
ಭದ್ರಾವತಿ (ನ.30): ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡಿ ತೋರಿಸುವ ಮೂಲಕ ವಿನಾಃ ಕಾರಣ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದರು. ಅವರು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಆಡಳಿತ ನಡೆಸಿರುವ ಮುಖ್ಯಮಂತ್ರಿಗಳು ಲಭ್ಯವಿರುವ ಅನುದಾನದಲ್ಲಿಯೇ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು.
ಆದರೆ ಈಗಿನ ಸರ್ಕಾರದ ಮುಖ್ಯಮಂತ್ರಿಗಳು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡಿ ತೋರಿಸುವ ಮೂಲಕ ಅನುದಾನ ನೀಡಿಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸುವ ಮೂಲಕ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ನಡುವೆ ಅಧಿಕಾರ ಹಂಚಿಕೆ ಎಂಬ ವಿಷಯದಲ್ಲಿ ಜನರ ದಿಕ್ಕನ್ನು ತಪ್ಪಿಸಲು ಆಡಳಿತದಲ್ಲಿರುವವರು ಮಂಗನಾಟವಾಡುತ್ತಿದ್ದಾರೆಂದು ಆರೋಪಿಸಿ ಇದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆಂದರು.
ರಾಜಕಾರಣಿಗಳು ಧಾರ್ಮಿಕ ಕ್ಷೇತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಯಾರನ್ನು ಸಮುದಾಯ ಅಥವಾ ಜಾತಿ ಆಧಾರ ಮೇಲೆ ನೋಡಬಾರದು. ವೈಯಕ್ತಿಕ ನೆಲೆಗಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕೆಂದರು. ಈಗಿನ ಸರ್ಕಾರದ ಆಡಳಿತ ವೈಖರಿ ಭಿನ್ನವಾಗಿದೆ. ಪಕ್ಷದವರು ಕಾನೂನು ಬಾಹಿರವಾಗಿ ಅಧಿಕಾರ ಚಲಾಯಿಸುವ ಮೂಲಕ ಅನ್ಯಾಯ, ಅಕ್ರಮದ ವಿರುದ್ಧ ಹೋರಾಡುವ ಬೇರೆ ಪಕ್ಷದವರನ್ನು, ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಂದೆ ಆಡಳಿತ ನಡೆಸುವವರಿಗೆ, ಅಧಿಕಾರದಲ್ಲಿರುವವರಿಗೆ ಒಂದು ರೀತಿ ಪಾಠ ಹೇಳಿಕೊಡುವಂತಿದೆ ಎಂದು ವ್ಯಂಗ್ಯವಾಗಿ ವ್ಯಕ್ತಪಡಿಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ, ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಪ್ರಮುಖರಾದ ಆರ್. ಕರುಣಾಮೂರ್ತಿ, ಉಮೇಶ್, ಮಧುಸೂದನ್, ಗುಣಶೇಖರ್, ಭಾಗ್ಯಮ್ಮ, ಟಿ. ಚಂದ್ರೇಗೌಡ, ತಿಮ್ಮೇಗೌಡ, ಎಚ್.ಬಿ ರವಿಕುಮಾರ್, ಎಂ.ಎ ಅಜಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.