
ಹೈದರಾಬಾದ್ (ಜ.21): ‘ತೆಲಂಗಾಣ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಉಂಟುಮಾಡಲು ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರಿಗೆ 500 ಕೋಟಿ ರು. ಆಮಿಷ ಒಡ್ಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದಕ್ಕಾಗಿ ಕೆಸಿಆರ್ ಹೀಗೆ ಮಾಡಿದ್ದಾರೆ’ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ರೇವಂತ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ 25 ವಿಧಾನಸಭೆಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪಕ್ಷದಲ್ಲಿ ಒಡಕು ಉಂಟು ಮಾಡಿದರೆ, 500 ಕೋಟಿ ರು. ನೀಡುವುದಾಗಿ ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರಿಗೆ ಕೆಸಿಆರ್ ಆಮಿಷ ಒಡ್ಡಿದ್ದಾರೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಎರ್ರಾಬೆಲಿ ದಯಾಕರ್ ರಾವ್ ಅವರ ಮನೆಯಲ್ಲಿ ಸಭೆ ನಡೆಸಿದ ಕೆಸಿಆರ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ನಾಯಕ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ’ ಎಂದರು. ‘ಕೆಸಿಆರ್ ಅವರ ಈ ದ್ವಂದ್ವಗಳು ಗಮನಕ್ಕೆ ಬಂದ ಕಾರಣದಿಂದಲೇ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಕೆಸಿಆರ್ ಅವರ ಬಿಆರ್‌ಎಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿಲ್ಲ’ ಎಂದು ಹೇಳಿದರು.
‘ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸುವ ಸುಪಾರಿಯನ್ನು ಕೆಸಿಆರ್ ತೆಗೆದುಕೊಂಡಿದ್ದಾರೆ. ಬಿಜೆಪಿ ಲಾಭ ಮಾಡಿಕೊಡುವ ಏಕೈಕ ಉದ್ದೇಶದಿಂದ ಕೆಸಿಆರ್ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಾರೆ. ಕಾಂಗ್ರೆಸ್ ಸೋಲಿಸಿದರೆ ಕೆಸಿಆರ್‌ಗೆ ಲಾಭವೇನು? ನಿವ್ಯಾಕೆ ಚುನಾವಣೆಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದೀರಿ? ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಏಕೆ ಮಾತುಕತೆ ನಡೆಸುತ್ತಿದ್ದೀರಿ?’ ಎಂದು ರೇವಂತ್ ಪ್ರಶ್ನಿಸಿರು. ಅಲ್ಲದೇ, 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿ ಚುನಾವಣೆ ಸಂಬಂಧ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ರೇವಂತ್ ಆರೋಪಿಸಿದರು.
‘ಮುಸ್ಲಿಂ ಓಲೈಕೆಗೆ ಮೋದಿಯಿಂದ ಬಿಎಸ್‌ವೈ ಬಳಕೆ’: ಬಿ.ಕೆ.ಹರಿಪ್ರಸಾದ್
ಇದು ಕೇವಲ ಊಹಾಪೋಹ: ರಾಜ್ಯ ಕಾಂಗ್ರೆಸ್‌ನಲ್ಲಿ ಒಡಕು ಮೂಡಿಸಲು ತೆಲಂಗಾಣದ ಮುಖ್ಯಮಂತ್ರಿಗಳು 500 ಕೋಟಿ ರು. ನೀಡುತ್ತಿದ್ದಾರೆ ಎಂಬ ಸುದ್ದಿ ಕೇವಲ ಊಹಾಪೋಹ. ಈ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಉತ್ತರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.