ರಮೇಶ್‌, ಶ್ರೀರಾಮುಲು ಕಡೆಯಿಂದ ಪಟ್ಟು: ಬಿಜೆಪಿಯಲ್ಲೀಗ ಡಿಸಿಎಂ ಕಗ್ಗಂಟು!

By Kannadaprabha NewsFirst Published Dec 18, 2019, 7:31 AM IST
Highlights

ಬಿಜೆಪಿಯಲ್ಲೀಗ ಡಿಸಿಎಂ ಕಗ್ಗಂಟು| (ಏನಾಗುತ್ತೆ?) ಒಂದೆಡೆ, ಇರುವ ಹುದ್ದೆ ರದ್ದತಿಗೆ ಆಪ್ತರ ಆಗ್ರಹ| ಮತ್ತೊಂದೆಡೆ, ಆಕಾಂಕ್ಷಿಗಳು ಹೆಚ್ಚಳ| ರಮೇಶ್‌ ಜಾರಕಿಹೊಳಿ, ಶ್ರೀರಾಮುಲು ಕಡೆಯಿಂದಲೂ ಒತ್ತಾಯ ಹೆಚ್ಚುತ್ತಿರುವ ಹಿನ್ನೆಲೆ| ವರಿಷ್ಠರ ಮುಂದಿಡಲು ಸಿಎಂ ನಿರ್ಧಾರ| ಮೂರೇ ಇರುತ್ತಾ? ಹೆಚ್ಚುತ್ತಾ? ಕಡಿತವಾಗುತ್ತಾ?

ಬೆಂಗಳೂರು[ಡಿ.18]: ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಹುದ್ದೆ ಕಗ್ಗಂಟಾಗಿ ಪರಿಣಮಿಸಿದೆ.

ನಾಲ್ಕನೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬೇಡಿಕೆ ಕೇಳಿಬರುತ್ತಿರುವ ಮಧ್ಯೆಯೇ ಹಾಲಿ ಇರುವ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸಬೇಕು ಎಂಬ ಒತ್ತಡದ ಧ್ವನಿ ದಿನೇ ದಿನೇ ಬಲಗೊಳ್ಳತೊಡಗಿದೆ.

ಅದರಲ್ಲೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ ಅವರು ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ಕುತೂಹಲಕರವಾಗಿದೆ.

ಅನರ್ಹ ಶಾಸಕರ ನೇತೃತ್ವ ವಹಿಸಿದ್ದ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೆ ಪ್ರತಿಯಾಗಿ ವಾಲ್ಮೀಕಿ ಸಮುದಾಯದ ಬಿ.ಶ್ರೀರಾಮುಲು ಅವರೂ ಅದೇ ಸ್ಥಾನದ ಮೇಲೆ ಕಣ್ಣಿರಿಸಿರುವುದರಿಂದ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಕಂಡು ಬರುತ್ತಿದೆ.

ಕಳೆದ ಕೆಲವು ದಿನಗಳಿಂದ ಶ್ರೀರಾಮುಲು ಅವರು ತಮ್ಮ ಪುತ್ರಿಯ ನಿಶ್ಚಿತಾರ್ಥದ ಸಿದ್ಧತೆಯ ನೆಪ ಹೇಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ ಉಪಮುಖ್ಯಮಂತ್ರಿ ಸ್ಥಾನಗಳನ್ನು ಇನ್ನಷ್ಟುಹೆಚ್ಚಿಸುವುದಕ್ಕೆ ಬ್ರೇಕ್‌ ಬೀಳುವ ಸಾಧ್ಯತೆಯೇ ಹೆಚ್ಚಿದ್ದು, ಈಗಿರುವ ಉಪಮುಖ್ಯಮಂತ್ರಿ ಹುದ್ದೆಗಳು ಮುಂದುವರೆಯಲಿವೆಯೇ ಅಥವಾ ಕತ್ತರಿ ಬೀಳುವುದೇ ಎಂಬುದನ್ನು ಕಾದು ನೋಡಬೇಕು.

ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವ ಇದ್ದಾಗ ಹೆಚ್ಚಿನ ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಅಗತ್ಯ ಏನಿದೆ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲೇ ಬಲವಾಗಿ ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ ವೇಳೆ ವರಿಷ್ಠರೊಂದಿಗೆ ಚರ್ಚೆ ನಡೆಸಿದ ಬಳಿಕವೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ ಉದಾಹರಣೆಗಳಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನಸ್ಸಿಲ್ಲದಿದ್ದರೂ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ತರಾತುರಿಯಲ್ಲಿ ರಚಿಸಲಾಯಿತು. ಇದೀಗ ನಾಲ್ಕನೇ ಹುದ್ದೆ ಬಗ್ಗೆಯೂ ಪ್ರಸ್ತಾಪವಾಗುತ್ತಿದೆ. ಆದರೆ, ಈ ಬಾರಿ ಯಡಿಯೂರಪ್ಪ ಅವರು ಈ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ನೇರವಾಗಿಯೇ ವರಿಷ್ಠರ ಬಳಿ ಪ್ರಸ್ತಾಪಿಸಲು ಸಿದ್ಧರಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

click me!