ಕಳೆದ ಹದಿನಾರು ತಿಂಗಳಲ್ಲಿ ಚನ್ನಪಟ್ಟಣದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಒಂದು ಹಿಡಿ ಮಣ್ಣು ನೀಡಿಲ್ಲ ಎಂದು ಆರ್.ಅಶೋಕ ಆರೋಪಿಸಿದ್ದಾರೆ.
ರಾಮನಗರ (ಅ.05): ಕಳೆದ ಹದಿನಾರು ತಿಂಗಳಲ್ಲಿ ಚನ್ನಪಟ್ಟಣದ ಅಭಿವೃದ್ಧಿಗೆ ಒಂದು ಹಿಡಿ ಮಣ್ಣು ನೀಡಲು ಕೂಡ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಸರ್ಕಾರದಲ್ಲಿ ಲೂಟಿ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.
ಚನ್ನಪಟ್ಟಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿತ್ತು. ನಾನು ಯಾವುದೇ ಪಕ್ಷದಿಂದಲೂ ಸ್ಪರ್ಧಿಸುತ್ತೇನೆಂದು ಯೋಗೇಶ್ವರ್ ಹೇಳಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿ ಎಂದು ಹೇಳಿದಾಗ, ದಿಢೀರನೆ ಮನಸ್ಸು ಬದಲಿಸಿ ಬಿಜೆಪಿಯಿಂದಲೇ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದರು. ಬಿಜೆಪಿಯಿಂದಲೇ ಸ್ಪರ್ಧಿಸುವ ಬಗ್ಗೆ ಚರ್ಚಿಸುವ ಮುನ್ನವೇ ಮ್ಯಾಚ್ ಫಿಕ್ಸಿಂಗ್ ಆಗಿತ್ತು. ಬಿಜೆಪಿಯಿಂದ ಸ್ಪರ್ಧಿಸಲು ತೀರ್ಮಾನಿಸಿದ್ದರೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಯಾಕೆ ನೀಡಬೇಕಿತ್ತು? ಇವೆಲ್ಲ ಪೂರ್ವ ನಿಯೋಜಿತ. ಕುಮಾರಸ್ವಾಮಿ ಮೋಸ ಮಾಡಿದ್ದಾರೆಂದು ಯೋಗೇಶ್ವರ್ ಆಪಾದನೆ ಮಾಡುತ್ತಿದ್ದಾರೆ. ಇವರೆಲ್ಲರೂ ಮೊದಲೇ ಮಾತಾಡಿಕೊಂಡು ಈಗ ಆರೋಪ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಅಬಕಾರಿ ಇಲಾಖೆ ಭ್ರಷ್ಟಾಚಾರದ ಮೂಲ ಪುರುಷ ಸಚಿವ ತಿಮ್ಮಾಪುರ್; ಅಧ್ಯಕ್ಷ ಗುರುಸ್ವಾಮಿ!
16 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಹಿಡಿ ಮಣ್ಣು ಹಾಕಿಲ್ಲ. ಗ್ಯಾರಂಟಿಗಳಿಂದಾಗಿ ಮಣ್ಣು ಹಾಕಲು ಕೂಡ ಹಣವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಲ್ಲಿಗೆ ಮೊದಲು ನೀರಾವರಿ ಯೋಜನೆ ತಂದರು. ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಹಾಗೂ ಬಸವರಾಜ ಬೊಮ್ಮಾಯಿ ಅನುದಾನ ನೀಡಿದರು. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅವರ ಕೊಡುಗೆ ಏನೂ ಇಲ್ಲ ಎಂದರು.
ಮೊದಲಿಗೆ ನಾನೇ ಅಭ್ಯರ್ಥಿ ಎಂದು ಡಿ.ಕೆ.ಶಿವಕುಮಾರ್ ಹೇಳಿಕೊಂಡರು. ಆದರೆ ಅವರು ಅಭ್ಯರ್ಥಿಯಾಗಲಿಲ್ಲ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ವಹಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ರೈತರ ಬಗ್ಗೆ ಮಾತನಾಡುವುದಾದರೆ ಮೊದಲು ಸಾಲ ಮನ್ನಾ ಮಾಡಲಿ. ರೈತರ ವಿದ್ಯಾಭ್ಯಾಸಕ್ಕೆಂದು ನೀಡಿದ ವಿದ್ಯಾನಿಧಿ ಯೋಜನೆಯನ್ನು ನೀಡಲಿ. ಅದನ್ನು ಬಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ : ಬೆಂಗಳೂರು ಉದ್ಯಮಿ ದಿವಾಳಿ: 70 ಲಾರಿಗಳ ಮಾಲೀಕ ಹುಡುಗೀರ ಶೋಕಿಯಿಂದಾದ ಭಿಕ್ಷುಕ!
ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಎಂದು ಘೋಷಿಸಿ ಅದನ್ನು ನೀಡಿಲ್ಲ. 5 ಕೆಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡುತ್ತಿದ್ದಾರೆ. ರಾಜ್ಯದ ಎಲ್ಲ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿದೆ. ಶಾಲೆ, ದೇವಸ್ಥಾನ ಸೇರಿದಂತೆ ಎಲ್ಲ ಜಾಗಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು ಕೂಡ ಇದರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಈ ಕುರಿತು ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ತಿಳಿಸಿದ್ದು, ಇದೇ ತಿಂಗಳ 7 ರಂದು ಸಮಿತಿ ಭೇಟಿ ನೀಡಲಿದೆ ಎಂದರು.