
ಬೆಂಗಳೂರು (ಜ.21): ‘ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು, ಅನೇಕರು ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಮುಂದೆ ಜೆಡಿಎಸ್ ಶಾಸಕರು ಹಾಗೂ ಬಿಜೆಪಿ ಶಾಸಕರೂ ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ನೆಲಮಂಗಲದ ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ನಾಯುಕರು ಆಗಮಿಸುತ್ತಿದ್ದಾರೆ. ಎಚ್.ವಿಶ್ವನಾಥ್ ಅವರು ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿಯಾಗಿದೆ. ಉಳಿದಂತೆ ಬಿಜೆಪಿಯಿಂದಲೂ ಶಾಸಕರು ಕಾಂಗ್ರೆಸ್ ಸೇರಲು ಉತ್ಸುಕವಾಗಿದ್ದಾರೆ. ಬಹಳಷ್ಟುಮಂದಿ ಸಂಪರ್ಕಿಸಿದ್ದು, ಅವರು ಪಕ್ಷಕ್ಕೆ ಬಂದರೆ ಅವರಿಗೆ ಸ್ಥಾನ ನೀಡಬೇಕಾಗುತ್ತದೆ. ಅದು ಎಲ್ಲ ಕಡೆಯೂ ಸಾಧ್ಯವಾಗುವುದಿಲ್ಲ. ಹೀಗಾಗಿ ಯೋಚಿಸಿ ಕ್ರಮ ಕೈಗೊಳ್ಳುತ್ತೇವೆ. ಯಾರೆಲ್ಲಾ ಬರುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದರು.
ರಾಜ್ಯದಲ್ಲಿರುವುದು ಬಿ-ರಿಪೋರ್ಟ್ ಸರ್ಕಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ
ಭರವಸೆ ಈಡೇರಿಸಲು ಬದ್ಧ: ನಮ್ಮ ಘೋಷಣೆಗಳ ಬಗ್ಗೆ ಬಿಜೆಪಿ ನಾಯಕರು ಈ ಯೋಜನೆಗಳ ಜಾರಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಹೇಗೆ ತರಬೇಕು ಎಂದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡನೆ ಮಾಡಿದ್ದಾರೆ. ನಾನು ಕೂಡ 35-40 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಯೋಜನೆಗಳಿಗೆ ಹೇಗೆ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದು ತಿಳಿದಿದೆ ಎಂದರು.
ನಾವು ಘೋಷಣೆ ಪ್ರಕಟಿಸಿದ ಮೇಲೆ ಈಗ ಮುಖ್ಯಮಂತ್ರಿಗಳು ಹಾಗೂ ಸಚಿವ ಅಶೋಕ್ ಅವರು ಬಜೆಟ್‌ನಲ್ಲಿ ಈ ಯೋಜನೆ ತರುತ್ತೇವೆ ಎಂದು ಹೇಳಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಸರ್ಕಾರ ಯಾಕೆ ಈ ಕಾರ್ಯಕ್ರಮ ನೀಡಲಿಲ್ಲ ಎಂದು ಕಿಡಿ ಕಾರಿದರು. ಬೆಲೆ ಏರಿಕೆ ಹೊರೆ ತಗ್ಗಿಸಲು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡಲು ಘೋಷಣೆ ಮಾಡಿದ್ದೇವೆ. ಇದರಿಂದ ಪ್ರತಿ ಮನೆಗೆ 1500ರಂತೆ ವರ್ಷಕ್ಕೆ 18,000 ಉಳಿತಾಯವಾಗುತ್ತದೆ.
ಬಸವಣ್ಣ, ಕುವೆಂಪು ಮೇಲಾಣೆ ಫ್ರೀ ವಿದ್ಯುತ್ ಕೊಡ್ತೀವಿ: ಡಿ.ಕೆ.ಶಿವಕುಮಾರ್
ಇನ್ನು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡುವ ಘೋಷಣೆ ಮಾಡಲಾಗಿದೆ. ಇವೆರಡರಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರ ಉಳಿತಾಯ ಆಗುತ್ತದೆ. ಇನ್ನು ಈಗ ನೀಡುತ್ತಿರುವ ಅಕ್ಕಿಯನ್ನು 5 ರಿಂದ 10 ಕೆ.ಜಿಗೆ ಏರಿಕೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಭರವಸೆಗಳು ಬಿಜೆಪಿಯಂತೆ ಸುಳ್ಳು ಭರವಸೆಗಳಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.