ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ, ಅಮಿತ್ ಶಾ ವಿಶ್ವಾಸ!

By Suvarna NewsFirst Published Jul 3, 2022, 4:46 PM IST
Highlights
  • ತೆಲಂಗಾಣ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ ಹೇಳಿಕೆ
  • ತೆಲಂಗಾಣ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲೂ ಬಿಜೆಪಿ
  • ಜನಪರ, ಅಭಿವೃದ್ಧಿ ಆಡಳಿತ ನೀಡುತ್ತಿರುವ ಬಿಜೆಪಿಯತ್ತ ಜನರ ಒಲವು

ಹೈದರಾಬಾದ್(ಜು.03); ಭಾರತ ವಿಶ್ವಗುರುವಾಗುತ್ತಿದೆ. ಸಂಪೂರ್ಣ ಭಾರತದಲ್ಲಿ ಬಿಜೆಪಿ ಆವರಿಸುತ್ತಿದೆ. ಜನಪರ ಆಡಳಿತ, ಅಭಿವೃದ್ಧಿಗಾಗಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತೆಲಂಗಾಣದಲ್ಲಿ ಆಯೋಜಿಸಿದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕಟುಂಬ ರಾಜಕಾರಣ, ಜಾತೀಯತೆ ಹಾಗೂ ತುಷ್ಟೀಕರಣದ ರಾಜಕೀಯದಿಂದ ದಶಕಗಳ ವರೆಗೆ ಭಾರತೀಯರು ಸಂಕಷ್ಟ ಅನುಭವಿಸಿದ್ದಾರೆ. 2014ರಿಂದ ನರೇಂದ್ರ ಮೋದಿ ಆಡಳಿತ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹೊಸ ಬದಲಾವೆಗೆ ನಾಂದಿ ಹಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಹುಲಿ ಬರುತ್ತಿದ್ದಂತೆಯೇ ನರಿಗಳು ಓಡಿ ಹೋಗ್ತವೆ: ಮೋದಿ ಸ್ವಾಗತಿಸದ ಕೆಸಿಆರ್‌ಗೆ ಬಿಜೆಪಿ ಲೇವಡಿ!

ತೆಲಂಗಾಣದ ಕುಟುಂಬ ರಾಜಕೀಯ ಅಂತ್ಯಗೊಳಿಸಲು ಬಿಜೆಪಿ ಶಕ್ತವಾಗಿದೆ. ಇತರ ರಾಜ್ಯಗಳು ಹಾಗೂ ಕೇಂದ್ರದ ಆಡಳಿತ ಗಮನಿಸಿರುವ ತೆಲಂಗಾಣ ಜನತೆ ಇದೀಗ ಬಿಜೆಪಿಯತ್ತ ಒಲವು ತೋರಿದ್ದಾರೆ. ತೆಲಂಗಾಣ ಮಾತ್ರವಲ್ಲ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ತೆಲಂಗಾಣದಲ್ಲಿ ಆಯೋಜಿಸಿರುವ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಇಂದು ಅಂತ್ಯಗೊಳ್ಳಲಿದೆ. ಇಂದು ಹಲವು ಮಹತ್ವದ ನಿರ್ಧಾರಗಳನ್ನು ಬಿಜೆಪಿ ತೆಗೆದುಕೊಳ್ಳಲಿದೆ. ಕಳೆದ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ತೆಲಂಗಾಣದ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಪಕ್ಷ ಬಲವರ್ಧನೆಗೆ ಹಲವು ಕ್ರಮ:
ನಡ್ಡಾ ಅವರು ಪಕ್ಷ ಬಲವರ್ಧನೆಗೂ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಇದೇ ವೇಳೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಾಕೀತು ಮಾಡಿದರು. ‘ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದ 30 ಕೋಟಿ ಫಲಾನುಭವಿಗಳ ಜೊತೆ ಬಿಜೆಪಿ ನಾಯಕರು ಸಂವಾದ ನಡೆಸಬೇಕು. ದೇಶದ ಪ್ರತಿ ಬೂತ್‌ನಲ್ಲೂ 200 ಸಕ್ರಿಯ ಬಿಜೆಪಿ ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಬೂತ್‌ ಮಟ್ಟದ ಪ್ರಮುಖರು ಕಾರ್ಯಕರ್ತರ ಜೊತೆ ಸಂವಾದ ನಡೆಸಿ, ಕಾರ್ಯಕರ್ತರು ಜನರ ಜೊತೆ ಸಂಪರ್ಕದಲ್ಲಿರುವಂತೆ ಮಾಡಬೇಕು. ಜನಸಾಮಾನ್ಯರ ಜೊತೆ ಸಂಪರ್ಕದಲ್ಲಿರಲು ಸ್ಥಳೀಯ ಮಟ್ಟದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಬೇಕು’ ಎಂದು ಅವರು ತಾಕೀತು ಮಾಡಿದರು.

ಹೈದರಾಬಾದಲ್ಲಿ ಬಿಜೆಪಿ ಕಾರ‍್ಯಕಾರಿಣಿ, ದಕ್ಷಿಣ ರಾಜ್ಯಗಳ ಮೇಲೆ ಕೇಸರಿ ಪಕ್ಷ ಕಣ್ಣು!

‘ಪ್ರತಿ ವಾರ ರಾಜ್ಯ ಬಿಜೆಪಿ ಅಧ್ಯಕ್ಷರು ಬೂತ್‌ ಮಟ್ಟದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಬೇಕು. ಬಿಜೆಪಿ ನಾಯಕರು ಹಳ್ಳಿಗಳಲ್ಲಿ ಒಂದು ರಾತ್ರಿ ಕಳೆಯುವ ‘ಪ್ರವಾಸ್‌’ ಯೋಜನೆಯ ಬಗ್ಗೆ ಗಮನ ಹರಿಸಬೇಕು’ ಎಂದ ನಡ್ಡಾ, ‘ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕಿ ಬಾತ್‌ ಭಾಷಣವನ್ನು ಇನ್ನಷ್ಟುಜನರಿಗೆ ತಲುಪಿಸಲು ಯತ್ನಿಸಬೇಕು’ ಎಂದೂ ನಿರ್ದೇಶಿಸಿದರು. 

ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಬೀಭತ್ಸ ಹತ್ಯೆ ಹಾಗೂ ತೆಲಂಗಾಣ ಚುನಾವಣೆ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ವಿರುದ್ಧ ಹೇಳಿಕೆ ನೀಡಿದ್ದರು. ನೂಪುರ್‌ರನ್ನು ಬೆಂಬಲಿಸಿದ್ದಕ್ಕಾಗಿ ಮತಾಂಧರು ಉದಯಪುರದಲ್ಲಿ ಹಿಂದೂ ಟೈಲರ್‌ ಒಬ್ಬನ ಶಿರಚ್ಛೇದ ಮಾಡಿದ್ದರು. ನೂಪುರ್‌ ಹೇಳಿಕೆ ಹಾಗೂ ಬಳಿಕ ನಡೆದ ಟೈಲರ್‌ ಹತ್ಯೆ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಕ್ಷವು ಸಮತೋಲನ ಕಾಯ್ದುಕೊಳ್ಳುವ ಮಹತ್ವದ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ.

click me!