146 ತಹಸೀಲ್ದಾರ್‌ ದಿಢೀರ್‌ ವರ್ಗಾವಣೆ: ಶಾಸಕರ ಅತೃಪ್ತಿ ಶಮನಕ್ಕೆ ಸರ್ಕಾರ ಯತ್ನ

By Kannadaprabha NewsFirst Published Jul 29, 2023, 2:40 AM IST
Highlights

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವರ್ಗಾವಣೆ ಕುರಿತು ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಶುಕ್ರವಾರ ಬರೋಬ್ಬರಿ 146 ಮಂದಿ ಗ್ರೇಡ್‌ -1 ಹಾಗೂ ಗ್ರೇಡ್‌ -2 ತಹಸೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು (ಜು.29): ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ವರ್ಗಾವಣೆ ಕುರಿತು ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಶುಕ್ರವಾರ ಬರೋಬ್ಬರಿ 146 ಮಂದಿ ಗ್ರೇಡ್‌ -1 ಹಾಗೂ ಗ್ರೇಡ್‌ -2 ತಹಸೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಪೈಕಿ 22 ಮಂದಿ ತಹಸೀಲ್ದಾರ್‌ಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಲು ವರ್ಗಾವಣೆ ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರೇಡ್‌-2 ತಹಸಿಲ್ದಾರ್‌ ಅರುಣ್‌ ಶ್ರೀಖಂಡೆ ಎಂಬುವವರನ್ನು ಜು.24ರಂದು ಗೋಕಾಕ್‌ ತಾಲೂಕು ಕಚೇರಿಗೆ ವರ್ಗಾಯಿಸಿ ಮಾಡಿದ್ದ ನೇಮಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

Latest Videos

Shivamogga: ಕುವೆಂಪು ವಿವಿ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕ

ಒಟ್ಟು ಮೂರು ಪಟ್ಟಿಯಲ್ಲಿ 146 ಮಂದಿ ತಹಸೀಲ್ದಾರ್‌ ವರ್ಗಾವಣೆಯನ್ನು ಮಾಡಿದ್ದು, ಇನ್ನೂ ಹಲವರ ವರ್ಗಾವಣೆ ಪಟ್ಟಿಮುಖ್ಯಮಂತ್ರಿಗಳ ಅನುಮೋದನೆಗೆ ಬಾಕಿ ಇದೆ. ಸಚಿವರು ಹಾಗೂ ಶಾಸಕರ ನಡುವಿನ ತಿಕ್ಕಾಟದಿಂದ ಬಾಕಿ ಉಳಿದಿದ್ದ ತಹಸೀಲ್ದಾರ್‌ ವರ್ಗಾವಣೆ ಪ್ರಕ್ರಿಯೆ ಶಾಸಕಾಂಗ ಪಕ್ಷದ ಸಭೆಯ ಬೆನ್ನಲ್ಲೇ ಆಗಿರುವುದು ಕುತೂಹಲ ಕೆರಳಿಸಿದೆ.

3 ಪಟ್ಟಿಯಲ್ಲಿ ವರ್ಗಾವಣೆ: ಒಟ್ಟು ಮೂರು ಪಟ್ಟಿಯಲ್ಲಿ ವರ್ಗಾವಣೆ ಆದೇಶ ಹೊರಡಿಸಿದ್ದು, ಮೊದಲ ಪಟ್ಟಿಯಲ್ಲಿನ 84 ಮಂದಿ ವರ್ಗಾವಣೆ ಪೈಕಿ 11 ಮಂದಿಯನ್ನು ಹಾಲಿ ಸ್ಥಳದಲ್ಲಿಯೇ ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ. ಎರಡನೇ ಪಟ್ಟಿಯ 46 ಮಂದಿಯ ವರ್ಗಾವಣೆಯಲ್ಲಿ 9 ಮಂದಿಗೆ ಹಾಗೂ ಮೂರನೇ ಪಟ್ಟಿಯಲ್ಲಿನ 16 ಮಂದಿ ವರ್ಗಾವಣೆಯಲ್ಲಿ ಇಬ್ಬರಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದುವರೆಯಲು ಸೂಚಿಸಲಾಗಿದೆ.

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಗೂ ಮುಂದಿನ ಆದೇಶವರೆಗೆ ವರ್ಗಾವಣೆ ಮಾಡಿದ್ದು, ವರ್ಗಾವಣೆಗೊಂಡ ಅಧಿಕಾರಿಗಳು ನೇಮಿಸಲಾದ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸಿಟಿಸಿ ಪ್ರತಿಯನ್ನು ಇ-ಮೇಲ್‌ ಮೂಲಕ ಕಂದಾಯ ಇಲಾಖೆಗೆ ಕಳುಹಿಸಬೇಕು. ಸ್ಥಳ ನಿರೀಕ್ಷಣೆಯಲ್ಲಿರುವ ಎಲ್ಲಾ ಅಧಿಕಾರಿಗಳು ಕಂದಾಯ ಇಲಾಖೆಗೆ ವರದಿ ಮಾಡಿಕೊಳ್ಳಬೇಕು ಎಂದು ವರ್ಗಾವಣೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೊಡಗಿನ 44 ಪ್ರದೇಶಗಳಲ್ಲಿ ಭೂಕುಸಿತ ಸಾಧ್ಯತೆ: ಭಾರತೀಯ ಭೂವಿಜ್ಞಾನ ವರದಿಯಲ್ಲೇನಿದೆ?

ಏಕೆ ವರ್ಗಾವಣೆ?
- ತಮ್ಮಿಷ್ಟದಂತೆ ಅಧಿಕಾರಿಗಳ ವರ್ಗಾವಣೆ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಶಾಸಕರು

- ಸಚಿವರು, ಶಾಸಕರ ನಡುವಿನ ತಿಕ್ಕಾಟದಿಂದಾಗಿ ಬಾಕಿ ಉಳಿದಿದ್ದ ತಹಸೀಲ್ದಾರ್‌ಗಳ ವರ್ಗಾವಣೆ ಪ್ರಕ್ರಿಯೆ

- ಅನುದಾನ, ವರ್ಗಾವಣೆ ವಿಚಾರಕ್ಕೆ ಶಾಸಕಾಂಗ ಸಭೆ ಕರೆಯುವಂತೆ ಬಹಿರಂಗವಾಗಿ ಕೋರಿದ್ದ ಶಾಸಕರು

- ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ, ಡಿಸಿಎಂ ಎದುರು ಶಾಸಕರ ಆಕ್ರೋಶ ಸ್ಫೋಟ

- ಬಹಿರಂಗವಾಗಿ ಪತ್ರ ಬರೆಯಬೇಡಿ, ನಿಮ್ಮೆಲ್ಲಾ ಬೇಡಿಕೆ ಈಡೇರಿಸುತ್ತೇನೆ ಎಂದು ಸಮಾಧಾನಿಸಿದ್ದ ಸಿಎಂ

- ಶಾಸಕರಿಗೆ ಭರವಸೆ ನೀಡಿದ ಮರುದಿನವೇ ಅವರ ಕೋರಿಕೆಯಂತೆ ರಾಜ್ಯಾದ್ಯಂತ ತಹಸೀಲ್ದಾರ್‌ಗಳ ವರ್ಗ

- 3 ಕಂತಿನಲ್ಲಿ ಪ್ರತ್ಯೇಕ ವರ್ಗಾವಣೆ: 1 ಪಟ್ಟಿಯಲ್ಲಿ 84, ಇನ್ನೊಂದರಲ್ಲಿ 46, ಮತ್ತೊಂದರಲ್ಲಿ 16 ಹೆಸರು

- ಶಾಸಕರ ಬೇಡಿಕೆಯಂತೆ ಇನ್ನೊಂದು ವರ್ಗಾವಣೆ ಪಟ್ಟಿಬಾಕಿ: ಶೀಘ್ರದಲ್ಲೇ ಸಿಎ ಒಪ್ಪಿಗೆ ನೀಡುವ ಸಾಧ್ಯತೆ

click me!