುಲೈ.03): ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಶಾಸಕ, ಸಂಸದರಾಗಿದ್ದ ಎಚ್.ಜಿ.ರಾಮುಲು ತಮ್ಮ ಪುತ್ರ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಅವರೊಂದಿಗೆ ವಾಪಸ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಹೌದು...ಎಚ್.ಜಿ.ರಾಮುಲು ತಮ್ಮ ಪುತ್ರ ಮಾಜಿ ಎಮ್ಮೆಲ್ಸಿ ಎಚ್.ಆರ್.ಶ್ರೀನಾಥ್ ಅವರೊಂದಿಗೆ ಜೆಡಿಎಸ್ ಸೇರುವ ಮೂಲಕ ರಾಜಕೀಯದ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ಆದ್ರೆ, ಇದೀಗ ಘರ್ ವಾಪಸ್ ಆಗಿದ್ದಾರೆ. ಇಂದು(ಭಾನುವಾರ) ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ತಂದೆ-ಮಗ ಕಾಂಗ್ರೆಸ್ ಸೇರ್ಪಡೆಯಾದರು.
ಕೊಪ್ಪಳದಲ್ಲಿ ಸಿದ್ದು-ಡಿಕೆಶಿ: ಮದ್ವೆ ಕಾರ್ಯಕ್ರಮದ ಮಧ್ಯೆ ಟಿಕೆಟ್ ಫೈಟ್
ಈ ವೇಳೆ ಮಾತನಾಡಿದ ಡಿಕೆಶಿ, ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡ ಎಲ್ಲಾ ನಾಯಕರಿಗೂ ಶುಭಾಶಯ ಕೋರುತ್ತೇನೆ. ಪಕ್ಷ ಬಲವರ್ಧನೆಗೆ ಹಾಗೂ ಅಭಿವೃದ್ಧಿಗೆ ನಿಮ್ಮ ಸಹಕಾರ, ಸೇವೆ ಅತೀ ಮುಖ್ಯ. ಕೊಪ್ಪಳ ಜಿಲ್ಲೆಯಲ್ಲಿ 5 ಕ್ಷೇತ್ರದಲ್ಲಿ ಗೆಲ್ಲುವ ನಂಬಿಕೆಯಿದೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದರು.
ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದ ಕೊಪ್ಪಳ ಮೂಲದ ಎಚ್.ಜಿ.ರಾಮುಲು ಮತ್ತು ಅವರ ಕುಟುಂಬ 2017 ಡಿ.23 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಭಿನ್ನಾಭಿಪ್ರಾಯ ಹಾಗೂ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆಯೆಂದು ಬೇಸಗೊಂಡಿದ್ದರು. ಈ ಕಾರಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಸೇರಿದ್ದರು.
ಸೇರ್ಪಡೆಗೂ ಮುನ್ನವೇ ರಾಜಿ ಪಂಚಾಯ್ತಿ
ಹೌದು....ಕಳೆದ ಬಾರಿ ಗಂಗಾವತಿ ವಿಧಾನಸಭೆ ಟಿಕೆಟ್ ಸಿಕ್ಕಿಲ್ಲೆಂದು ಎಚ್.ಆರ್.ಶ್ರೀನಾಥ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ವಾಪಸ್ ಕಾಂಗ್ರೆಸ್‌ಗೆ ಮರಳಿದ್ದಾರೆ. ಆದ್ರೆ, ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸೇರ್ಪಡೆ ಕಾರ್ಯಕ್ರಮಕ್ಕೂ ಮೊದಲು ಡಿಕೆ ಶಿವಕುಮಾರ್ ಅವರು ಇಕ್ಬಾಲ್ ಅನ್ಸಾರಿ ಹಾಗೂ ಎಚ್‌ಜಿ ರಾಮುಲು ಬೆಂಬಲಿಗರ ಮಧ್ಯೆ ರಾಜಿ ಪಂಚಾಯ್ತಿ ಮಾಡಿಸಿದರು. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡುವಂತೆ ಡಿಕೆಶಿ ಸಲಹೆ ನೀಡಿದರು.
ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ: ಮಾಜಿ ಎಂಎಲ್‌ಸಿ ಶ್ರೀನಾಥ್ ಕಾಂಗ್ರೆಸ್‌ಗೆ?
ಹೈದರಾಬಾದ್ ಕರ್ನಾಟಕದ ಜನಪ್ರಿಯ ನಾಯಕರಾದ ಶ್ರೀ ಎಚ್.ಜಿ ರಾಮುಲು ಹಾಗೂ ಪರಿಷತ್ ಮಾಜಿ ಸದಸ್ಯ ಶ್ರೀ ಹೆಚ್.ಆರ್. ಶ್ರೀನಾಥ್ ಅವರು ಸೇರ್ಪಡೆಗೊಂಡಿದ್ದು ಪಕ್ಷಕ್ಕೆ ಶಕ್ತಿ ತುಂಬಿದೆ. ಇವರ ಜೊತೆ ಹಾಗೂ ಹಲವು ನಾಯಕರು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
1/2 pic.twitter.com/H1XwQyXG7L
ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಾಥ್
ಯೆಸ್....ಎಚ್‌ಜಿ ರಾಮುಲು ಅವರ ಪುತ್ರ ಶ್ರೀನಾಥ್ ಅವರು ಮುಂಬರುವ ಗಂಗಾವತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ, ಇದಕ್ಕೆ ಇಕ್ಬಾಲ್ ಅನ್ಸಾರಿ ಒಪ್ಪುತ್ತಿಲ್ಲ. ನಾನೇ ನಿಲ್ಲುತ್ತೇನೆ ನನಗೆ ಟಿಕೆಟ್ ಬೇಕು ಎಂದು ಇಕ್ಬಾಲ್ ಅನ್ಸಾರಿ ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಡಿಕೆ ಶಿವಕುಮಾರ್ ಕೊಪ್ಪಳ ಜಿಲ್ಲಾ ಪ್ರವಾಸ ಸಂದರ್ಭದಲ್ಲೂ ಇಕ್ಬಾಲ್ ಅನ್ಸಾರಿ ಟಿಕೆಟ್ ಬಗ್ಗೆ ಚರ್ಚೆ ಮಾಡಿದ್ದಾರೆ. ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ, ಇಕ್ಬಾಲ್ ಅನ್ಸಾರಿ ಹಾಗೂ ಡಿಕೆ ಶಿವಕುಮಾರ್ ಹೆಲಿಪ್ಯಾಡ್ ಬಳಿ ಗುಪ್ತ್-ಗುಪ್ತ್ ಚರ್ಚೆ ಮಾಡಿದ್ದರು.
ರಾಜಕೀಯ ಹಿನ್ನೆಲೆ
ಮಾಜಿ ಸಂಸದ ಎಚ್.ಜಿ.ರಾಮುಲು ಅವರ ಚಿಕ್ಕಪ್ಪ ಶ್ರೀರಾಮುಲು ಕಾಂಗ್ರೆಸ್ ಶಾಸಕರಾಗಿದ್ದರು. ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ 1973-74 ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಎಚ್.ಜಿ.ರಾಮುಲು ಶಾಸಕರಾಗಿ ಆಯ್ಕೆಯಾಗಿ, ಕಾಂಗ್ರೆಸ್‌ನಿಂದ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. 1980ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸದಸ್ಯರಾಗಿ ಆಯ್ಕೆಯಾದರು. 1984 ರಿಂದ 2004 ರವರೆಗೆ ನಾಲ್ಕು ಬಾರಿ ಸಂಸದರಾಗಿದ್ದರು. ಅಲ್ಲದೇ ರಾಯಚೂರು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಪುತ್ರ ಎಚ್.ಆರ್.ಶ್ರೀನಾಥ 2000-01ರಲ್ಲಿ ಕಾಡಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. 2004 ರಿಂದ 2010 ರವರೆಗೆ ಇವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ನಂತರ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.