ಕಾಂಗ್ರೆಸಲ್ಲಿ ಐದೇ ನಿಮಿಷದಲ್ಲಿ ಟೋಪಿ ತೆಗೆದುಬಿಡ್ತಾರೆ: ಡಿಕೆಶಿ| ನಿಮ್ಮ ಟೋಪಿ ಬೇರೆಯವರ ಮೇಲೆ ಇರುತ್ತೆ| ಕೆಪಿಸಿಸಿ ಅಧ್ಯಕ್ಷನಾಗಲು ಷರತ್ತು ವಿಧಿಸಿಲ್ಲ| ಅಂತಹ ತಂತ್ರಗಳೆಲ್ಲಾ ಕೆಲಸ ಮಾಡುವುದಿಲ್ಲ
ಬೆಂಗಳೂರು[ಡಿ.27]: ‘ಕಾಂಗ್ರೆಸ್‌ನಲ್ಲಿ ಟೋಪಿ ತೆಗೆಯಲು ನಿರ್ಧರಿಸಿದರೆ ಐದು ನಿಮಿಷದಲ್ಲಿ ತೆಗೆದು ಬಿಡುತ್ತಾರೆ. ಐದೇ ನಿಮಿಷದಲ್ಲಿ ನಿಮ್ಮ ಟೋಪಿ ಬೇರೊಬ್ಬರ ಮೇಲೆ ಇರುತ್ತದೆ’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ನೇಮಕ ಮಾಡುವ ಸುದ್ದಿ ಹರಿದಾಡುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಕಾಂಗ್ರೆಸ್ ಹೈಕಮಾಂಡ್‌ಗೆ ಷರತ್ತು ಹಾಕಲು ಆಗುವುದಿಲ್ಲ. ಯಾವುದೇ ಬ್ಲ್ಯಾಕ್‌ಮೇಲ್ ತಂತ್ರವೂ ಕೆಲಸ ಮಾಡುವುದಿಲ್ಲ. ಇದು ನನ್ನ ನಾಲ್ಕು ದಶಕಗಳ ಅನುಭವದ ಮಾತು. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಷರತ್ತು ಹಾಕಿದ್ದೇನೆ ಎಂಬುದು ಸುಳ್ಳು. ಕಾಂಗ್ರೆಸ್‌ನಲ್ಲಿ ಒಬ್ಬರ ಟೋಪಿ ಬೇರೊಬ್ಬರ ಮೇಲಿರಲು ಐದು ನಿಮಿಷ ಸಾಕು. ಹೀಗಾಗಿ ಅಧ್ಯಕ್ಷರ ವಿಚಾರ ಏನಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಏನಾಗುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ನನಗೆ ಗೊತ್ತಿಲ್ಲ. ಡಿ.30 ರೊಳಗಾಗಿ ಆದಾಯ ತೆರಿಗೆ ಇಲಾಖೆಗೆ ನಾನು ಕೆಲವೊಂದು ದಾಖಲೆಗಳನ್ನು ಒದಗಿಸಬೇಕಾಗಿದೆ. ಯಾವಾಗ ಕರೆದರೂ ಬರುವುದಾಗಿ ಐಟಿಯವರಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ನನ್ನ ಕೆಲಸಗಳಲ್ಲಿ ನಾನು ಕಾರ್ಯನಿರತನಾಗಿದ್ದೇನೆ ಎಂದರು.