ರಾಯರ ಹೆಸರಲ್ಲಿ ಕನ್ನಡಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ಜಗ್ಗೇಶ್

By Suvarna NewsFirst Published Jul 8, 2022, 5:55 PM IST
Highlights

* ಕರ್ನಾಟಕದ ನಾಲ್ವರು ರಾಜ್ಯಸಭಾ ಸಂಸದರು ಶುಕ್ರವಾರ ಪ್ರಮಾಣ ವಚನ
* ರಾಜ್ಯಸಭೆಯಲ್ಲಿ ಮತ್ತೊಮ್ಮೆ ಮೊಳಗಿತು ಕನ್ನಡದ ಡಿಂಡಿಮ..
* ಜಗ್ಗೇಶ್ ಹಾಗು ಲೆಹರ್ ಸಿಂಗ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ

ನವದೆಹಲಿ, (ಜುಲೈ8):  ಕರ್ನಾಟಕದ ನಾಲ್ವರು ರಾಜ್ಯಸಭಾ ಸಂಸದರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸದಸ್ಯ ಚಿತ್ರನಟ ಜಗ್ಗೇಶ್ ಹಾಗು ಲೆಹರ್ ಸಿಂಗ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ರಾಜ್ಯಸಭೆಯಲ್ಲಿ ಕನ್ನಡದ ಡಿಂಡಿಮ ಭಾರಿಸಿದರು.

ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್, ಕಾಂಗ್ರೆಸ್ ಪಕ್ಷದ ಜೈರಾಂ ರಮೇಶ್ ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಂಸತ್ತಿನ  ರಾಜ್ಯಸಭೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಸಮ್ಮುಖದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.

ರಾಯರ ಹೆಸರಲ್ಲಿ ಪ್ರಮಾಣವಚನ 
ರಾಜ್ಯಸಭಾ ನೂತನ ಸದಸ್ಯ ಚಿತ್ರನಟ ಜಗ್ಗೇಶ್  ಕನ್ನಡದಲ್ಲಿ, ತಮ್ಮ ಆರಾದ್ಯ ದೈವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಗ್ಗೇಶ್, ನಾನು ಸಂಸದನಾಗಿ ಇವತ್ತು ಪ್ರಮಾಣ ವಚನವನ್ನು ಮಾತೃಭಾಷೆ ಕನ್ನಡದಲ್ಲಿ, ರಾಯರ ಹೆಸರಲ್ಲಿ ತಗೊಂಡೆ. ಈ ಕ್ಷಣ  ನನಗೆ ಹೆಮ್ಮೆ ಅನ್ನಿಸಿತು. ನಮ್ಮ ಭಾಷೆಗೆ ಎರಡೂವರೆ ಸಾವಿರ ಇತಿಹಾಸ ಇದೆ. ಅಲ್ಲದೇ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ಅನುಭವ ಮಂಟಪ ಕಲ್ಪನೆಯ ಮೂಲಕ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ರು ಅಂಥ ವೇದಿಕೆಯಲ್ಲಿ ನಿಂತು ಪ್ರಮಾಣ ವಚನ ಸ್ವೀರಿಸಿದ್ದು ತುಂಬ ಹೆಮ್ಮೆ ಅನ್ನಿಸಿತ್ತು ಎಂದರು.

ರಾಯರಮಠದಲ್ಲಿ ಜಗ್ಗೇಶ್; ಪ್ರಮಾಣ ವಚನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದ ನಟ

ಇನ್ನು ಮತ್ತೊಬ್ಬ ಸದಸ್ಯ ಲೆಹರ್ ಸಿಂಗ್ ಕೂಡ ದೇವರ ಹೆಸರಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.  ಕಾಂಗ್ರೆಸ್ ಪಕ್ಷದ ಸದಸ್ಯ ಜೈರಾಮ್ ರಮೇಶ್, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಇಂಗ್ಲಿಷ್ ನಲ್ಲಿ, ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 

ಇನ್ನೂ ಪಿಯೂಷ್ ಗೋಯೆಲ್, ಮುಕುಲ್ ವಾಸ್ನಿಕ್, ಸುರೇಂದ್ರ ಕುಮಾರ್, ಲಕ್ಷ್ಮಿಕಾಂತ್ ಬಾಜಪೇಯ್, ನಾಬುರಾವ್ ನಿಶಾದ್, ಘನಶ್ಯಾಮ್ ತಿವಾರಿ ಸೇರಿ 24 ಮಂದಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದರು.

click me!