ಜನವರಿ ಅಂತ್ಯಕ್ಕೂ ಸಚಿವ ಸಂಪುಟ ವಿಸ್ತರಣೆ ಇಲ್ಲ?

By Kannadaprabha News  |  First Published Dec 27, 2019, 7:26 AM IST

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ತಿಂಗಳು ಕಳೆದಿದೆ. ಆದರೂ ಸಹ ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗಿಲ್ಲ. ಆದರೆ ಇನ್ನೂ ಒಂದು ತಿಂಗಳು ಸಂಪುಟ ವಿಸ್ತರಣೆ ನಡೆಯುವುದು ಡೌತ್ ಎನ್ನಲಾಗಿದೆ. 


ಬೆಂಗಳೂರು [ಡಿ.27]:  ಹೊಸ ವರ್ಷದ ಸಂಕ್ರಾಂತಿ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವ ಬಗ್ಗೆ ಅನುಮಾನ ಮೂಡಿದ್ದು, ಜನವರಿ 20ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನ ಬಳಿಕ ಕೈಗೆತ್ತಿಕೊಂಡರೆ ಹೇಗೆ ಎಂಬ ಚಿಂತನೆ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ನಡೆದಿದೆ.

ಇದು ಇನ್ನೂ ಚಿಂತನೆಯ ಹಂತದಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕವೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Latest Videos

undefined

ಅಧಿವೇಶನದ ಹೊಸ್ತಿಲಲ್ಲಿ ಸಂಪುಟ ವಿಸ್ತರಣೆ ಕೈಗೊಂಡಲ್ಲಿ ಅದು ಭಿನ್ನಮತಕ್ಕೆ ನಾಂದಿ ಹಾಡಬಹುದು ಎಂಬ ಆತಂಕ ಉಂಟಾಗಿದ್ದು, ಕೇವಲ ಹನ್ನೊಂದು ಮಂದಿ ‘ಅರ್ಹ’ ಶಾಸಕರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಬೇಕೆ ಅಥವಾ ಅವರೊಂದಿಗೆ ಪಕ್ಷದ ಒಂದಿಬ್ಬರು ಶಾಸಕರನ್ನೂ ನೇಮಕ ಮಾಡಿಕೊಳ್ಳಬೇಕೆ ಎಂಬ ಜಿಜ್ಞಾಸೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಾಳೆಯ ಇದೆ ಎಂದು ತಿಳಿದು ಬಂದಿದೆ.

ಆದರೆ, ಅಧಿವೇಶನದಲ್ಲಿ ಕೇವಲ ಶಾಸಕರಾಗಿ ಕುಳಿತಲ್ಲಿ ತಾವು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಲೇವಡಿ ಮಾತುಗಳನ್ನು ಎದುರಿಸಬೇಕಾದೀತು. ಹೀಗಾಗಿ, ಯಾವುದೇ ಕಾರಣಕ್ಕೂ ಸಂಕ್ರಾಂತಿ ಮುಗಿಯುತ್ತಿದ್ದಂತೆಯೇ ಅಧಿವೇಶನ ಆರಂಭವಾಗುವುದರೊಳಗಾಗಿ ಸಂಪುಟ ವಿಸ್ತರಣೆ ಮಾಡಿ ತಮ್ಮನ್ನು ಸಚಿವರನ್ನಾಗಿಸಿ ಎಂಬ ಬೇಡಿಕೆಯನ್ನು ಅರ್ಹ ಶಾಸಕರು ಬಲವಾಗಿಯೇ ಮಂಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜ.20ರಿಂದ ಆರಂಭವಾಗುವ ಅಧಿವೇಶನ ಹತ್ತು ದಿನಗಳ ಕಾಲ ನಡೆಯಲಿದೆ. ಅದಾದ ನಂತರ ಸಂಪುಟ ವಿಸ್ತರಣೆ ಎಂದಾದಲ್ಲಿ ಫೆಬ್ರವರಿ ಮೊದಲ ವಾರಕ್ಕೆ ಬೀಳುತ್ತದೆ. ಅಷ್ಟುದಿನಗಳವರೆಗೆ ಕಾಯಲು ಅರ್ಹ ಶಾಸಕರು ಸಿದ್ಧರಿಲ್ಲ. ಯಡಿಯೂರಪ್ಪ ಅವರಿಗೂ ಸಂಪುಟ ವಿಸ್ತರಣೆ ಮತ್ತಷ್ಟುವಿಳಂಬ ಮಾಡಬೇಕು ಎಂಬ ಉದ್ದೇಶವಿಲ್ಲ. ತಮ್ಮ ಸರ್ಕಾರದ ಅಸ್ತಿತ್ವಕ್ಕೆ ಕಾರಣರಾದವರಿಗೆ ಆದಷ್ಟುಬೇಗ ಸಚಿವ ಸ್ಥಾನ ನೀಡಬೇಕು ಎಂಬ ಮನಸ್ಥಿತಿಯಲ್ಲೇ ಇದ್ದಾರೆ. ಆದರೆ, ಪಕ್ಷದಲ್ಲಿನ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದರಿಂದ ಭಿನ್ನಮತ ಉಲ್ಬಣಿಸಿದರೆ ಅಧಿವೇಶನ ಎದುರಿಸುವುದು ಕಷ್ಟವಾಗಬಹುದು ಎಂಬ ಅನುಮಾನದಲ್ಲಿದ್ದಾರೆ.

ಒಂದು ವೇಳೆ ಸದ್ಯ ಕೇವಲ ಅರ್ಹ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಿ ಅಧಿವೇಶನದ ನಂತರ ಮತ್ತೊಂದು ಹಂತದ ವಿಸ್ತರಣೆ ಕೈಗೆತ್ತಿಕೊಳ್ಳಲು ವರಿಷ್ಠರು ಹಸಿರು ನಿಶಾನೆ ತೋರಿದಲ್ಲಿ ಆಗ ಸಂಕ್ರಾಂತಿ ಮುಗಿದ ಬೆನ್ನಲ್ಲೇ ವಿಸ್ತರಣೆಯಾಗುವುದು ನಿಶ್ಚಿತ ಎಂದು ಮಾಹಿತಿ ಗೊತ್ತಾಗಿದೆ.

click me!