ಬೆಂಗಳೂರು (ಜೂ.06): ಕಾಂಗ್ರೆಸ್ ಬೆಂಬಲವನ್ನು ವಾಪಸ್ ಪಡೆದಿದ್ದಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ನೇತೃತ್ವದ ಕೇಂದ್ರ ಸರ್ಕಾರ 1997ರಲ್ಲಿ ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಲಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದರು.
ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಸಾಧನೆ ಸ್ಮರಣೆ ಅಭಿಯಾನದಲ್ಲಿ ಶನಿವಾರ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದರು. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವಾಪಸ್ ಪಡೆಯುವಂತೆ ಹೈ ಕಮಾಂಡ್‌ಗೆ ಪದೇ ಪದೇ ಸಂದೇಶ ರವಾನಿಸುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ಕಾಂಗ್ರೆಸ್ ದೇವೇಗೌಡ ಸರ್ಕಾರಕ್ಕೆ ನಿಡಿದ ಬೆಂಬಲವನ್ನು ಹಿಂಪಡೆಯಿತು. ಪರಿಣಾಮ ದೇವೇಗೌಡ ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದರು ಎಂದರು.
'ಪ್ರಧಾನಿ ಹುದ್ದೆ ತೊರೆದರೂ ದೇಶಕ್ಕಾಗಿ ಹೋರಾಡುವ ದೇವೇಗೌಡರು!'
ವಾಜಪೇಯಿ ಸರ್ಕಾರ ಪತನಗೊಂಡ ಬಳಿಕ ತೃತೀಯ ರಂಗಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಆಗಿನ ಅಧ್ಯಕ್ಷರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಹೇಳಿದ್ದರು. ನನ್ನ ಮತ್ತು ದಿವಂಗತ ಸಚ್ಚಿದಾನಂದ ಸಮ್ಮುಖದಲ್ಲಿ ದೇವೇಗೌಡರಿಗೆ ನೀವೇ ಪ್ರಧಾನಿಯಾಗಬೇಕು ಮತ್ತು ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದರು. ಇದಕ್ಕೆ ನಾನು ಸಾಕ್ಷಿಯಾಗಿದ್ದೆ ಎಂದರು.
ಪ್ರಧಾನಿಯಾಗಿ ಶಿಸ್ತು ಸಂಯಮ ಗೌರವದಿಂದ ದೇಶವನ್ನು ದೇವೇಗೌಡರು ಆಳಿದರು. ಯಾವ ಅಪಸ್ವರಗಳು ಇರಲಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ಬದಲಾದರು ನರಸಿಂಹ ರಾವ್ ಬದಲಿಗೆ ಸೀತಾರಾಮ್ ಕೇಸರಿ ಅಧ್ಯಕ್ಷರಾದರು. ಸೀತಾರಾಂ ಕೇಸರಿ ಮತ್ತು ದೇವೇಗೌಡ ಅವರ ಸಂಬಂಧ ಚೆನ್ನಾಗಿತ್ತಾದರೂ ನಂತರ ದಿನದಲ್ಲಿ ಅನುಮಾಗಳು ಶುರುವಾಯಿತು. ಇದಕ್ಕೆ ಪೂರಕ ಎಂಬಂತೆ ರಾಜ್ಯದ ಕಾಂಗ್ರೆಸ್ ನಾಯಕರು ಹೈ ಕಮಾಂಡ್ ಬೆಂಬಲ ವಾಪಸ್ ಪಡೆಯುವಂತೆ ಆಗಾಗ್ಗೆ ಸಂದೇಶಗಳನ್ನು ರವಾನಿಸುತ್ತಿದ್ದರು. ಈ ಒತ್ತಡಕ್ಕೆ ದೇವೇಗೌಡರು ಬಲಿಯಾಗಬೇಕಾಯಿತು ಎಂದು ನೆನಸಿಕೊಂಡರು.
ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯುವ ಸುಳಿವು ದೇವೇಗೌಡ ಅವರಿಗೆ ಗುಪ್ತಚರದಿಂದ ಮಾಹಿತಿ ಲಭ್ಯವಾಗಿತ್ತು. ನಾನು ಮತ್ತು ಹಿರಿಯ ನಾಯಕರಾಗಿದ್ದಾರ್.ಕೆ ಧವನ್ ಅವರು ದೇವೇಗೌಡರ ಮನೆಗೆ ಹೋಗಿದ್ದ ವೆಳೆ ಈ ವಿಚಾರ ತಿಳಿಯಿತು. ಧವನ್ ಇದನ್ನು ತಡೆಯಲು ಮುಂದಾಗಿದ್ದರು. ಆದರೆ ಸೀತಾರಂ ಕೇಸರಿ ಅಷ್ಟರಲ್ಲೇ ರಾಷ್ಟ್ರಪತಿ ಭೇಟಿ ಮಾಡಿ ಬೆಂಬಲ ವಾಪಸ್ ಪಡೆಯುವ ಮಾಹಿತಿ ನೀಡಿದ್ದರು. ಹೀಗಾಗಿ ರಾಷ್ಟ್ರಪತಿಗಳು ಲೋಕಸಭೆಯಲ್ಲಿ ಬಹುಮತ ಸಾಬೀತುಪಡುಸು ಸೂಚಿಸಿದ್ದು, ಸರ್ಕಾರ ಪತನವಾಯಿತು.