* ದಾವಣಗೆರೆಯಲ್ಲಿ ರಾಜ್ಯ ನಾಯಕರ ಚಿಂತನ- ಮಂಥನ
* ಚುನಾವಣೆ, ಸಂಘಟನೆ ಕುರಿತು ಮುಖಂಡರ ಚರ್ಚೆ
* ಅಪೂರ್ವ ರೆಸಾರ್ಟ್‌ನಲ್ಲಿ ಸಭೆ
ದಾವಣಗೆರೆ(ಸೆ.18): ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಾಗೂ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯನ್ನು ಯಶಸ್ವಿಗೊಳಿಸಲು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ದಿನಗಳ ಕಾರ್ಯಕ್ರಮದ ಬಗ್ಗೆ ಕಾರ್ಯಕ್ರಮ ಮಾಹಿತಿ ನೀಡಿದರು. ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳಿಗೆ ಬೇಕಾದ ಕಾರ್ಯತಂತ್ರ, ಕೇಂದ್ರ-ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳು, ಮುಂದಿನ 3-4 ತಿಂಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಶನಿವಾರ ಸಂಜೆ 6.30ಕ್ಕೆ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಸಭೆ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಸೇರಿದಂತೆ ಪದಾಧಿಕಾರಿಗಳು, ರಾಜ್ಯ ನಾಯಕರು ಭಾಗವಹಿಸುವರು.
ಭಾನುವಾರ ಬೆಳಿಗ್ಗೆ 10ಕ್ಕೆ ಇಲ್ಲಿನ ತ್ರಿಶೂಲ್ ಕಲಾ ಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಪ್ರಭಾರಿ ಡಿ.ಕೆ.ಅರುಣಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಸೇರಿದಂತೆ ಸಚಿವರು, ಸಂಸದರು, ವಿದ ಸದಸ್ಯರು, ಶಾಸಕರು ಸೇರಿದಂತೆ 574 ಜನ ಅಪೇಕ್ಷಿತರು ಕಾರ್ಯಕಾರಿಣಿಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ಜಿಲ್ಲಾ, ತಾಲೂಕು ಪಂಚಾಯಿತಿ ಎಲೆಕ್ಷನ್ ಮುಂದೂಡಿಕೆಗೆ ಹೆಜ್ಜೆ ಇಟ್ಟ ಸರ್ಕಾರ
ಸಕಲ ಸಿದ್ಧತೆ:
ಕಾರ್ಯಕಾರಿಣಿಗೆ ಆಗಮಿಸುವವರಿಗಾಗಿ ನಗರದ ವಿವಿಧ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ 400ಕ್ಕೂ ಹೆಚ್ಚು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕಾರಿಣಿಗೆ ಬಂದವರಿಗೆ ಬೆಣ್ಣೆ ದೋಸೆ, ಕಾರಾ ಮಂಡಕ್ಕಿ, ಮೆಣಸಿನಕಾಯಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಮುಳುಗಾಯಿ ಎಣ್ಣೆಗಾಯಿ, ಗೋಧಿ ಹುಗ್ಗಿ ಸೇರಿದಂತೆ ನಮ್ಮ ಜಿಲ್ಲೆಯ ಆಹಾರವನ್ನು ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ 71ನೇ ವರ್ಷದ ಜನ್ಮದಿನದ ಅಂಗವಾಗಿ ದಾವಣಗೆರೆಗೆ ಆಗಮಿಸಲಿರುವ ಕೇಂದ್ರ, ರಾಜ್ಯ ನಾಯಕರಿಗೆ 71 ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಗುವುದು ಎಂದು ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ಕಾರ್ಯಕ್ರಮದ ಸಂಕ್ಷಿಪ್ತ ನೋಟ
-ಸೆ.18ರ ಸಂಜೆ 7ಕ್ಕೆ- ದಾವಣಗೆರೆ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಸಭೆ.
-ಸೆ.19ರ ಬೆಳಿಗ್ಗೆ 10ಕ್ಕೆ-ಸಿಎಂ ಬಸವರಾಜ ಬೊಮ್ಮಾಯಿಯಿಂದ ಧ್ವಜಾರೋಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ.
-ಸೆ.19ರ ಬೆಳಿಗ್ಗೆ 10ಕ್ಕೆ-ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಸಿಎಂ ಬೊಮ್ಮಾಯಿ ಚಾಲನೆ, ಅಧ್ಯಕ್ಷತೆ ನಳಿನ್ ಕುಮಾರ್ ಕಟೀಲು.
-ಸೆ.19ರ ಸಂಜೆ 5ಕ್ಕೆ- ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ.
ಅಪೇಕ್ಷಿತರಿಗೆ ಸ್ಥಳೀಯ ತಿಂಡಿ, ತಿನಿಸು, ಭೋಜನ
-ಬೆಳಗ್ಗೆ, ಸಂಜೆ: ಬೆಣ್ಣೆದೋಸೆ, ಮಂಡಕ್ಕಿ, ಮೆಣಸಿನ ಕಾಯಿ ಸೇರಿದಂತೆ ಬೆಳಗಿನ ಉಪಾಹಾರ, ಟೀ, ಹಾಲು, ಕಾಫಿ ವ್ಯವಸ್ಥೆ.
-ಮಧ್ಯಾಹ್ನ ಊಟಕ್ಕೆ: ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಮುಳುಗಾಯಿ ಹೆಣಗಾಯಿ, ಗೋಧಿ ಹುಗ್ಗಿ, ಅನ್ನ-ಸಾರು, ಇತರೆ ಆಹಾರ.