ಡಿಕೆಶಿ ಬಳಿಯಿದ್ದ ಖಾತೆಯೇ ಬೇಕೆಂದು ಪಟ್ಟು: ಜಲಸಂಪನ್ಮೂಲ ಖಾತೆ ಜಾರಕಿಹೊಳಿಗೆ?

By Kannadaprabha NewsFirst Published Feb 10, 2020, 7:34 AM IST
Highlights

ಜಲಸಂಪನ್ಮೂಲ ಖಾತೆ ಜಾರಕಿಹೊಳಿಗೆ ಖಚಿತ?| ಡಿ.ಕೆ.ಶಿವಕುಮಾರ್‌ ಬಳಿಯಿದ್ದ ಖಾತೆಯೇ ಬೇಕೆಂದು ಸಚಿವ ಪಟ್ಟು| ಮನವೊಲಿಕೆಗೆ ಯತ್ನಿಸಿ, ಕಡೆಗೂ ಸಮ್ಮತಿಸಿದರಂತೆ ಯಡಿಯೂರಪ್ಪ| ಆ ನಂತರವೇ ಸ್ವಕ್ಷೇತ್ರಕ್ಕೆ ತೆರಳಿ ಅಭಿನಂದನೆ ಸ್ವೀಕಾರ: ಮೂಲಗಳು

ಬೆಂಗಳೂರು[ಫೆ.10]: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ವೇಳೆ ರಾಜಕೀಯವಾಗಿ ತೀವ್ರ ವಿರೋಧ ಕಟ್ಟುಕೊಂಡಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮೇಲಿನ ಜಿದ್ದಿಗಾಗಿ ಜಲಸಂಪನ್ಮೂಲ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರ ಬೇಡಿಕೆ ಈಡೇರುವ ನಿರೀಕ್ಷೆಯಿದೆ.

ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಮೇಶ್‌ ಜಾರಕಿಹೊಳಿ ಹಿಡಿದಿರುವ ಪಟ್ಟು ಸಡಿಲಿಸದ ಕಾರಣಕ್ಕಾಗಿ ಖಾತೆ ಹಂಚಿಕೆಯನ್ನು ಮತ್ತಷ್ಟುಕಗ್ಗಂಟಾಗಿ ಮಾಡಿಕೊಳ್ಳದೆ ಜಲಸಂಪನ್ಮೂಲ ಖಾತೆಯನ್ನೇ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಲೋಕೋಪಯೋಗಿ ಖಾತೆ ನೀಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿರುವ ಕಾರಣ ಖಾತೆ ಹಂಚಿಕೆ ಮಾಡಿದ ಬಳಿಕವಷ್ಟೇ ಸ್ಪಷ್ಟಚಿತ್ರಣ ಹೊರಬೀಳಲಿದೆ.

ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಸಂಭಾವ್ಯ ಪಟ್ಟಿ

ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡುವ ಬಗ್ಗೆ ಮೀನಮೇಷ ಎಣಿಸುತ್ತಿದ್ದುದರಿಂದಲೇ ಸಂಪುಟ ವಿಸ್ತರಣೆಗೊಂಡು ನಾಲ್ಕು ದಿನ ಕಳೆದರೂ ಖಾತೆ ಹಂಚಿಕೆಯು ತಡವಾಗಿದೆ ಎನ್ನಲಾಗಿದೆ. ಜಲಸಂಪನ್ಮೂಲ ಹೊರತುಪಡಿಸಿ ಬೇರೆ ಪ್ರಮುಖ ನೀಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದರು. ಇದನ್ನು ಜಾರಕಿಹೊಳಿ ಅವರ ಬಳಿ ಪ್ರಸ್ತಾಪಿಸಿದಾಗ ಬಿಲ್‌ಕುಲ… ಒಪ್ಪಲಿಲ್ಲ ಎಂದು ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರದಲ್ಲಿದ್ದ ಸಚಿವ ಸ್ಥಾನವನ್ನೂ ಲೆಕ್ಕಿಸದೆ ಡಿ.ಕೆ.ಶಿವಕುಮಾರ್‌ ಅವರ ನಡೆ ವಿರೋಧಿಸಿ ರಾಜಕೀಯ ರಿಸ್ಕ್‌ ತೆಗೆದುಕೊಂಡು ಹೊರಬಂದಿದ್ದೇನೆ. ಈಗ ನಿಮ್ಮ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಪಡೆಯದಿದ್ದರೆ ಬಿಜೆಪಿಗೆ ಬಂದು ಏನು ಸಾಧಿಸಿದಂತಾಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ತೀಕ್ಷ$್ಣ ವಾದ ಮಂಡಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಚರ್ಚೆ ವೇಳೆ ರಮೇಶ್‌ ಜಾರಕಿಹೊಳಿ ಅವರ ಮನವೊಲಿಕೆಗೆ ಸಾಕಷ್ಟುಪ್ರಯತ್ನಿಸಿದ್ದಾರೆ. ಅದರೆ, ಅಂತಿಮವಾಗಿ ಜಲಸಂಪನ್ಮೂಲ ಖಾತೆ ನೀಡಲು ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳು ಜಲಸಂಪನ್ಮೂಲ ಖಾತೆ ನೀಡುವುದಾಗಿ ಆಶ್ವಾಸನೆ ನೀಡಿದ ಬಳಿಕವಷ್ಟೇ ಗೋಕಾಕ್‌ನಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ರಮೇಶ್‌ ಜಾರಕಿಹೊಳಿ ಭಾಗಿಯಾಗಿ ಅಭಿನಂದನೆ ಸ್ವೀಕರಿಸಿದರು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ತಮಗೆ ಜಲಸಂಪನ್ಮೂಲ ಖಾತೆ ಸಿಗುವ ಬಗ್ಗೆ ಆಶ್ವಾಸನೆ ಸಿಗುವವರೆಗೂ ಅವರು ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಅಭಿನಂದನೆ ಸ್ವೀಕರಿಸಲು ಹಿಂದೇಟು ಹಾಕಿದ್ದರು. ಖಾತೆಯ ಬಗ್ಗೆ ಸ್ಪಷ್ಟನೆ ಸಿಕ್ಕ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸಂತೋಷವಾಗಿ ಭಾಗಿಯಾದರು ಎಂದು ಹೇಳಲಾಗಿದೆ.

ಇನ್ನು, ಅತ್ಯಧಿಕ ಸಚಿವ ಸ್ಥಾನ ಪಡೆದುಕೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಸಚಿವರಲ್ಲಿಯೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ಪೈಪೋಟಿ ಇದೆ. ನಗರದ ಸಚಿವರು ಈ ಖಾತೆಗಾಗಿ ಪಟ್ಟು ಹಿಡಿದ್ದಾರೆ. ಆದರೆ, ವಿವಾದಕ್ಕೆ ಎಡೆ ಮಾಡಿಕೊಡದೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇನ್ನುಳಿದ ನೂತನ ಸಚಿವರಿಂದ ಯಾವುದೇ ಸಮಸ್ಯೆ ಇಲ್ಲ. ಮುಖ್ಯಮಂತ್ರಿಗಳು ನೀಡುವ ಖಾತೆಯನ್ನು ನಿಭಾಯಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಸ್ತರಣೆ ಮುಗಿದಿದ್ರೂ ಇದ್ದಕ್ಕಿದ್ದಂತೆ ಶಾ ಭೇಟಿ ಮಾಡಿದ ಶ್ರೀರಾಮುಲು, ಅಸಲಿ ಕಾರಣ ಏನು?

ರಮೇಶ್‌ ಜಾರಕಿಹೊಳಿಗೆ ಜಲಸಂಪನ್ಮೂಲ, ಎಸ್‌.ಟಿ.ಸೋಮಶೇಖರ್‌ಗೆ ಸಹಕಾರ, ಗೋಪಾಲಯ್ಯಗೆ ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ, ಬೈರತಿ ಬಸವರಾಜುಗೆ ಪೌರಾಡಳಿತ, ಶ್ರೀಮಂತ ಪಾಟೀಲ್‌ಗೆ ಸಕ್ಕರೆ ಮತ್ತು ಎಪಿಎಂಸಿ, ನಾರಾಯಣಗೌಡಗೆ ಸಣ್ಣ ನೀರಾವರಿ ಅಥವಾ ಪ್ರವಾಸೋದ್ಯಮ, ಬಿ.ಸಿ.ಪಾಟೀಲ್‌ಗೆ ಅರಣ್ಯ ಅಥವಾ ಇಂಧನ, ಶಿವರಾಂ ಹೆಬ್ಬಾರ್‌ಗೆ ಕೃಷಿ/ ಕೌಶಾಲ್ಯಾಭಿವೃದ್ಧಿ, ಡಾ.ಕೆ.ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ, ಆನಂದ್‌ ಸಿಂಗ್‌ಗೆ ಪ್ರವಾಸೋದ್ಯಮ ಖಾತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

click me!